ಸಾರಾಂಶ
- ಪಿಯು ಉಪನ್ಯಾಸಕರಿಗೆ ಗಣತಿಯಿಂದ ವಿನಾಯ್ತಿ- ಗಣತಿ ಮುಗಿದಿದ್ದರೂ 18ರವರೆಗೆ ರಜೆ ಗ್ಯಾರಂಟಿ
---ಇಂದಿನಿಂದ ಖಾಸಗಿಶಾಲೆಗಳು ಆರಂಭಬೆಂಗಳೂರು: ರಾಜ್ಯ ಸರ್ಕಾರ ನಡೆಸುತ್ತಿರುವ ಜನಗಣತಿಯಲ್ಲಿ ಖಾಸಗಿ ಶಾಲೆಯ ಸಿಬ್ಬಂದಿ ಭಾಗವಹಿಸದ ಹಿನ್ನೆಲೆಯಲ್ಲಿ, ಪೂರ್ವ ನಿಗದಿಯಂತೆ ಬುಧವಾರದಿಂದ ರಾಜ್ಯಾದ್ಯಂತ ಖಾಸಗಿ ಶಾಲೆಗಳು ಪುನಾರಂಭವಾಗಲಿದೆ ಎಂದ ಕೃಪಾ ಸಂಘಟನೆ ಸ್ಪಷ್ಟನೆ ನೀಡಿದೆ.
==ಮೃತ ಗಣತಿದಾರರಿಗೆ 20 ಲಕ್ಷ ರು. ಪರಿಹಾರಸಮೀಕ್ಷೆ ನಡೆಸುವ ವೇಳೆ 3 ಜನ ಗಣತಿದಾರರು ಸಾವನ್ನಪ್ಪಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ತಲಾ 20 ಲಕ್ಷ ರು. ಪರಿಹಾರ ಘೋಷಿಸಿದ್ದೇವೆ. ನ್ಯಾ. ನಾಗಮೋಹನ್‌ದಾಸ್ ಆಯೋಗದ ಸಮೀಕ್ಷೆ ವೇಳೆ 15 ಲಕ್ಷ ರು. ನೀಡಲಾಗಿತ್ತು. ಈಗ 20 ಲಕ್ಷ ರು. ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
==ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯಾದ್ಯಂತ ಸೆ.22ರಿಂದ ಶುರುವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅ.7ಕ್ಕೇ ಮುಗಿಯಬೇಕಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಪೂರ್ಣಗೊಂಡಿಲ್ಲ. ಹೀಗಾಗಿ ಸಮೀಕ್ಷೆಗೆ 10 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅ.18ರವರೆಗೆ ದಸರಾ ರಜೆ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.ಅ.7ಕ್ಕೆ ಸಮೀಕ್ಷೆ ಮುಗಿಯಬೇಕಿದ್ದರೂ ಅ.6ರವರೆಗೆ ಶೇ.80 ರಷ್ಟು ಸಮೀಕ್ಷೆ ಮಾತ್ರ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸೂಚನೆ ಮೇರೆಗೆ ಶಿಕ್ಷಣ ಇಲಾಖೆಯು ಅ.8 ರಿಂದ ಅ.12 ರವರೆಗೆ ಮಧ್ಯಾಹ್ನದ ಅವಧಿ ಬಳಿಕ ಸಮೀಕ್ಷೆ ನಡೆಸಲು ಸೋಮವಾರ ಆದೇಶ ಮಾಡಿತ್ತು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸೌಧದಲ್ಲಿ ವರ್ಚುವಲ್ ಸಭೆ ನಡೆಸಿದ್ದು, ಅ.18ರ ಒಳಗಾಗಿ ರಾಜ್ಯಾದ್ಯಂತ ಸಮೀಕ್ಷೆ ಪೂರ್ಣಗೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಸೆಪ್ಟೆಂಬರ್ 22 ರಿಂದ ರಾಜ್ಯಾದ್ಯಂತ ಹಾಗೂ ಅ.4 ರಿಂದ ಬೆಂಗಳೂರು (ಜಿಬಿಎ) ವ್ಯಾಪ್ತಿಯಲ್ಲಿ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಶುರುವಾಗಿದೆ. ಜಿಬಿಎ ಹೊರತುಪಡಿಸಿ ರಾಜ್ಯಾದ್ಯಂತ ಅ.7ಕ್ಕೆ ಸಮೀಕ್ಷೆ ಮುಗಿಯಬೇಕಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಪೂರ್ತಿ ಆಗಿಲ್ಲ. ಕೊಪ್ಪಳದಲ್ಲಿ ಶೇ.97 ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.67 ರಷ್ಟು ಮಾತ್ರ ಆಗಿದೆ. ಇದರ ನಡುವೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಶಿಕ್ಷಕರ ಸಂಘ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶ ಕೇಳಿ ಮನವಿ ಮಾಡಿವೆ. ಈ ಮನವಿ ಪುರಸ್ಕರಿಸಿ ಎಂಟು ಕೆಲಸದ ದಿನಗಳು ಅಂದರೆ ಅ.18 ರವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿದ್ದೇವೆ ಎಂದು ಹೇಳಿದರು.
ಪಿಯು ಉಪನ್ಯಾಸಕರಿಗೆ ವಿನಾಯಿತಿ:ಅ.12ರಿಂದ ದ್ವಿತೀಯ ಪಿಯು ಮಧ್ಯಂತರ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ಸಮೀಕ್ಷೆ ಕಾರ್ಯದಿಂದ ಪಿಯುಸಿ ಉಪನ್ಯಾಸಕರಿಗೆ ವಿನಾಯ್ತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದೀಪಾವಳಿಗೆ ಮೊದಲು ಪೂರ್ಣ- ಸಿಎಂ:ಬೆಂಗಳೂರು ನಗರದಲ್ಲಿ ಸಮೀಕ್ಷೆ ಪ್ರಗತಿ ಬಹಳ ಕಡಿಮೆ ಆಗಿದೆ. ಶೇ.36 ರಷ್ಟು ಸಮೀಕ್ಷೆ ಮಾತ್ರ ಆಗಿದ್ದು, ಸಮೀಕ್ಷೆಯಲ್ಲಿ 6,700 ಶಿಕ್ಷಕರು ಸೇರಿದಂತೆ 21,000 ಮಂದಿ ಗಣತಿದಾರರು ಭಾಗವಹಿಸಿದ್ದಾರೆ. ಅ.20 ರಿಂದ ದೀಪಾವಳಿ ಶುರುವಾಗಲಿದ್ದು, ಅದಕ್ಕೂ ಮೊದಲೇ ಬೆಂಗಳೂರಿನಲ್ಲೂ ಸಮೀಕ್ಷೆ ಪೂರ್ಣಗೊಳಿಸುವುದಾಗಿ ಗಣತಿದಾರರು ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಮೀಕ್ಷೆ ಮುಗಿದ ಜಿಲ್ಲೆಗಳಿಗೂ ರಜೆ:ಕೊಪ್ಪಳದಲ್ಲಿ ಸಮೀಕ್ಷೆ ಶೇ.97 ರಷ್ಟು ಪೂರ್ಣಗೊಂಡಿದೆ. ಅಂತಹ ಜಿಲ್ಲೆಗಳಿಗೂ ರಜೆ 10 ದಿನ ವಿಸ್ತರಣೆ ಬೇಕಾ? ಎಂಬ ಪ್ರಶ್ನೆಗೆ, ರಜೆ ಒಂದೊಂದು ಜಿಲ್ಲೆಗೆ ಒಂದೊಂದು ರೀತಿಯಲ್ಲಿ ನೀಡಲು ಆಗುವುದಿಲ್ಲ. ಕಡಿಮೆ ಆಗಿರುವ ಜಿಲ್ಲೆಗಳಲ್ಲೂ ಶೇ.60 ಕ್ಕೂ ಹೆಚ್ಚು ಪ್ರಗತಿ ಇದೆ. ಹೀಗಾಗಿ ಎಲ್ಲ ಜಿಲ್ಲೆಗಳಿಂದಲೂ ಉತ್ತಮ ಸ್ಪಂದನೆ ಇದೆ. ಹೀಗಾಗಿ ರಜೆ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಗಣತಿದಾರರ ಮೇಲೆ ಹಲ್ಲೆ ಯತ್ನ ಕುರಿತು ಪ್ರತಿಕ್ರಿಯಿಸಿದ ಅವರು, ಗಣತಿದಾರರಿಗೆ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಗಣತಿದಾರರು ಸಮೀಕ್ಷೆಗೆ ಹಿಂದೇಟು ಹಾಕಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ. ದಯಾನಂದ್, ಜಿಬಿಎ ಅಧಿಕಾರಿಗಳು ಹಾಜರಿದ್ದರು.