ಸಾರಾಂಶ
ಬೆಂಗಳೂರು : ಸುದ್ದಿ ಮಾಧ್ಯಮಗಳ ಮಾಹಿತಿಯನ್ನು ಬಳಸಿಕೊಳ್ಳುವ ಹಾಗೂ ಶುಲ್ಕ ಪಾವತಿ ಬಗೆಗೆ ಆಸ್ಟ್ರೇಲಿಯಾ ಮಾದರಿಯಲ್ಲಿ ಭಾರತದಲ್ಲೂ ಕಾನೂನು ಜಾರಿಗೆ ತರುವುದು ಮಾಧ್ಯಮಗಳ ಬೆಳವಣಿಗೆಗೆ ಉಪಯುಕ್ತ ಎಂದು ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರದೇಶದ ಸಂಸದರಾದ ಬ್ರಾಡ್ ಬ್ಯಾಟೆನ್ ಮತ್ತು ರಿಚರ್ಡ್ ರಿಯೋರ್‌ಡನ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ಮತ್ತು ಏಷ್ಯಾ ನೆಟ್ ಸುವರ್ಣ ನ್ಯೂಸ್ ಕಚೇರಿಗೆ ಸೋಮವಾರ ಭೇಟಿ ನೀಡಿ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರೊಂದಿಗೆ ಕನ್ನಡ ಸುದ್ದಿ ಮಾಧ್ಯಮಗಳ ಕಾರ್ಯನಿರ್ವಹಣೆ ಸೇರಿದಂತೆ ಮತ್ತಿತರ ವಿಚಾರಗಳ ಕುರಿತು ಚರ್ಚಿಸಿದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಫೇಸ್‌ಬುಕ್, ಗೂಗಲ್ ನ್ಯೂಸ್‌ನಂತಹ ಡಿಜಿಟಲ್ ಸುದ್ದಿ ಅಗ್ರಿಗೇಟರ್‌ಗಳು ಯಾವುದೇ ಮಾಧ್ಯಮ ಸಂಸ್ಥೆಯ ಸುದ್ದಿಗಳನ್ನು ಬಳಸುವುದಕ್ಕೂ ಮುನ್ನ ಅವುಗಳಿಗೆ ನಿಗದಿತ ಶುಲ್ಕ ಪಾವತಿಸುವಂತಹ ಕಾನೂನು ಜಾರಿಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶುಲ್ಕ ನಿಗದಿ ಸಂಬಂಧಿಸಿದಂತೆ ಮಾಧ್ಯಮ ಸಂಸ್ಥೆಗಳು ಮತ್ತು ಸುದ್ದಿ ಅಗ್ರಿಗೇಟರ್‌ಗಳ ನಡುವೆ ಮಾತುಕತೆ ನಡೆಯುತ್ತಿದೆ. ಈ ರೀತಿಯ ಪ್ರಯತ್ನ ಭಾರತದಲ್ಲೂ ನಡೆಯಬೇಕು ಎಂದು ಹೇಳಿದರು.
ಇದೇ ವೇಳೆ ಕರ್ನಾಟಕದ ಮಾಧ್ಯಮ ಕಾರ್ಯನಿರ್ವಹಣೆ ಕುರಿತು ರವಿ ಹೆಗಡೆ ಅವರೊಂದಿಗೆ ಚರ್ಚಿಸಿದರು. ಜತೆಗೆ ಭಾರತೀಯ ಮಾಧ್ಯಮ ಕ್ಷೇತ್ರದ ಸ್ಥಿತಿಗತಿ, ಡಿಜಿಟಲ್ ಯುಗದಲ್ಲಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಸವಾಲುಗಳು ಮತ್ತು ಅವಕಾಶ ಕುರಿತು ಮಾಹಿತಿ ಪಡೆದು, ಆಸ್ಟ್ರೇಲಿಯನ್ ಮಾಧ್ಯಮ ಹಿನ್ನೆಲೆಯಲ್ಲಿ ವಿಚಾರ ವಿನಿಯಮ ಮಾಡಿಕೊಂಡರು.
ಭಾರತದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿರುವ ಸಂಸದರಾದ ಬ್ರಾಡ್ ಬ್ಯಾಟೆನ್ ಮತ್ತು ರಿಚರ್ಡ್ ರಿಯೋರ್‌ಡನ್ ಅವರು ವಿಧಾನಸೌಧ ವೀಕ್ಷಿಸಿದರು. ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ರಾಜ್ಯದ ಹಿರಿಯ ರಾಜಕಾರಣಿಗಳೊಂದಿಗೆ ಚರ್ಚಿಸಿ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಕುರಿತು ಮಾಹಿತಿ ಪಡೆದರು.
ಹಾಗೆಯೇ, ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಕಾನೂನು ಮತ್ತು ಸುವ್ಯವಸ್ಥೆ ಕಾರ್ಯನಿರ್ವಹಣೆ ವೀಕ್ಷಿಸಿದರು. ರಾಜ್ಯದ ಗ್ರಾಮೀಣ ಬದುಕಿನ ಬಗ್ಗೆ ಅರಿಯಲು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಲಿದ್ದು, ನಂತರ ಹೈದರಾಬಾದ್‌ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಅರಿಯಲಿದ್ದಾರೆ. ಇದಾದ ನಂತರ ಆಸ್ಟ್ರೇಲಿಯಾ ಸಂಸದರು ಶ್ರೀಲಂಕಾಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ.