ಬಲೂನ್ ಮಾರಲು ಮೈಸೂರಿಗೆ ಬಂದಿದ್ದ ಬಾಲಕಿ ಹತ್ಯೆ

| Published : Oct 10 2025, 01:00 AM IST

ಬಲೂನ್ ಮಾರಲು ಮೈಸೂರಿಗೆ ಬಂದಿದ್ದ ಬಾಲಕಿ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಸೇರಿದಂತೆ ವಿವಿಧೆಡೆಯಿಂದ ದಸರಾದಲ್ಲಿ ಬಲೂನ್ ಮತ್ತಿತರ ವಸ್ತುಗಳ ಮಾರಾಟಕ್ಕಾಗಿ ಬಂದಿದ್ದವರು

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಮೈಸೂರಿಗೆ ಹೆತ್ತವರೊಂದಿಗೆ ಬಲೂನ್ ಮಾರಲು ಬಂದಿದ್ದ 10 ವರ್ಷದ ಬಾಲಕಿಯನ್ನು ಹತ್ಯೆ ಮಾಡಲಾಗಿದೆ. ಬಾಲಕಿ ಶವ ಬಟ್ಟೆಯೇ ಇಲ್ಲದ ರೀತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದ ಬಳಿ ಎರಡು ದಿನಗಳ ಹಿಂದೆಯಷ್ಟೇ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಹಾಡಹಗಲಲ್ಲೇ 6 ಮಂದಿ ಅಡ್ಡಗಟ್ಟಿ ಮಾರಾಕಾಸ್ತ್ರಗಳಿಂದ ಕೊಲೆ ಮಾಡಿ, ನಂತರ ಸಿಕ್ಕಿಬಿದ್ದಿದ್ದರು. ಈ ಪ್ರಕರಣವು ಮಾಸುವ ಮುನ್ನವೇ ಅದೇ ಸ್ಥಳದ ಸಮೀಪದಲ್ಲೇ ಗುರುವಾರ ಬೆಳಗಿನ ಜಾವ ಬಾಲಕಿಯ ಕೊಲೆ ನಡೆದಿದೆ.

ಕಲಬುರಗಿ ಸೇರಿದಂತೆ ವಿವಿಧೆಡೆಯಿಂದ ದಸರಾದಲ್ಲಿ ಬಲೂನ್ ಮತ್ತಿತರ ವಸ್ತುಗಳ ಮಾರಾಟಕ್ಕಾಗಿ ಬಂದಿದ್ದವರು ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ಟೆಂಟ್ ಹಾಕಿ ನೆಲೆಸಿದ್ದರು. ಬುಧವಾರ ರಾತ್ರಿ ಚಾಮುಂಡಿಬೆಟ್ಟದಲ್ಲಿದಲ್ಲಿ ಚಾಮುಂಡೇಶ್ವರಿ ತೆಪ್ಪೋತ್ಸವ ಮುಗಿಸಿ, ಗುರುವಾರ ಬೇರೆ ಕಡೆಗೆ ಹೋಗಲು ಸಿದ್ಧತೆಯಲ್ಲಿದ್ದರು.

ಚಾಮುಂಡಿಬೆಟ್ಟದಲ್ಲಿ ಬುಧವಾರ ರಾತ್ರಿ ವ್ಯಾಪಾರ ಮುಗಿಸಿ ಬಂದ ಕಲಬುರಗಿ ಮೂಲದ 10 ವರ್ಷದ ಬಾಲಕಿ ಹೆತ್ತವರೊಂದಿಗೆ ಮಲಗಿದ್ದಳು. ಗುರುವಾರ ಬೆಳಗಿನ ಜಾವ ಮಳೆ ಬಂದಾಗ ಎಲ್ಲರೂ ಎಚ್ಚರಗೊಂಡಿದ್ದಾರೆ. ಆಗ ಬಾಲಕಿ ಇರಲಿಲ್ಲ. ಅಲ್ಲೆ ಹುಡುಕಾಟ ನಡೆಸಿದಾಗ ಟೆಂಟ್ ನಿಂದ 50 ಮೀಟರ್ ದೂರದಲ್ಲಿರುವ ಮಣ್ಣಿನ ರಾಶಿ ಬಳಿ ಬಾಲಕಿ ಶವ ಬಟ್ಟೆಯಿಲ್ಲದೆ ಪತ್ತೆಯಾಗಿದೆ. ಬಾಲಕಿಯ ಕಿವಿ, ಕೆನ್ನೆ, ಗಲ್ಲ ಕತ್ತರಿಸಲ್ಪಟ್ಟಿತ್ತು.

ದೇಹದ ಮೇಲೆ ಬಟ್ಟೆಯ ಇಲ್ಲದ ರೀತಿಯಲ್ಲಿ ಬಾಲಕಿ ಶವ ಪತ್ತೆಯಾಗಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆಯನ್ನು ಬಾಲಕಿ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಡಿಸಿಪಿಗಳಾದ ಆರ್‌.ಎನ್‌. ಬಿಂದು ಮಣಿ, ಕೆ.ಎಸ್‌. ಸುಂದರ್‌ ರಾಜ್‌ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಸಿದರು. ಹಾಗೆಯೇ, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸಂಬಂಧ ಬಾಲಕಿಯ ಪೋಷಕರು ನೀಡಿರುವ ದೂರಿನಂತೆ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

----

ಬಾಕ್ಸ್...

ಸಿಸಿಟಿವಿ ದೃಶ್ಯಾವಳಿ- ಶಂಕಿತನ ವಶಕ್ಕೆ

ಬಲೂನ್‌ ಮಾರಲು ಕುಟುಂಬದೊಂದಿಗೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಪ್ರಕರಣ ಸಂಬಂಧ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಮೈಸೂರು ತಾಲೂಕು ಸಿದ್ದಲಿಂಗಪುರ ಗ್ರಾಮದ ನಿವಾಸಿ ಕಾರ್ತಿಕ್ (31) ಎಂಬಾತನೇ ಶಂಕಿತ ಆರೋಪಿ. ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದಾಗ ಕಾರ್ತಿಕ್ ಚಲನವಲನಗಳು ಪತ್ತೆಯಾಗಿವೆ. ಈತ ಈ ಹಿಂದೆ ಪ್ರಕರಣವೊಂದರಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು, ಜೈಲಿನಿಂದ ಬಿಡುಗಡೆಯಾದ ಮೇಲೆ ಊರಿಗೆ ಹೋಗದೇ ಮದ್ಯ ಸೇವಿಸುತ್ತಾ ಅಲ್ಲಲ್ಲಿ ತಿರುಗಾಡಿ ಕೊಂಡಿದ್ದ.

ಈತನೇ ಕಲಬುರಗಿ ಮೂಲದ 10 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಿ ದೊಡ್ಡಕೆರೆ ಮೈದಾನದ ಪಾರ್ಕಿಂಗ್‌ ಹಿಂಭಾಗವಿರುವ ಚರಂಡಿ ಬಳಿ ಶವ ಎಸೆದು ಪರಾರಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.