ಈ ಆಸ್ಪತ್ರೆಗೆ ಬಂದ್ರೆ ರೋಗ ಬರೋದು ಗ್ಯಾರಂಟಿ..!

| Published : Oct 01 2024, 01:20 AM IST

ಸಾರಾಂಶ

ಆರೋಗ್ಯ ಕೇಂದ್ರದಲ್ಲಿ ನೌಕರರಿದ್ದರೂ ಆವರಣದಲ್ಲಿ ಅಶುಚಿತ್ವವಿದೆ. ಹಳ್ಳಿಯ ಜನರು ಜ್ವರ, ಅಪಘಾತ ಹಾಗೂ ಇನ್ನಿತರ ಘಟನೆಗಳು ನಡೆದಾಗ ಕೂಡಲೇ ಆಸ್ಪತ್ರೆಗೆ ಬರುವುದು ಸಾಮಾನ್ಯ. ಆದರೆ, ಆಸ್ಪತ್ರೆಯಲ್ಲಿ ತಲೆ, ಮೈಕೈನೋವು, ಕೆಮ್ಮು, ನೆಗಡಿ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾದರೂ ತುರ್ತು ಚಿಕಿತ್ಸೆಯ ಸೌಲಭ್ಯಗಳಿಲ್ಲ.

ಅಣ್ಣೂರು ಸತೀಶ್

ಕನ್ನಡಪ್ರಭ ವಾರ್ತೆ ಭಾರತೀನಗರ

ನೂರಕ್ಕೂ ಹೆಚ್ಚು ಸುತ್ತಮುತ್ತಲ ಗ್ರಾಮಗಳ ಜನರ ಆರೋಗ್ಯ ಕಾಪಾಡಲು ಇರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆಗೆ ವೈದ್ಯರ ಕೊರತೆ ಎದುರಾಗಿದೆ. ಮಾಹಿತಿ ಫಲಕವಿದ್ದರೂ ಸೌಲಭ್ಯವಿಲ್ಲದೆ ರೋಗಿಗಳು ಪರದಾಡುವಂತಾಗಿದೆ.

ಆರೋಗ್ಯ ಕೇಂದ್ರದಲ್ಲಿ ನೌಕರರಿದ್ದರೂ ಆವರಣದಲ್ಲಿ ಅಶುಚಿತ್ವವಿದೆ. ಹಳ್ಳಿಯ ಜನರು ಜ್ವರ, ಅಪಘಾತ ಹಾಗೂ ಇನ್ನಿತರ ಘಟನೆಗಳು ನಡೆದಾಗ ಕೂಡಲೇ ಆಸ್ಪತ್ರೆಗೆ ಬರುವುದು ಸಾಮಾನ್ಯ. ಆದರೆ, ಆಸ್ಪತ್ರೆಯಲ್ಲಿ ತಲೆ, ಮೈಕೈನೋವು, ಕೆಮ್ಮು, ನೆಗಡಿ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾದರೂ ತುರ್ತು ಚಿಕಿತ್ಸೆಯ ಸೌಲಭ್ಯಗಳಿಲ್ಲ.

1970ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಆರಂಭಗೊಂಡ ಈ ಆಸ್ಪತ್ರೆಯಲ್ಲಿ, 2005ರಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಲಾಯಿತು. ಆದರೆ, ಆಸ್ಪತ್ರೆಯಲ್ಲಿ ರಾತ್ರಿ ಪಾಳ್ಯದಲ್ಲಿ ವೈದ್ಯರ ಕೊರತೆ ಕಾಣುತ್ತಿದೆ.

ವಿಶಾಲ ಕಟ್ಟಡದೊಂದಿಗೆ 30 ಹಾಸಿಗೆಯನ್ನೊಳಗೊಂಡ ಆಸ್ಪತ್ರೆ ನಂತರ 60 ಹಾಸಿಗೆಗೆ ಹೆಚ್ಚಾಯಿತು. ಇದಕ್ಕೆ ತಕ್ಕಂತೆ ವೈದ್ಯರನ್ನು ನಿಯೋಜಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ, ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಆಸ್ಪತ್ರೆಯಲ್ಲಿ ಕಾಯಂ ನೇತ್ರ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ರಕ್ತ ಪರೀಕ್ಷಾ ಕೇಂದ್ರದಲ್ಲೂ ಪ್ರಯೋಗ ಶಾಲಾ ತಂತ್ರಜ್ಞರು ಇಲ್ಲ. ಶೂಶ್ರೂಷಕರು (ಸ್ಟಾಫ್‌ನರ್ಸ್) ಕೊರತೆ ಎದುರಾಗಿ ಸಾರ್ವಜನಿಕರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ಸಿಗದೇ ಪ್ರತಿದಿನ ಗಲಾಟೆಗಳು ಕೂಡ ನಡೆಯುತ್ತಿವೆ.

ಹಳ್ಳಿಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆಸ್ಪತ್ರೆ ಸಿಬ್ಬಂದಿ ತೆರಳಿ ಶುಚಿತ್ವದ ಜನರಿಗೆ ಹೇಳುತ್ತಿದ್ದಾರೆ. ಆದರೆ, ಆಸ್ಪತ್ರೆ ಮುಂಭಾಗವೇ ಗುಂಡಿಬಿದ್ದು ನೀರು ನಿಂತಿದ್ದರೂ ವೈದ್ಯರು ಗುಂಡಿ ಮುಚ್ಚಿಸುವ ಗೋಚಿಗೆ ಹೋಗಿಲ್ಲ. ಡಿ.ಗ್ರೋಪ್ ನೌಕರರಲ್ಲಿ 12 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರಿಯಾದ ಶುಚಿತ್ವವಿಲ್ಲ. ಫಾರ್ಮಸಿ ವಿಭಾಗದಲ್ಲೂ 4 ಮಂದಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ವಿಭಾಗದಲ್ಲೂ ಸಿಬ್ಬಂದಿ ಕೊರತೆ ಎದುರಾಗಿ ರೋಗಿಗಳು ಚಿಕಿತ್ಸೆಗೆ ಪರದಾಡುವಂತಾಗಿದೆ.

ರಾತ್ರಿ ಪಾಳ್ಯದಲ್ಲಿ ಗಲಾಟೆಗಳು ಆಗಿಂದಾಗ್ಗೆ ನಡೆಯುತ್ತಿವೆ. ಇಲ್ಲಿಗೆ ಓರ್ವ ಪೊಲೀಸ್ ಪೇದೆ ನಿಯೋಜಿಸಬೇಕು. ಆಸ್ಪತ್ರೆ ಆವರಣದಲ್ಲಿ ಖಾಸಗಿ ವಾಹನಗಳು ಹೆಚ್ಚಾಗಿವೆ. ಹೊರಗಿನಿಂದ ಬಂದವರು ಬೈಕ್ ಮತ್ತು ಕಾರುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ತಮ್ಮ ಕೆಲಸಗಳಿಗೆ ತೆರಳಿ ಹೋಗುತ್ತಿದ್ದಾರೆ. ಆಸ್ಪತ್ರೆ ಆವರಣ ವಾಹನಗಳ ನಿಲ್ದಾಣವಾಗುತ್ತಿದೆ. ಇದಕ್ಕೆ ಕಡಿವಾಣವಿಲ್ಲ.

ಹಗಲು ಮತ್ತು ರಾತ್ರಿ ಪಾಳ್ಯದಲ್ಲಿ ತಜ್ಞ ವೈದ್ಯರು (ಸರ್ಜನ್) ಇಲ್ಲದ ಕಾರಣ ಅಪಘಾತ, ಘರ್ಷಣೆಯಲ್ಲಿ ಗಾಯಗೊಂಡವರು ಹಾಗೂ ವಿಷ ಸೇವಿಸಿದ ರೋಗಿಗಳು ಆಸ್ಪತ್ರೆಗೆ ಕರೆದುಕೊಂಡು ಬಂದರೆ ಸಮರ್ಪಕ ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ಸರ್ಕಾರ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ವರ್ಷಕ್ಕೆ ಲಕ್ಷಾಂತರ ರು. ನೀಡುತ್ತಿದ್ದು, ಈ ಹಣದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಇದರಿಂದ ಸಮುದಾಯ ಆರೋಗ್ಯಕೇಂದ್ರ ಪ್ರಸ್ತುತ ರೋಗಗ್ರಸ್ಥವಾಗಿದೆ.

ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಹಿರಿಯ ವೈದ್ಯಾಧಿಕಾರಿ ಡಾ.ಜಗದೀಶ್, ಆಯುಷ್ ವೈದ್ಯರಾದ ಡಾ.ಸೌಮ್ಯ, ಡಾ.ರವೀಶ್, ಮಕ್ಕಳ ತಜ್ಞೆ ಡಾ.ಮಧುರವಾಣಿ, ಅರವಳಿಕೆ ತಜ್ಞ ಡಾ.ಆನಂದ್, ಪ್ರಶೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಅರ್ಜುನ್ ಮತ್ತು ದಂತ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ ಸಮಸ್ಯೆಗಳ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.

- ಡಾ.ಮೋಹನ್, ಡಿಎಚ್‌ಒ ಮಂಡ್ಯಆಸ್ಪತ್ರೆಯಲ್ಲಿ ಶುಚಿತ್ವದ ಬಗ್ಗೆ ಒಂದುವಾರ ಗಡುವು ಕೊಡಲಾಗಿತ್ತು. ಸ್ವಚ್ಛತೆ ಕಾಪಾಡದ ಹಿನ್ನೆಲೆಯಲ್ಲಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತೇವೆ.

- ಡಾ.ರವೀಂದ್ರ ಬಿ.ಗೌಡ, ಡಿಎಚ್‌ಒ

ಆಸ್ಪತ್ರೆ ಮುಂಭಾಗವೇ ಗುಂಡಿ ಬಿದ್ದು ನೀರು ನಿಂತು ಕಲುಷಿತಗೊಂಡಿದ್ದರೂ ಸಹ ವೈದ್ಯರು ಗಮನ ಹರಿಸುತ್ತಿಲ್ಲ. ಜನರಿಗೆ ಜಾಗೃತಿ ಮೂಡಿಸುವ ವೈದ್ಯರು ತಮ್ಮ ಆಸ್ಪತ್ರೆಯನ್ನು ಶುಚಿಯಾಗಿಟ್ಟುಕೊಳ್ಳುವ ಗೋಜಿಗೆ ಹೋಗಿಲ್ಲ ಎಂಬುದು ಬೇಸರ.

- ಮನು, ಅಣ್ಣೂರು ಸ್ಥಳೀಯರು