ಸಾರಾಂಶ
ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ರಾಜ್ಯಗಳ ಕೆಲವು ಭಾಗಗಳಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಹಲವಾರು ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ರಸ್ತೆಗಳು, ಸೇತುವೆಗಳು ಮತ್ತು ಇತರ ರಚನೆಗಳಿಗೆ ಹಾನಿಯಾಗಿದೆ.
ಜಮ್ಮುವಿನಲ್ಲಿ ಒಂದೇ ದಿನ 19 ಸೆಂ.ಮೀ. ಮಳೆಯಾಗಿದ್ದು, ಇದು ಈ ತಿಂಗಳಿನಲ್ಲಿ ಬಿದ್ದ ಶತಮಾನದ ಎರಡನೇ ಅತಿ ಹೆಚ್ಚು ಮಳೆಯಾಗಿದೆ.
ರಾಜಸ್ಥಾನ ತತ್ತರ:
ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಸಂಭವಿಸಿದ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ.
ರಾಜಸ್ಥಾನದ ಕೋಟಾ, ಸವಾಯಿ ಮಾಧೋಪುರ್, ಟೋಂಕ್ ಮತ್ತು ಬುಂಡಿ ಸೇರಿದಂತೆ 8 ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ದೌಸಾ ಒಂದರಲ್ಲೇ 29 ಸೆಂ.ಮೀ. ಮಳೆ ಬಿದ್ದಿದೆ. ರಕ್ಷಣೆಗೆ ಸೇನೆ ಧಾವಿಸಿದೆ.
ಕಿಶ್ತ್ವಾರ್‌ಗೆ ರಾಜನಾಥ್ ಭೇಟಿ:
ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಕಳೆದ ವಾರ ಸಂಭವಿಸಿದ ಮೇಘಸ್ಪೋಟದಲ್ಲಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 16 ಮಂದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಉಪಸ್ಥಿತರಿದ್ದರು.