ಬ್ರ್ಯಾಂಡ್ ಮೈಸೂರು ಹೆಸರಲ್ಲಿ ಅತ್ಯಾಕರ್ಷಕ ಮಳಿಗೆ ನಿರ್ಮಾಣ

| Published : Oct 01 2024, 01:20 AM IST

ಸಾರಾಂಶ

90 ದಿನಗಳ ಅವಧಿಯ ವಸ್ತು ಪ್ರದರ್ಶನವು ಈ ಬಾರಿ ಆರಂಭದ ದಿನದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುತ್ತದೆ. ಸುಮಾರು 33 ಸರ್ಕಾರಿ ಮಳಿಗೆ ಪೈಕಿ 30 ಮಳಿಗೆಗಳು ದಸರಾ ಉದ್ಘಾಟನೆಯ ದಿನದಂದೇ ಆರಂಭವಾಗಲಿವೆ. ಈ ಹಿಂದೆ ದಸರಾ ಮುಗಿದು ತಿಂಗಳಾದರೂ ಆರಂಭವಾಗುತ್ತಿರಲಿಲ್ಲ. ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಉಸ್ತುವಾರಿಯಲ್ಲಿ ನಡೆದ ಪ್ರಯತ್ನದ ಫಲವಾಗಿ ಎಲ್ಲಾ ಮಳಿಗೆಗಳೂ ಆರಂಭವಾಗುತ್ತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಾಡಹಬ್ಬ ದಸರಾ ವಸ್ತು ಪ್ರದರ್ಶನದ ಅಂಗವಾಗಿ ಈ ಬಾರಿ ಬ್ರ್ಯಾಂಡ್ ಮೈಸೂರು ಹೆಸರಿನಲ್ಲಿ ಅತ್ಯಾಕರ್ಷಕ ಮಳಿಗೆ ನಿರ್ಮಿಸುತ್ತಿದ್ದು, ಅ. 3 ರಂದು ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

90 ದಿನಗಳ ಅವಧಿಯ ವಸ್ತು ಪ್ರದರ್ಶನವು ಈ ಬಾರಿ ಆರಂಭದ ದಿನದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುತ್ತದೆ. ಸುಮಾರು 33 ಸರ್ಕಾರಿ ಮಳಿಗೆ ಪೈಕಿ 30 ಮಳಿಗೆಗಳು ದಸರಾ ಉದ್ಘಾಟನೆಯ ದಿನದಂದೇ ಆರಂಭವಾಗಲಿವೆ. ಈ ಹಿಂದೆ ದಸರಾ ಮುಗಿದು ತಿಂಗಳಾದರೂ ಆರಂಭವಾಗುತ್ತಿರಲಿಲ್ಲ. ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಉಸ್ತುವಾರಿಯಲ್ಲಿ ನಡೆದ ಪ್ರಯತ್ನದ ಫಲವಾಗಿ ಎಲ್ಲಾ ಮಳಿಗೆಗಳೂ ಆರಂಭವಾಗುತ್ತಿವೆ ಎಂದರು.

ಈ ಬಾರಿ ಮೈಸೂರು ದಸರಾ ವಸ್ತು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಬ್ರ್ಯಾಂಡ್ ಮೈಸೂರು ಸಿದ್ಧಪಡಿಸಿದ್ದು, ಮೈಸೂರು ರೇಷ್ಮೆ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ನಂಜನಗೂಡು ರಸಬಾಳೆ, ಮೈಸೂರು ಶ್ರೀಗಂಧದೆಣ್ಣೆ, ,ಸಾಬೂನು ಮತ್ತು ಮೈಸೂರಿನ ಸಾಂಪ್ರದಾಯಿಕ ವರ್ಣಚಿತ್ರಗಳ ಪ್ರದರ್ಶನ, ಇದರ ಜೊತೆಗೆ ಚನ್ನಪಟ್ಟಣ ಬೊಂಬೆಯೂ ಇರಲಿದೆ ಎಂದು ಅವರು ವಿವರಿಸಿದರು.

ಬ್ರ್ಯಾಂಡ್ ಮೈಸೂರಿನ ವಸ್ತುಗಳ ಪ್ರದರ್ಶನದ ಜೊತೆಗೆ ಅವುಗಳ ಉತ್ಪಾದನೆಯ ಮಾದರಿಯನ್ನೂ ಪ್ರದರ್ಶಿಸಲಾಗುತ್ತದೆ. ಉದಾಹರಣೆಗೆ ಮೈಸೂರು ರೇಷ್ಮೆ ಉತ್ಪಾದನೆ ಹೇಗೆ ಮಾಡಲಾಗುತ್ತದೆ ಎಂಬ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಮೈಸೂರು ಅರಮನೆ ಎಂದರೆ ನಾವು ಒಂದೇ ಅರಮನೆಯನ್ನು ಮಾತ್ರ ತೋರಿಸುತ್ತೇವೆ. ಹೆಚ್ಚೆಂದರೆ ಲಲಿತಮಹಲ್ ಅರಮನೆ ತೋರಿಸಬಹುದು. ಆದರೆ ಮೈಸೂರಿನಲ್ಲಿ 9 ಅರಮನೆಗಳಿವೆ. ಅವುಗಳ ಹಿನ್ನೆಲೆಯನ್ನು ತಿಳಿಸಿಕೊಡಲಾಗುವುದು. ಹಾಗೆಯೇ ಗಂಧದಲ್ಲಿ ತಯಾರಿಸಿದ ಮೈಸೂರು ಹಳೆಯ ಅರಮನೆಯ ಮಾದರಿಯೂ ಇರಲಿದೆ ಎಂದು ಅವರು ಹೇಳಿದರು.

ಪ್ಲಾಸ್ಟಿಕ್ ನಿಷೇಧ:

ವಸ್ತು ಪ್ರದರ್ಶನದ ಆವರಣದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗುತ್ತಿದೆ, ಕುಡಿಯುವ ನೀರಿಗೆ ಏರ್ಪೋರ್ಟ್ ಮಾದರಿಯಲ್ಲಿ ವಾಟರ್ ಫೌಂಟೆನ್ ಪ್ಲಾಂಟ್ಗಳನ್ನು ಆರು ಕಡೆ ಅಳವಡಿಸಲಾಗಿದೆ. ಪ್ಲಾಸ್ಟಿಕ್ ಬಾಟಲ್, ಏಕಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಪ್ರವೇಶ ದ್ವಾರದಲ್ಲಿಯೇ ವಶಪಡಿಸಿಕೊಳ್ಳಲು ಸಿಬ್ಬಂದಿ ನಿಯೋಜಿಸಲಾಗಿದೆ. ಬದಲಿಗೆ ಬಟ್ಟೆಯ ಬ್ಯಾಗ್ ನೀಡಲಾಗುವುದು ಎಂದು ಅವರು ತಿಳಿಸಿದರು.

ಇದಕ್ಕಾಗಿ ಗಣಪತಿ ಸಚ್ಚಿದಾನಂದ ಆಶ್ರಮದವರು 1 ಲಕ್ಷ, ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯು 50 ಸಾವಿರ ಬಟ್ಟೆ ಬ್ಯಾಗ್ ನೀಡುತ್ತಿದ್ದಾರೆ. ಇವುಗಳನ್ನು ಬಳಸಿಕೊಂಡು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದರು.

ಕಿನ್ನರ ದಸರಾ:

ಇದೇ ಮೊದಲ ಬಾರಿಗೆ ಭಾರತದಲ್ಲಿ ನೂತನವಾಗಿ ಕಿನ್ನರ ದಸರಾ ಆಯೋಜಿಸುತ್ತಿದ್ದೇವೆ. ಇಂಟರಾಕ್ಟಿವ್ ಪಾರ್ಕ್, ಮಕ್ಕಳ ಮನಸೂರೆಗೊಳಿಸುವ ಈ ದಸರಾದಲ್ಲಿ 3ಎ ಹಾಗೂ ಇಂಟರಾಕ್ಟಿವ್ ಪಾರ್ಕ್ ಇರಲಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶವು ನಲಿವಿನೊಂದಿಗೆ ಕಲಿಕೆಯನ್ನು ಒಳಗೊಂಡಿದ್ದು, ಟಚ್ಅಂಡ್ಫೀಲ್ಎನ್ವೈರ್ನಮೆಂಟ್, ಇನ್ಫಿನಿಟಿ ರೋಸ್ಗಾರ್ಡನ್ ಮತ್ತು ವರ್ಚ್ಯುವಲ್ ಇಂಟರಾಕ್ಟಿವ್ಎನ್ವೈರ್ನಮೆಂಟ್ ಇರಲಿದೆ.

ಹುಲ್ಲಿನ ಅಚ್ಚು ಪ್ರಾಣಿಗಳ ರಚನೆ:

ವಸ್ತುಪ್ರದರ್ಶನದಲ್ಲಿ ಹುಲ್ಲುಹಾಸಿನೊಂದಿಗೆ 3ಡಿ ಜಿ.ಆರ್.ಪಿ, ಎಫ್.ಆರ್.ಪಿ ಮೋಲ್ಡ್ಅಚ್ಚು ಪ್ರಾಣಿಗಳ ರಚನೆ ನಿರ್ಮಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು 22 ಅಡಿಗಳ ಬೃಹತ್ ಫಾಂಡಾ, ಸ್ವಾನದ ಮರಿಗಳು, ಬೆಕ್ಕು, ಡಾಲ್ಫಿನ್, ಪಕ್ಷಿಗಳು ಮತ್ತು ಪುಟ್ಟ ಪುಟ್ಟ ಅಳಿಲನ್ನು ಪ್ರಾಧಿಕಾರದ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಲಾಗುವುದು.

ಪುಷ್ಪಗುಚ್ಛ:

ಜೊತೆಗೆ ಹೂವುಗಳು ತುಂಬಾ ಉತ್ತಮವಾದ ಸುವಾಸನೆ ಹೊಂದಿದ್ದು, ನಾವು ಅವುಗಳನ್ನು ನಮ್ಮ ತೋಟದ ವಿವಿಧ ಸ್ಥಳಗಳಲ್ಲಿ ಬಳಸುತ್ತೇವೆ. ಈ ಬಾರಿ ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗುಲಾಬಿ ಹೂವುಗಳಿಂದ ಹೃದಯದ ಆಕಾರದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗುವುದು. ಬಿದರಿನ ಬುಟ್ಟಿ ಒಳಗೆ ಗೋಪುರದ ಆಕಾರದಲ್ಲಿ ಹೂ ಗುಚ್ಛ ಸ್ಥಾಪನೆ ಮತ್ತು ಬಾತುಕೋಳಿಗಳ ರಚನೆಯನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಜಗ್ಲಿಂಗ್:ಸಾರ್ವಜನಿಕರು ಮತ್ತು ಮಕ್ಕಳನ್ನು ಆಕರ್ಷಿಸಲು ಮೂರ್ನಾಲ್ಕು ಮಂದಿ ತಂಡದವರು ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ಸಲ್ಮಾ ಅವರ ಮೂಲಕ ಪ್ರಯತ್ನಿಸಿ ಮಿಲಿಟರಿ ಅರ್ಮ್ಸ್ ವಸ್ತು ಪ್ರದರ್ಶನ ಆಯೋಜಿಸಲಾಗುತ್ತಿದೆ. 4 ದಿನಗಳವರೆಗೆ ಈ ಪ್ರದರ್ಶನ ಇರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿಇಒ ಕೆ. ರುದ್ರೇಶ್, ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಉಮಾಶಂಕರ್ ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮ:

ವೃತ್ತಿಪರ ಕಲಾವಿದರ ಜತೆಗೆ ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ನ ಕಲಾವಿದರನ್ನು ಕರೆತಂದು ವಾರದಲ್ಲಿ ಒಮ್ಮೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲದೆ ಯುವ ಸಂಭ್ರಮದ ವಿದ್ಯಾರ್ಥಿಗಳಿಂದಲೂ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಅಂಗವಿಕಲರು ಮತ್ತು ವೃದ್ಧರಿಗಾಗಿ ವಿಂಟೇಜ್ ಬ್ಯಾಟರಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರಿಗೆ ಉಚಿತ ಇರುತ್ತದೆ. ಹಿರಿಯರಿಗೆ ನಿರ್ದಿಷ್ಟ ದರ ನಿಗದಿಪಡಿಸಲಾಗಿದೆ. ಎರಡು ಕಾರನ್ನು ಬ್ಯಾಂಕ್ ವತಿಯಿಂದ ನೀಡಿದ್ದರೆ, ಒಂದು ಕಾರನ್ನು ನಾವೇ ಖರೀದಿಸಿದ್ದೇವೆ ಎಂದು ಅವರು ತಿಳಿಸಿದರು.