ಸಾರಾಂಶ
ತಿಪಟೂರು: ಪ್ರಾಮಾಣಿಕತೆ, ಶ್ರದ್ದೆ, ನಿಷ್ಠೆಯಿಂದ ಕೆಲಸ ಮಾಡುವ ಪೌರ ಕಾರ್ಮಿಕರು ತಮ್ಮದೇ ಆದ ಕಾಯಕದಲ್ಲಿ ತೊಡಗಿಸಿಕೊಂಡಿದ್ದರೂ ದುಶ್ಚಟಗಳನ್ನು ಬಿಟ್ಟು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅಕ್ಷರಸ್ಥರನ್ನಾಗಿ ಮಾಡಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ತಿಪಟೂರು: ಪ್ರಾಮಾಣಿಕತೆ, ಶ್ರದ್ದೆ, ನಿಷ್ಠೆಯಿಂದ ಕೆಲಸ ಮಾಡುವ ಪೌರ ಕಾರ್ಮಿಕರು ತಮ್ಮದೇ ಆದ ಕಾಯಕದಲ್ಲಿ ತೊಡಗಿಸಿಕೊಂಡಿದ್ದರೂ ದುಶ್ಚಟಗಳನ್ನು ಬಿಟ್ಟು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅಕ್ಷರಸ್ಥರನ್ನಾಗಿ ಮಾಡಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ನಗರದ ನಗರಸಭಾ ಕಚೇರಿಯ ಆವರಣದಲ್ಲಿ ನಗರಸಭೆ ವತಿಯಿಂದ ಸೋಮವಾರ ನಡೆದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಮಲ ಹೊರುವ ಪದ್ದತಿಯಿತ್ತು. ಇದನ್ನು ನಿಷೇಧ ಮಾಡಬೇಕೆಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅನಿಷ್ಟ ಪದ್ದತಿಯನ್ನು ತೆಗೆದುಹಾಕಿತು. ಬಡವರು, ನಿರ್ಗತಿಕರಿಗೆ ೩ಎಕರೆ ಜಮೀನು ಕೊಡಿಸಿ ಅಲ್ಲಿ 1100 ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು ಶೀಘ್ರವಾಗಿ ಮನೆಗಳನ್ನು ನಿರ್ಮಿಸಿ ವಸತಿ ರಹಿತರಿಗೆ ನಿವೇಶನ ಒದಗಿಸುತ್ತೇನೆ. ಈ ಹಿಂದೆ ಮೊದಲ ಬಾರಿ ನಾನು ಶಾಸಕನಾಗಿದ್ದಾಗ ಪೌರಕಾರ್ಮಿಕರಿಗೆ ಸರ್ಕಾರದಿಂದ ಸಂಬಳ ತಡವಾಗಿದ್ದರಿಂದ ನನ್ನ ಸ್ವಂತ ಹಣದಲ್ಲಿ ಸಂಬಳ ನೀಡಿದ್ದೇನೆ. ನಗರದ ಜನತೆಯ ಆರೋಗ್ಯ, ಸ್ವಚ್ಚತೆ ಕಾಪಾಡುವ ನೀವು ನಿಮ್ಮ ಆರೋಗ್ಯದ ಬಗ್ಗೆ ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಮನೆ ಇಲ್ಲದವರಿಗೆ ವಸತಿ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಹೀಗೆ ಹಲವಾರು ಸರ್ಕಾರದ ಸೌಲಭ್ಯಗಳಿದ್ದು ಪೌರಕಾರ್ಮಿಕರ ನೆರವಿಗೆ ಸದಾ ಇರುವುದಾಗಿ ತಿಳಿಸಿದರು. ಪೌರಕಾರ್ಮಿಕರ ಸಂಘದ ಅಧ್ಯಕ್ಷ ಕಾಂತರಾಜು ಮಾತನಾಡಿ, ತಿಪಟೂರು ನಗರಸಭೆಯಲ್ಲಿ ಒಟ್ಟು 216 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರಿಗೆ ಮಾತ್ರ ಸಂಕಷ್ಟ ಭತ್ಯೆ ಬರುತ್ತಿದ್ದು ಇನ್ನೂ ಕೆಲವರಿಗೆ ಬರುತ್ತಿಲ್ಲ. ಪೌರಕಾರ್ಮಿಕರು ಎಂದರೆ ಎಲ್ಲರೂ ಒಂದೇ. ಸರ್ಕಾರ ಸೌಲಭ್ಯಗಳನ್ನು ಕೊಟ್ಟರೆ ಎಲ್ಲರಿಗೂ ಕೊಡಬೇಕು. ಭೇದ ಭಾವ ಮಾಡಬಾರದು. ಎಲ್ಲಾ ಸಮಾಜಕ್ಕೂ ಸಮುದಾಯ ಭವನಗಳಿದ್ದು ನಮಗೂ ಪೌರಕಾರ್ಮಿಕರ ಕಲ್ಯಾಣ ಭವನವನ್ನು ನಗರದಲ್ಲಿ ಕಟ್ಟಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೌರಾಯುಕ್ತ ವಿಶ್ವೇಶ್ವರಬದರಗಡೆ, ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ, ಸದಸ್ಯರುಗಳಾದ ಸಂಗಮೇಶ್, ಎಂ.ಎಸ್. ಯೋಗೇಶ್, ಸೊಪ್ಪುಗಣೇಶ್, ಟಿ.ಎನ್. ಪ್ರಕಾಶ್, ಆಶಿಫಾಬಾನು, ಭಾರತಿ, ಅಶ್ವಿನಿ, ಜಯರಾಂ, ಶ್ರೀನಿವಾಸ್, ಮಹೇಶ್, ನಹೀಂಪಾಷ, ಓಹಿಲಾ ಸೇರಿದಂತೆ ಪೌರಕಾರ್ಮಿಕರು, ಸಿಬ್ಬಂದಿ ವರ್ಗದವರಿದ್ದರು.