ಕನ್ನಡಪ್ರಭ ವಾರ್ತೆ ಮದ್ದೂರು
ವಿದ್ಯಾರ್ಹತೆಗೆ ತಕ್ಕಂತೆ ಆಕಾಂಕ್ಷಿತರಿಗೆ ಉದ್ಯೋಗ ದೊರಕಿಸಿಕೊಡುವುದು ಉದ್ಯೋಗ ಮೇಳ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ಮಂಗಳವಾರ ಹೇಳಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮನ್ಮುಲ್ ನಿರ್ದೇಶಕ ಮತ್ತು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಶ್ರೀನಿಧಿ ಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್, ಅಕ್ಷರಂ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಸ್ನೇಹ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ ಮಾತ್ರಕ್ಕೆ ಉದ್ಯೋಗ ಸಿಗುವುದಿಲ್ಲ. ಶಿಕ್ಷಣದಲ್ಲಿ ಕೌಶಲ್ಯಗಳನ್ನು ಕಲಿಯಬೇಕಾಗಿರುವುದು ತುರ್ತು ಅಗತ್ಯ. ನಿರುದ್ಯೋಗಿಗಳು ಉದ್ಯೋಗ ಪಡೆಯುವ ಮೂಲಕ ತಮ್ಮ ಜೀವನದಲ್ಲಿ ಏಳಿಗೆ ಕಂಡು ಕೊಳ್ಳಬೇಕು ಎಂದು ಸಲಹೆ ನೀಡಿದರು.ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಅವರು ತಮ್ಮ ಮಗ ಶ್ರೀನಿಧಿಗೌಡ ಹೆಸರಿನಲ್ಲಿ ಆರೋಗ್ಯ ಶಿಬಿರ, ಮಕ್ಕಳ ಶಿಕ್ಷಣಕ್ಕೆ ಅಗತ್ಯ ಪರಿಕರಗಳ ವಿತರಣೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಾಗಳಿಗೆ ಹತ್ತು ನೀಡಿದ್ದಾರೆ. ಅದೇ ರೀತಿ ತಮ್ಮ ಹುಟ್ಟುಹಬ್ಬವನ್ನು ಯುವ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಉದ್ಯೋಗ ಮೇಳ ಆಯೋಜಿಸಿರುವುದು ಮೆಚ್ಚುಗೆ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜಕಾರಣಿ ಮಂಡಳಿ ಸದಸ್ಯ ಸಿದ್ದರಾಮಯ್ಯ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬೋರಯ್ಯ, ಮಾಜಿ ಸದಸ್ಯರಾದ ಸಾದೊಳಲು ಕೃಷ್ಣೇಗೌಡ, ಮರಿಹೆಗ್ಗಡೆ, ಮನು ಕುಮಾರ್, ಬಿಜೆಪಿ ಯುವ ಘಟಕದ ಅಧ್ಯಕ್ಷ ಹಾಗಲಹಳ್ಳಿ ರಘು, ತಾಲೂಕು ಘಟಕದ ಅಧ್ಯಕ್ಷ ಶಿವದಾಸ್ ಸತೀಶ್, ನಗರ ಘಟಕದ ಅಧ್ಯಕ್ಷ ಮಧು ಕುಮಾರ್, ಉದ್ಯೋಗ ಮೇಳದ ಆಯೋಜಕರಾದ ಕುಮಾರ್ ಉಪ್ಪಾರ ಮತ್ತಿತರರು ಭಾಗವಹಿಸಿದ್ದರು.