ಸಾರಾಂಶ
ತಿಪಟೂರು ತೆಂಗು ಮತ್ತು ಉಂಡೆ ಕೊಬ್ಬರಿಗೆ ಜಿಐ (ಭೌಗೋಳಿಕ ಸೂಚ್ಯಾಂಕ) ಪಡೆಯುವ ಕುರಿತು ನಗರದ ಎಪಿಎಂಸಿ ಕಚೇರಿಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ಜಿಲ್ಲೆಯ ಭೌಗೋಳಿಕ ಪ್ರದೇಶದಲ್ಲಿ ಅತಿ ಹೆಚ್ಚು ತೆಂಗು ಉತ್ಪಾದನೆಯಾಗುವ ಕಲ್ಪತರು ನಾಡಿನ ವಿಶಿಷ್ಟ ಗುಣ ಮತ್ತು ಖ್ಯಾತಿ ಪಡೆದಿರುವ ತಿಪಟೂರು ತೆಂಗು ಮತ್ತು ಉಂಡೆ ಕೊಬ್ಬರಿಗೆ ಜಿಐ (ಭೌಗೋಳಿಕ ಸೂಚ್ಯಾಂಕ) ಪಡೆಯುವ ಕುರಿತು ನಗರದ ಎಪಿಎಂಸಿ ಕಚೇರಿಯಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ನಬಾರ್ಡ್, ಕೃಷಿ ವಿಜ್ಞಾನ ಕೇಂದ್ರ, ರಾಮಯ್ಯ ಸೆಂಟರ್ ಫಾರ್ ಇಂಟಲೆಕ್ಚುವಲ್ ಪ್ರಾವರ್ಟಿ ರೈಟ್ಸ್ ಹಾಗೂ ರೈತ ಉತ್ಪಾದಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸಭೆ ನಡೆಯಿತು. ಈ ವೇಳೆ ರಾಮಯ್ಯ ಸೆಂಟರ್ ಫಾರ್ ಇಂಟಲೆಕ್ಚುವಲ್ ಪ್ರಾವರ್ಟಿ ರೈಟ್ಸ್‌ನ ಸಂಯೋಜಕರಾದ ಪ್ರೊ. ಸಂಗೀತಾ ಮಾತನಾಡಿ, ಜಿಐ ಟ್ಯಾಗನಲ್ಲಿ ಕರ್ನಾಟಕದ ಅತಿ ಹೆಚ್ಚು ಉತ್ಪಾದನೆಗಳಿದ್ದು ಈ ಭಾಗದಲ್ಲಿ 32 ಸಾವಿರಕ್ಕೂ ಹೆಚ್ಚು ತೆಂಗು ಬೆಳೆಗಾರರಿದ್ದಾರೆ. ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ತೆಂಗು ಹಾಗೂ ಕೊಬ್ಬರಿ ಗುಣಮಟ್ಟ ಜಿಐ ಟ್ಯಾಗ್ ಮಾಡಲು ಹಣಕಾಸು ನೆರವು, ಗುಣಮಟ್ಟ ಮುಖ್ಯವಾಗಿದ್ದು ಕೇಂದ್ರ ಸರ್ಕಾರದ ಏಜೆನ್ಸಿ, ತೋಟಗಾರಿಕಾ ಏಜೆನ್ಸಿ ಮಾರುಕಟ್ಟೆ ವಿಭಾಗಕ್ಕೆ ಮಾಹಿತಿ ನೀಡಿ ಜಿಐ ಚಿಹ್ನೆಯನ್ನು ನೋಂದಣಿ ಮಾಡಲಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು. ಸಿಡಿಬಿಯ ಅಧಿಕಾರಿ ಗುರುರಾಜ್ ಮಾತನಾಡಿ, ಜಿಲೆಯಲ್ಲಿ ತೆಂಗು ಅಭಿವೃದ್ಧಿ ಮಂಡಳಿಯಿಂದ ರೈತರಿಗೆ 150 ಕೋಟಿ ರು. ಅನುದಾನ ನೀಡಲಾಗಿದೆ. ತೆಂಗಿನ ಕೊಬ್ಬರಿ ಸಂಗ್ರಹ ಮಾಡಲು ಎರಡು ಕೋಟಿ ಅನುದಾನ ನೀಡಲಾಗಿದೆ. ಜಿಐ ಟ್ಯಾಗ್ ಆಗುವುದರಿಂದ ಗುಣಮಟ್ಟದ ಜೊತೆಗೆ ಮಾರುಕಟ್ಟೆ ಸಹಾಯ ದೊರಕಲಿದೆ ಎಂದರು. ಸಭೆಯಲ್ಲಿ ತಿಪಟೂರು ಉಂಡೆ ಕೊಬ್ಬರಿ ಹಾಗೂ ತೆಂಗು ಮತ್ತು ಉತ್ಪನ್ನಗಳಿಗೆ ಜಿಐ ಪಡೆಯಲು ಬೇಕಾದ ನಿರ್ದಿಷ್ಟ ಮಾನದಂಡಗಳು, ಸಮಯ ಹಾಗೂ ದಾಖಲೆಪತ್ರಗಳ ಪ್ರಕ್ರಿಯೆ, ಹಣಕಾಸು ವ್ಯವಸ್ಥೆ, ಗುಣಮಟ್ಟ, ಮಣ್ಣಿನ ಗುಣಲಕ್ಷಣ, ನೊಂದಾಣಿಯ ಬಗ್ಗೆ ಅಧಿಕಾರಿಗಳು ಹಾಗೂ ರೈತರು ಚರ್ಚಿಸಿದರು. ತಿಪಟೂರು ಉಂಡೆ ಕೊಬ್ಬರಿ ಹಾಗೂ ತೆಂಗಿಗೆ ಜಿಐ ಪಡೆಯಲು ಭೌಗೋಳಿಕವಾಗಿ ಪ್ರದೇಶದಲ್ಲಿ ಉತ್ತಮ ಗುಣಮಟ್ಟವುಳ್ಳ ಬೆಳೆ ಬೆಳೆಯುವ ಪ್ರದೇಶವಾದ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಚನ್ನರಾಯಪಟ್ಟಣ, ಅರಸೀಕೆರೆ ಸ್ಥಳವನ್ನು ಗುರುತಿಸುವಂತೆ ಚರ್ಚಿಸಲಾಯಿತು. ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ, ತೋಟಗಾರಿಕೆ ಇಲಾಖೆ ಅಧಿಕಾರಿ ಚಂದ್ರಶೇಖರ್, ನಬಾರ್ಡ್ ಸಿದ್ದಲಿಂಗಪ್ಪ, ಕೆವಿಕೆಯ ಪದ್ಮನಾಭ್, ರೈತ ಉತ್ಪಾದಕ ಸಂಘದ ಅಧ್ಯಕ್ಷ ದಯಾನಂದ್ ಮಾದಿಹಳ್ಳಿ, ರೈತ ಮುಖಂಡರಾದ ಶಿವಯೋಗಿಸ್ವಾಮಿ, ಶ್ರೀಕಾಂತ್ ಕೆಳಹಟ್ಟಿ, ಬಿಳಿಗೆರೆ ನಾಗೇಶ್, ಪ್ರತಾಪ್‌ಸಿಂಗ್, ಸೇರಿದಂತೆ ರೈತ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಬಾಕ್ಸ್...ಮಾಹಿತಿ ಕೊರತೆಯಿಂದ ಸಭೆಗೆ ಗೈರು32ಸಾವಿರ ತೆಂಗು ಬೆಳೆಗಾರರಲ್ಲಿ ಸಭೆಗೆ ಕೇವಲ 40-50 ರೈತರು ಮಾತ್ರ ಹಾಜರಾಗಿದ್ದು ಮಾಹಿತಿಯ ಕೊರತೆ ಎದ್ದು ಕಾಣುತಿತ್ತು. ಇದರಲ್ಲಿ ಕೆಲವರು ತೆಂಗು ಅಭಿವೃದ್ಧಿ ಮಂಡಳಿಯು ಈ ವಿಚಾರದಲ್ಲಿ ಬೇಡವೆಂದು ವಿರೋಧ ವ್ಯಕ್ತಪಡಿಸಿದರೆ ಬಹುತೇಕ ಮಂದಿ ತೆಂಗು ಅಭಿವೃದ್ಧಿ ಮಂಡಳಿಯು ಜಿಐ ವಿಚಾರವಾಗಿ ಇರಬೇಕು. ಜಿಐ ನಂತರದ ಕೆಲಸ ಕಾರ್ಯಗಳಿಗೆ ಮತ್ತು ರಫ್ತು ವಿಚಾರವಾಗಿ ರೈತರುಗಳಿಗೆ ತುಂಬಾ ಅನುಕೂಲವಿರುವುದರಿಂದ ತೆಂಗು ಅಭಿವೃದ್ಧಿ ಮಂಡಳಿ ಇರಲೇಬೇಕೆಂಬುದು ಬಹುತೇಕರ ವಾದವಾಗಿತ್ತು.
;Resize=(128,128))
;Resize=(128,128))
;Resize=(128,128))