ಒನಕೆ ಓಬವ್ವಳ ಹೋರಾಟ ಮಹಿಳೆಯರಿಗೆ ಮಾದರಿ

| Published : Nov 12 2025, 01:15 AM IST

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಒನಕೆ ಓಬವ್ವ ಭಾವಚಿತ್ರ ಮೆರವಣಿಗೆಗೆ ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಏಳು ಸುತ್ತಿನ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ತನ್ನ ಪ್ರಾಣದ ಹಂಗುತೊರೆದು ಒನಕೆಯಿಂದಲೇ ಶತ್ರುಗಳ ರುಂಡವನ್ನು ಚೆಂಡಾಡಿ ಮದಕರಿ ನಾಯಕರ ಕೋಟೆಯನ್ನು ರಕ್ಷಿಸಿದ ಕೀರ್ತಿ ಒನಕೆ ಓಬವ್ವಳದ್ದು. ಇತಿಹಾಸದಲ್ಲಿ ಒನಕೆ ಓಬವ್ವನ ಹೆಸರು ಸದಾ ಶಾಶ್ವತ, ಕಿತ್ತೂರು ರಾಣಿಚನ್ನಮ್ಮ, ಕೆಳದಿ ಚನ್ನಮ್ಮ, ರಾಣಿ ಹಬ್ಬಕ್ಕ ಇವರ ಹೆಸರು ಎಂದಿಗೂ ಅಜರಾಮರ. ಒನಕೆ ಓಬವ್ವಳ ಹೋರಾಟ ಮಹಿಳಾ ಸಮುದಾಯಕ್ಕೆ ಸ್ಫೂರ್ತಿ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಮಂಗಳವಾರ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಛಲವಾದಿ ಮಹಾಸಭಾ ಸಹಯೋಗದಲ್ಲಿ ನಡೆದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

15ನೇ ಶತಮಾನದಲ್ಲಿಯೇ ಒನಕೆ ಓಬವ್ವ ಈ ನಾಡಿಗೆ ಮಹಿಳೆಯರ ಶೌರ್ಯವನ್ನು ಪರಿಚಯಿಸಿದ್ದಾರೆ. ಮಹಿಳೆಯು ಸಹ ಸದೃಢಳಾಗಿದ್ದು ಶತ್ರುಗಳನ್ನು ನಾಶ ಮಾಡುವ ಶಕ್ತಿ ಹೊಂದಿದ್ದಾಳೆಂದು ತಿಳಿಸಿದರು. ಹೈದರಾಲಿನ ಸೇನೆ ಒನಕೆ ಓಬವ್ವ ಕಿಂಡಿಯ ಮೂಲಕ ಚಿತ್ರದುರ್ಗ ಕೋಟೆಯನ್ನು ಅಕ್ರಮವಾಗಿ ಪ್ರವೇಶಿಸುವ ಸಂದರ್ಭದಲ್ಲಿ ಒನಕೆ ಓಬವ್ವ ದುರ್ಗಿಯ ಅವತಾರವನ್ನು ತಾಳಿ ಶತ್ರುಗಳ ಮಾರಣಹೋಮ ಮಾಡಿದ್ದಾಳೆ. ಚಿತ್ರದುರ್ಗ ಕೋಟೆ ಇರುವಷ್ಟು ಕಾಲವೂ ಒನಕೆ ಓಬವ್ವಳ ಹೆಸರು ಅಜರಾಮರ. ಛಲವಾದಿ ಮಹಾಸಭಾ ಒನಕೆ ಓಬವ್ವಳ ವೃತ್ತ, ಸಮುದಾಯ ಭವನ ನಿರ್ಮಾಣಕ್ಕೆ ಮನವಿ ನೀಡಿದ್ದಾರೆ. ನಿವೇಶನ ಲಭ್ಯವಿದ್ದರೆ ಕೂಡಲೇ ಸಮುದಾಯ ನಿರ್ಮಾಣಕ್ಕೆ ತಮ್ಮ ಅನುದಾನದಲ್ಲಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು. ಓಬವ್ವ ವೃತ್ತ ನಾಮಕಾರಣದ ಬಗ್ಗೆ ಮುಂದಿನ ನಗರಸಭೆ ಸಭೆಯಲ್ಲಿ ಚರ್ಚಿಸಿ ತೀರ್ಮಾಸಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ರೇಹಾನ್‌ಪಾಷ, ವೀರವನಿತೆ ಒನಕೆ ಓಬವ್ವಳಾ ಜಯಂತಿ ಮಹೋತ್ಸವವನ್ನು ಆಚರಿಸಲು ಸಂತೋಷವೆನ್ನಿಸುತ್ತದೆ. ತನ್ನ ಪತಿ ಊಟ ಮಾಡುವ ಸಂದರ್ಭದಲ್ಲಿ ಶತ್ರುಗಳು ಕೋಟೆ ಒಳಗೆ ಪ್ರವೇಶಿಸಿದಾಗ ಪತಿಗೆ ತೊಂದರೆಯಾಗಬಾರದು ಎಂದು ಬಾವಿಸಿ ತಾನೇ ಒನಕೆ ಹಿಡಿದು ಶತ್ರುಗಳನ್ನು ಸದೆಬಡಿದಿದ್ದಾಳೆ. ಒನಕೆ ಓಬವ್ವ ಶೌರ್ಯವನ್ನು ಕಂಡ ಪತಿ ದಿಗ್ಬ್ರಾಂತಾನಾಗಿದ್ದಾನೆ. ಪತ್ನಿ ಒನಕೆ ಓಬವ್ವಳಾ ಸೂಚನೆಯಂತೆ ಕಹಳೆ ಊದಿ ಸೈನ್ಯವನ್ನು ಜಾಗೃತಗೊಳಿಸಿ ಶತ್ರುಗಳ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾದ. ಒನಕೆ ಓಬವ್ವ ಶೌರ್ಯ ಮಾದರಿ ಎಂದರು.

ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷೆ ವಾಣಿ ಶಿವರಾಮ್ ಮಾತನಾಡಿ, ಒನಕೆ ಓಬವ್ವಳ ಹೋರಾಟ ಮತ್ತು ಶೌರ್ಯ ಕೇವಲ ಚಿತ್ರದುರ್ಗದ ಕೋಟೆಗೆ ಮಾತ್ರ ಸೀಮಿತವಲ್ಲ. ಸಮಯೋಚಿತವಾಗಿ ಶತ್ರುಗಳೊಂದಿಗೆ ಹೋರಾಟ ನಡೆಸಿ ಚಿತ್ರದುರ್ಗ ಅರಸರ ಗೌರವವನ್ನು ಕಾಪಾಡುವಲ್ಲಿ ಒನಕೆ ಓಬವ್ವ ಯಶಸ್ವಿಯಾಗಿದ್ದಾಳೆ. ತನ್ನಲ್ಲಿ ಅಡಗಿದ್ದ ದೈರ್ಯ ಮತ್ತು ಸಾಹಸವನ್ನು ತೋರಿಸಿ ಶತ್ರುಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾಳೆ. ಛಲವಾದಿ ಮಹಾಸಭಾ ಒನಕೆ ಓಬವ್ವಳ ಚರಿತ್ರೆಯನ್ನು ನಾಡಿನೆಲ್ಲೆಡೆ ಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಶ್ರೀ ರಾಮರೆಡ್ಡಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಸಂಘದ ಅಧ್ಯಕ್ಷ ಜಯರಾವiಪ್ಪ, ಓಂಕಾರಮೂರ್ತಿ, ಜಿ.ಮಂಜುನಾಥ, ಕೆ.ದೇವರಾಜು, ಮಂಜುಳಮ್ಮ, ಟಿ.ನಿಜಲಿಂಗಪ್ಪ, ಮಂಜುನಾಥ ಮುಂತಾದವರು ಮಾತನಾಡಿದರು.

ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ ಮಾತನಾಡಿ, ಒನಕೆ ಓಬವ್ವಳಾ ಹೋರಾಟದ ಫಲದಿಂದ ಚಿತ್ರದುರ್ಗ ಕೋಟೆ ಶತ್ರುಗಳ ದಾಳಿಯಿಂದ ಪಾರಾಗಿದೆ. ಎಂದಿಗೂ ಯುದ್ದವನ್ನು ಬಯಸದ ಚಿತ್ರದುರ್ಗದ ಮದಕರಿ ನಾಯಕ ಅರಸರಿಗೆ ಶತ್ರುಗಳ ದಾಳಿಯಿಂದ ವಿಚಲಿತರಾಗಿದ್ದರು. ಕೋಟೆ ಒಳಗೆ ನುಗ್ಗಿದ ಶತ್ರುಗಳ ಸಂಹಾರವನ್ನು ಜಾಣ್ಮೆಯಿಂದ ಮಾಡಿದ ಒನಕೆ ಓಬವ್ವಳ ಶೌರ್ಯವನ್ನು ಕಂಡು ದಂಗಾದರು. ಚಿತ್ರದುರ್ಗದ ಗಂಡುಮೆಟ್ಟಿನ ನಾಡಿನಲ್ಲಿ ಇಂತಹ ವೀರಮಹಿಳೆ ಜನಿಸಿದ್ದು ಸಂತಸದ ವಿಷಯವೆಂದರು. ಛಲವಾದಿ ಮಹಾಸಭಾ ಇಂತಹ ಮಹಾನ್‌ಶಕ್ತಿಯನ್ನು ಪಡೆದಿದ್ದು ಮುಂದಿನ ದಿನಗಳಲ್ಲೂ ತಮ್ಮ ಯಾವುದೇ ಸಮಸ್ಯೆ ಇದ್ದರೂ ಒನಕೆ ಓಬವ್ವಳತೆ ಹೋರಾಟ ನಡೆಸಬೇಕು. ವಿಶೇಷವಾಗಿ ಈ ಸಮುದಾಯ ತಮ್ಮ ಮಕ್ಕಳನ್ನು ತಾಂತ್ರಿಕ, ವೈಜ್ಞಾನಿಕ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು.ಕಾರಣ ಗುಣಾತ್ಮಕ ಶಿಕ್ಷಣದಿಂದ ಮಾತ್ರ ನಿಮ್ಮೆಲ್ಲರ ಬದುಕು ಪರಿವರ್ತನೆಹೊಂದಲು ಸಾಧ್ಯವಿದೆ ಎಂದರು.

ಗೌರವಾಧ್ಯಕ್ಷ ಸಿದ್ದಾಪುರದ ಹನುಮಂತಪ್ಪ, ಎನ್.ಬಿ.ಓಬಣ್ಣ, ಎಚ್.ತಿಪ್ಪೇಸ್ವಾಮಿ, ಡಿ.ನರಸಿಂಹಮೂರ್ತಿ, ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಜಿ.ಆರ್.ದಿನಕರ, ಮಹಾಸಭಾದ ಅಧ್ಯಕ್ಷ ರಾಮಕೃಷ್ಣಪ್ಪ, ಕುಶ, ರವೀಂದ್ರ, ಪರಮೇಶ್ವರಪ್ಪ, ಜಯವೀರಚಾರಿ, ಸಿ.ಟಿ.ಶ್ರೀನಿವಾಸ್, ಟಿ.ಮಲ್ಲಿಕಾರ್ಜುನ್, ಎಂ.ಜೆ.ರಾಘವೇಂದ್ರ, ಚಳ್ಳಕೆರೆಯಪ್ಪ, ಕೆ.ವೀರಭದ್ರಪ್ಪ, ಜಿಲ್ಲಾ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ನಾಮಿನಿ ಸದಸ್ಯರಾದ ಅನ್ವರ್‌ಮಾಸ್ಟರ್, ಇಒ.ಎಚ್.ಶಶಿಧರ, ಬಿಇಒ ಕೆ.ಎಸ್.ಸುರೇಶ್, ಬಿಸಿಎಂ ಅಧಿಕಾರಿ ರಮೇಶ್, ಎಸ್ಟಿ ಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜ್, ಸಮಾಜಕಲ್ಯಾಣಾಧಿಕಾರಿ ದೇವಲನಾಯ್ಕ ಮುಂತಾದವರು ಉಪಸ್ಥಿತರಿದ್ದರು.