ಸಾರಾಂಶ
ಒಂದೆಡೆ ಕಳೆದ 2 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ, ಇನ್ನೊಂದೆಡೆ ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾ ನದಿಗೆ 3.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಕಾಣಿಸಿಕೊಂಡಿದೆ
ಬೆಂಗಳೂರು : ಒಂದೆಡೆ ಕಳೆದ 2 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ, ಇನ್ನೊಂದೆಡೆ ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾ ನದಿಗೆ 3.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಕಾಣಿಸಿಕೊಂಡಿದೆ. ಮಳೆ ಸಂಬಂಧಿ ಘಟನೆಗೆ ಇಬ್ಬರು ಬಲಿಯಾಗಿದ್ದು, ನೂರಾರು ಮನೆಗಳು ಕುಸಿದಿವೆ. ಹಲವು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀರು ನಿಂತ ಪರಿಣಾಮ ಸಂಚಾರಕ್ಕೆ ಭಾರೀ ಅಡ್ಡಿಯಾಗಿದೆ.
ಒಟ್ಟಾರೆ 6 ಜಿಲ್ಲೆಯ 22 ತಾಲೂಕುಗಳ 100ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಇನ್ನೊಂದೆಡೆ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಸೋಯಾ, ಉದ್ದು, ಜೋಳ, ತೊಗರಿ, ಕಬ್ಬಿನ ಬೆಳೆಗೆ ಹಾನಿಯಾಗಿದೆ. ಭಾರೀ ಮಳೆ, ಪ್ರವಾಹದಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಸ್ಥಿತಿ ಎದುರಿಸಲು ಅಧಿಕಾರಿಗಳ ಜೊತೆಗೆ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಪೊಲೀಸ್, ಅಗ್ನಿಶಾಮಕ ತಂಡಗಳು ಬೀಡು ಬಿಟ್ಟಿವೆ.
ಭಾರೀ ಪ್ರವಾಹ, ಹಾನಿ:
ಕಲಬುರಗಿಯ 7, ಯಾದಗಿರಿ-4, ಬೀದರ್-5, ರಾಯಚೂರು-2, ವಿಜಯಪುರ-2, ಬಾಗಲಕೋಟೆಯ 22 ತಾಲೂಕುಗಳ 100ಕ್ಕೂ ಅಧಿಕ ಗ್ರಾಮಗಳಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಬಾಗಲಕೋಟೆಯಲ್ಲಿ ನಾಗಪ್ಪ ಲಾತೂರ (11) ಎಂಬ ಬಾಲಕ, ರಾಯಚೂರಲ್ಲಿ ಹಳೆ ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಈಶಮ್ಮ (60) ವೃದ್ಧೆ ಬಲಿಯಾಗಿದ್ದಾರೆ. ಇನ್ನು, ಬೆಳಗಾವಿ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿಯೂ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ, ಚಿಂಚೋಳಿ, ಕಮಲಾಪುರ, ಶಹಾಬಾದ್, ಅಫಜಲಪುರ, ಕಾಳಗಿ ಹಾಗೂ ಆಳಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಹಾಗೂ ಬೋರಿ ನದಿಯಿಂದ 3.50 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಬಿಟ್ಟಿದ್ದರಿಂದ ಜನರು ಸಂಕಷ್ಟದಲ್ಲಿರುವ ಕಾರಣ ಕಲಬುರಗಿ ಜಿಲ್ಲೆಯಾದ್ಯಂತ 41 ಕಾಳಜಿ ತೆರೆಯಲಾಗಿದ್ದು, 4,715 ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ.
ಹೆದ್ದಾರಿಗಳಲ್ಲಿ ನೀರು ನಿಂತ ಪರಿಣಾಮ ಬೆಂಗಳೂರು ಸೇರಿ ವಿವಿಧ ಕಡೆಗಳಿಂದ ಕಲಬುರಗಿಗೆ ಬರುವ ವಾಹನಗಳು ನಿಂತು ಹೋಗಿವೆ. ಗಾಣಗಾಪುರ ದತ್ತ ದರ್ಬಾರ್ ಸನ್ನಿಧಿ ಪ್ರವಾಹಕ್ಕೆ ತುತ್ತಾಗಿದ್ದು, ಅರ್ಚಕರು ಎದೆಮಟ್ಟದ ನೀರಿನಲ್ಲಿ ಪೂಜೆ ಸಲ್ಲಿಸುವಂತಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಭೀಮಾ ನದಿಯ ಶ್ರೀಕಂಗಳೇಶ್ವರ, ಶ್ರೀವೀರಾಂಜನೇಯ ಸ್ವಾಮಿ ದೇಗುಲ, ಸ್ಮಶಾನ ಸಂಪೂರ್ಣ ಮುಳುಗಡೆಯಾಗಿವೆ. ನದಿ ನೀರು ಕೃಷಿ ಜಮೀನುಗಳಿಗೆ ನುಗ್ಗಿದ್ದು, ಸುಮಾರು 1.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಅಂದಾಜಿಸಲಾಗಿದೆ. ರೋಜಾ ಗ್ರಾಮದ ನಡುಗಡ್ಡೆಯಾಗಿದ್ದು, 250 ಹೆಚ್ಚು ಜನರ ಗ್ರಾಮದಲ್ಲಿ ವಾಸವಾಗಿದ್ದಾರೆ. ಗರ್ಭಿಣಿ, ಬಾಣಂತಿಯರು ಹಾಗೂ ವೃದ್ಧರನ್ನು ಬೋಟ್ ಮೂಲಕ ಅಗ್ನಿಶಾಮಕದ ದಳದವರು ಸ್ಥಳಾಂತರಿಸಿದ್ದಾರೆ.
ಬೆಳೆಗೆ ಹಾನಿ: ಬೀದರ್ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ, ಔರಾದ್, ಹುಮನಾಬಾದ, ಕಮಲನಗರ ತಾಲೂಕಿನ ಜನರ ಬದುಕು ದುಸ್ತರವಾಗಿದ್ದು, ಕಟಾವಿಗೆ ಬಂದಿದ್ದ ಸೋಯಾ ಬೆಳೆ ನಿಂತಲ್ಲೆ ಮೊಳಕೆಯೊದಿದ್ದು, ಉದ್ದು, ಜೋಳ , ಕಬ್ಬು ಹಾನಿಯಾಗಿವೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ಹತ್ತಿ, ತೊಗರಿ ಬೆಳೆಗಳು ಹಾನಿಯಾಗಿವೆ. ಕೊಪ್ಪಳ ಜಿಲ್ಲಾದ್ಯಂತ ಬೆಂಬಿಡದೆ ಮಳೆ ಸುರಿದಿದ್ದು, ಹಳ್ಳಗಳು ತುಂಬಿ ಹರಿದಿವೆ. ಕನಕಗಿರಿ ತಾಲೂಕಿನ ಗುಡದೂರು ಗ್ರಾಮದಲ್ಲಿ 21 ಕುರಿಗಳು ಮೃತಪಟ್ಟಿವೆ.
2 ದಿನ ಶಾಲೆ ರಜೆ:
ಹವಾಮಾನ ಇಲಾಖೆ ಮುಂದಿನ 48 ಗಂಟೆಗಳಿಗೂ ಕಲಬುರಗಿ ಜಿಲ್ಲೆಗೆ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು ಅರೆಂಜ್ ಅಲರ್ಟ್ ಜಾರಿಯಲ್ಲಿದೆ. ಸೆ.27 ಮತ್ತು 28ರಂದು ಕಲಬುರಗಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಇನ್ನೆರೆಡು ದಿನಗಳ ಕಾಲ ಮಳೆಯ ಅರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.