ಮಳೆ ಕ್ಷೀಣಿಸಿದರೂ, ಪ್ರವಾಹ ಇನ್ನೂ ತಗ್ಗಿಲ್ಲ

| Published : Aug 22 2025, 02:00 AM IST

ಸಾರಾಂಶ

ನೆರೆಯ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಮಳೆ ಅಬ್ಬರ ಕ್ಷೀಣಿಸಿದ್ದರೂ ಜಿಲ್ಲೆಯ ನದಿಗಳ ಪ್ರವಾಹ ಸ್ಥಿತಿ ಮಾತ್ರ ತಗ್ಗಿಲ್ಲ

ಕನ್ನಡಪ್ರಭ ವಾರ್ತೆ ಬೆಳಗಾವಿ

ನೆರೆಯ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಮಳೆ ಅಬ್ಬರ ಕ್ಷೀಣಿಸಿದ್ದರೂ ಜಿಲ್ಲೆಯ ನದಿಗಳ ಪ್ರವಾಹ ಸ್ಥಿತಿ ಮಾತ್ರ ತಗ್ಗಿಲ್ಲ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಜಿಲ್ಲೆಯ ಇತರೆ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.

ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 2.20 ಲಕ್ಷ ಕ್ಯು. ನೀರು ಹರಿದುಬರುತ್ತಿದೆ. ಕೃಷ್ಣಾನದಿ ಉಕ್ಕಿ ಹರಿಯುತ್ತಿದೆ. ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶಕ್ಕೆ ಕೃಷ್ಣಾನದಿ ನೀರು ಸುತ್ತುವರೆದಿದೆ. ತುಂಬು ಗರ್ಭಿಣಿ ಜೊತೆಗೆ ಕೃಷ್ಣಾನದಿ ನಡುಗಡ್ಡೆಯಲ್ಲಿ 40 ಕುಟುಂಬಗಳು ಸಿಲುಕಿವೆ. ನೂರಕ್ಕೂ ಹೆಚ್ಚು ಗ್ರಾಮಸ್ಥರು ಮಕ್ಕಳು ಜಾನುವಾರುಗಳು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಎದೆಯ ಎತ್ತರ ನೀರಿನಲ್ಲಿ ದಾಟಿಕೊಂಡು ಗ್ರಾಮಸ್ಥರು ಹರಸಾಹಸ ಮಾಡಿ ಸಂಚಾರ ಮಾಡುತ್ತಿದ್ದಾರೆ. ಶಾಲಾ ಮಕ್ಕಳು ಜನರ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗ ಬಂದ್ ಆಗಿದೆ. ಬೋಟ್‌ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಯಾವುದೇ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಚಂದೂರ, ಇಂಗಳಿ ಸೇರಿದಂತೆ ಮತ್ತಿತರ ನದಿ ತೀರದ ಗ್ರಾಮಗಳಿಗೂ ಕೃಷ್ಣಾ ನದಿ ನೀರು ನುಗ್ಗಿದೆ. ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯ 12 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ದಾನವಾಡ ದತ್ತವಾಡ, ಸದಲಗಾ ಬೋರಗಾಂವ್, ಸೇತುವೆಗಳು ಸೇರಿದಂತೆ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಜಲಾವೃತವಾಗಿವೆ. ಕಳೆದೆರಡು ದಿನಗಳಿಂದ ಭಾರಿ ಮಳೆಯ ಹಿನ್ನೆಲೆಯಲ್ಲಿ ನದಿಗಳು ತುಂಬಿ ಹರಿಯುತ್ತಿವೆ. ನದಿಗಳ ಭೋರ್ಗರೆತದಿಂದ ನದಿತೀರದ ಗ್ರಾಮಸ್ಥರ ಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ನಗರದ ಜೈ ಕಿಸಾನ್ ತರಕಾರಿ ಸಗಟು ಮಾರುಕಟ್ಟೆ ರಸ್ತೆ ಬಳಿ ತರಕಾರಿ ವಾಹನವೊಂದು ನಿಯಂತ್ರಣ ಪಲ್ಟಿಯಾಗಿ, ತರಕಾರಿ ಚೆಲ್ಲಾಪಿಲ್ಲಿಯಾಗಿದೆ.

ಘಟಪ್ರಭಾ ನದಿ ರೌದ್ರಾವತಾರ:

ಗೋಕಾಕ ತಾಲೂಕಿನ ನದಿತೀರದ ಗ್ರಾಮಗಳಿಗೆ ಘಟಪ್ರಭಾ ನದಿ ನೀರು ನುಗ್ಗಿದೆ. ದಂಡಿನ ಮಾರ್ಗದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ವಸತಿ ಪ್ರದೇಶದಲ್ಲಿ ನೀರು ನುಗ್ಗಿರುವುದರಿಂದ ಗ್ರಾಮಸ್ಥರು ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳತ್ತ ತೆರಳುತ್ತಿದ್ದಾರೆ. ಪ್ರತಿವರ್ಷ ಇದೇ ಪರಿಸ್ಥಿತಿ ಎದುರಾಗುತ್ತಿರುವುದರಿಂದ ಗ್ರಾಮಸ್ಥರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಸರಕು, ಸರಂಜಾಮುಗಳು, ಜಾನುವಾರುಗಳ, ಮಕ್ಕಳೊಂದಿಗೆ ಸಂತ್ರಸ್ತರು ಬೇರೆ ಕಡೆಗೆ ಸ್ಥಳಾಂತರವಾಗುತ್ತಿದ್ದಾರೆ. ಇನ್ನು ರಾತ್ರಿವರೆಗೆ ಮನೆಗಳು ಸಂಪೂರ್ಣವಾಗಿ ಜಲಾವೃತವಾಗುವ ಸಾಧ್ಯತೆಗಳಿವೆ. ಘಟಪ್ರಭಾ ನದಿಗೆ 60 ಸಾವಿರ ಕ್ಯು. ನೀರು ಒಳಹರಿವಿದೆ. ಅಪಾರ ಪ್ರಮಾಣದಲ್ಲಿ ಬೆಳೆದಿರುವ ಕಬ್ಬಿನ ಗದ್ದಿ ಸೇರಿದಂತೆ ಇತರೆ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಹೊಲಗದ್ದೆಗಳು ಇದೀಗ ನದಿಗಳಂತೆ ಭಾಸವಾಗುತ್ತಿವೆ. ಗೋಕಾಕ ನಗರದಲ್ಲಿ ಪ್ರವಾಹ ಪರಿಸ್ಥಿತಿ ಯಥಾಸ್ಥಿತಿಯಲ್ಲಿದ್ದು, ಸಂತ್ರಸ್ತರನ್ನು ಶಾಸಕ ರಮೇಶ ಜಾರಕಿಹೊಳಿ ಭೇಟಿಯಾಗಿ ಸಮಸ್ಯೆ ಆಲಿಸಿದರು.