ರಾಜ್ಯಾಧ್ಯಕ್ಷರನ್ನು ಮೆರೆಸಿದರು; ನೆಲದ ಮೇಲೆ ನೌಕರರು

| Published : Nov 12 2025, 01:15 AM IST

ಸಾರಾಂಶ

ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರನ್ನು ಮೆರೆಸಿದವರು ಜಿಲ್ಲಾ ಸಮಿತಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಲು ದೂರದೂರಿನಿಂದ ಬಂದ ಸಂಘದ ಸದಸ್ಯರು, ನೌಕರರು ಅದರಲ್ಲಿಯೂ ಮಹಿಳಾ ಸದಸ್ಯರು, ನೌಕರರನ್ನು ನೆಲದ ಮೇಲೆ ಕೂರಿಸಿದಂತಹ ಘಟನೆ ಮಂಗಳವಾರ ನಡೆಯಿತು.

ರಾಯಚೂರು: ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರನ್ನು ಮೆರೆಸಿದವರು ಜಿಲ್ಲಾ ಸಮಿತಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಲು ದೂರದೂರಿನಿಂದ ಬಂದ ಸಂಘದ ಸದಸ್ಯರು, ನೌಕರರು ಅದರಲ್ಲಿಯೂ ಮಹಿಳಾ ಸದಸ್ಯರು, ನೌಕರರನ್ನು ನೆಲದ ಮೇಲೆ ಕೂರಿಸಿದಂತಹ ಘಟನೆ ಮಂಗಳವಾರ ನಡೆಯಿತು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ರಾಯಚೂರು ಜಿಲ್ಲಾ ಘಟಕದಿಂದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇಂತಹ ಹಲವು ಎಡವಟ್ಟುಗಳು ಘಟಿಸಿದವು. ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಷಡಾಕ್ಷರಿ ಅವರು ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿ ತಮ್ಮ ಬಲಪ್ರದರ್ಶನ ತೋರಿಸಬೇಕು ಎನ್ನುವ ಗುಂಗಿನಲ್ಲಿ ರಾಜ್ಯಾಧ್ಯಕ್ಷರಿಗೆ ಹಾರಾ ತುರಾಯಿ ಹಾಕಿ, ಡೊಳ್ಳು, ಹೂವಿನ ಮಳೆಯ ಸುರಿಸಿ ಮೆರವಣಿಗೆ ಮಾಡಿ ಮೆರೆಸಿದರು. ಆದರೆ ಸಂಘದ ಸಾಮಾನ್ಯ ಸದಸ್ಯರಿಗೆ ಸರಿಯಾದ ರೀತಿಯ ಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಖುದ್ದು ಸದಸ್ಯರೇ ಜಿಲ್ಲಾ ಘಟಕದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಘನತೆ-ಗೌರವಕ್ಕೆ ಧಕ್ಕೆ: ನೌಕರರಿಗೆ ಓಓಡಿ ಸೌಲಭ್ಯ ನೀಡಿದ ಕಾರಣಕ್ಕೆ ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕು, ಹೋಬಳಿ ಗಳಿಂದ ನೂರಾರು ಸಂಖ್ಯೆಯಲ್ಲಿ ನೌಕರರು ಭಾಗವಹಿಸಿದ್ದರು. ಅದರಲ್ಲಿ ಶಿಕ್ಷಕರು, ಕಂದಾಯ ಸೇರಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರು (ಮುಖ್ಯವಾಗಿ ಮಹಿಳೆಯರು) ಪ್ರಕ್ಷಾಗೃಹದ ಸಭಾಂಗಣದ ನೆಲದ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಇದು ಅವರುಗಳ ಹುದ್ದೆ ಹಾಗೂ ಸ್ಥಾನ ಮಾನದ ಘನತೆ-ಗೌರವಕ್ಕೆ ಧಕ್ಕೆಕೊಟ್ಟಿತು. ನಿರೀಕ್ಷೆಗೂ ಮೀರಿ ನೌಕರರು ಸೇರಿದ್ದರಿಂದ ಸಭಾಗಣದ ಆಸನಗಳು ಭರ್ತಿಯಾಗಿದ್ದರು, ಹೊರಗಡೆ ಎಲ್‌ಇಡಿ ಹಾಗೂ ಆಸನಗಳ ವ್ಯವಸ್ಥೆ ಮಾಡಿದ್ದರು ಅಲ್ಲಿಯೂ ಜಾಗವಿಲ್ಲದ ಕಾರಣಕ್ಕೆ ನೌಕರರು ಸಭಾಂಗಣದ ಮುಂಭಾಗದ ನೆಲೆದಲ್ಲಿ ಕುಳಿತುಕೊಳ್ಳಬೇಕಾಗಿತ್ತು. ನೆಲದ ಮೇಲೆ ಕುಳಿತ ಮಹಿಳಾ ನೌಕರರಿಗೆ ಜಾಗ ಬಿಟ್ಟುಕೊಡುವ ಮನಸ್ಸನ್ನು ಆಸನದ ಮೇಲೆ ಕುಳಿತ ಪುರುಷ ನೌಕರರು ಮಾಡದೇ ಇರುವುದು ಕೆಲವರಿಗೆ ಬೇಸರ ತರಿಸಿದರು. ಸಂಘದ ಜಿಲ್ಲಾ ಸಮಿತಿಯು ಸಾಕಷ್ಟು ಬಲಗೊಂಡಿದೆ. ಮಹಿಳಾ ಸದಸ್ಯರೇ ಹೆಚ್ಚಾಗಿದ್ದು, ಶಕ್ತಿ ಹಾಗೂ ಸಾಮರ್ಥ್ಯ ಹಾಗೂ ಸಂಘಟನೆಗೆ ದುಡಿಯುವವರಿಗೆ ಸಂಘದಲ್ಲಿ ಅವಕಾಶ ಮಾಡಿಕೊಡಲಾಗಿದೆ.

- ಸಿ.ಎಸ್‌.ಷಡಾಕ್ಷರಿ ಸಂಘದ ರಾಜ್ಯಾಧ್ಯಕ್ಷ

ಕಾರ್ಯಕ್ರಮವನ್ನು ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್‌ ಉದ್ಘಾಟಿಸಿದರು. ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ.ಶಂಕರಗೌಡ ಪಾಟೀಲ್‌, ಜಿಲ್ಲಾಧ್ಯಕ್ಷ ಕೃಷ್ಣಾ ಶಾವಂತಗೇರಾ ಸೇರಿ ಪದಾಧಿಕಾರಿಗಳು,ಸದಸ್ಯರು, ನೌಕರರು ಭಾಗವಹಿಸಿದ್ದರು.