ಸಾರಾಂಶ
ಭಾರೀ ಮಳೆಯಿಂದಾಗಿ ಮೂಸಿ ನದಿ ನೀರಿನ ಮಟ್ಟ ಹೆಚ್ಚಿದ್ದು, ಅದರ ಸುತ್ತಮುತ್ತ ವಾಸಿಸುತ್ತಿರುವವರು ಪರದಾಡುವಂತಾಗಿದೆ. ನೀರಿನ ಮಟ್ಟ ಅಧಿಕವಾದ ಕಾರಣ ಜಲಾಶಯದ ಅವಳಿ ಗೇಟ್ ತೆರೆದದ್ದರಿಂದ ತಗ್ಗು ಪ್ರದೇಶದಲ್ಲಿ ವಾಸವಿರುವ ಸುಮಾರು 1000 ಜನ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನೆಲ್ಲಾ ಸ್ಥಳಾಂತರಿಸಲಾಗಿದೆ.
ಹೈದ್ರಾಬಾದ್: ಇಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಮೂಸಿ ನದಿ ನೀರಿನ ಮಟ್ಟ ಹೆಚ್ಚಿದ್ದು, ಅದರ ಸುತ್ತಮುತ್ತ ವಾಸಿಸುತ್ತಿರುವವರು ಪರದಾಡುವಂತಾಗಿದೆ. ನೀರಿನ ಮಟ್ಟ ಅಧಿಕವಾದ ಕಾರಣ ಜಲಾಶಯದ ಅವಳಿ ಗೇಟ್ ತೆರೆದದ್ದರಿಂದ ತಗ್ಗು ಪ್ರದೇಶದಲ್ಲಿ ವಾಸವಿರುವ ಸುಮಾರು 1000 ಜನ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನೆಲ್ಲಾ ಸ್ಥಳಾಂತರಿಸಲಾಗಿದೆ. ಅಲ್ಲಿ ಆಹಾರ ಸೇರಿದಂತೆ ಅಗತ್ಯತೆ ವಸ್ತುಗಳನ್ನು ಒದಗಿಸಲಾಗುತ್ತಿದೆ.
ಸಿಎಂ ರೇವಂತ್ ರೆಡ್ಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಮುನ್ನಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೂಸಿ ನದಿಯಲ್ಲಿ ನೆರೆ ಉಂಟಾಗಿರುವುದರಿಂದ ಅದಕ್ಕೆ ಅಡ್ಡಲಾಗಿರುವ ಚಾದರ್‌ಘಾಟ್‌ನಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಬಸ್‌ಸ್ಟ್ಯಾಂಡ್‌ನಲ್ಲೂ ನೀರು:
ತೆಲಂಗಾಣದ ಮಹಾತ್ಮಾ ಗಾಂಧಿ ಬಸ್ ನಿಲ್ದಾಣಕ್ಕೆ ಪ್ರವಾಹದ ನೀರು ನುಗ್ಗಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ ಹಾಗೂ ಅಲ್ಲಿಂದ ಹೊರಡಬೇಕಿದ್ದ ಬಸ್ಸುಗಳ ಮಾರ್ಗ ಬದಲಿಸಲಾಗಿದೆ. ನಿಲ್ದಾಣಕ್ಕೆ ಬರದಂತೆ ಜನರಿಗೆ ಸೂಚಿಸಲಾಗಿದ್ದು, ಅಲ್ಲಿ ಕಾಯುತ್ತಿದ್ದವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.
ಮರಾಠವಾಡಾದಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ
ಛತ್ರಪತಿ ಸಂಭಾಜಿನಗರ: ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಮರಾಠವಾಡದ ಹಲವೆಡೆ ನಿರಂತರ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಸಾಂಪ್ರದಾ ಯಿಕವಾಗಿ ಬರಪೀಡಿತರ ಪ್ರದೇಶಗಳು ಎಂದು ಕರೆಸಿಕೊಳ್ಳುತ್ತಿದ್ದ ಹಲವು ಹಳ್ಳಿಗಳಲ್ಲಿ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ.
ಬೀಡ್, ಲಾತೂರ್, ಧಾರಾಶಿವ್, ನಾಂದೇಡ್, ಪರಭಣಿ ಮತ್ತು ಹಿಂಗೋಲಿ ಜಿಲ್ಲೆಗಳ ಹಲವಾರು ಭಾಗಗಳಲ್ಲಿ 24 ಗಂಟೆಗಳಲ್ಲಿ 6.5 ಸೆಂ.ಮೀಗಿಂತ ಅಧಿಕ ಮಳೆಯಾಗಿದೆ. ಪರಭಣಿ ಜಿಲ್ಲೆಯ ಗಂಗಖೇಡ್‌ನಲ್ಲಿ ಗರಿಷ್ಠ 14 ಸೆಂ.ನೀ. ಮಳೆ ಸುರಿದಿದೆ.
ಅನೇಕ ಕಡೆ ರಸ್ತೆ ಸಂಪರ್ಕ ಸ್ಥಗಿತವಾಗಿದೆ.ಹಲವು ಕಡೆಗಳಲ್ಲಿ ನದಿಗಳು ಉಕ್ಕೇರಿ ಹರಿಯುತ್ತಿದ್ದು, ತೀರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ತಂಡಗಳು ಸಂಕಷ್ಟದಲ್ಲಿ ಸಿಲುಕಿದ್ದ ಕೆಲವು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಸೆ.20ರಿಂದ ಮರಾಠವಾಡದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದೆ. ಇದುವರೆಗೆ 9 ಮಂದಿ ಬಲಿಯಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.