ಸಿಎಂ, ಡಿಸಿಎಂ, ಸಚಿವರು ಅಹಂಕಾರದ ಮಾತು ಕೈಬಿಡಲಿ: ಕೇಂದ್ರ ಸಚಿವ ಜೋಶಿ

| Published : Oct 20 2025, 01:02 AM IST

ಸಿಎಂ, ಡಿಸಿಎಂ, ಸಚಿವರು ಅಹಂಕಾರದ ಮಾತು ಕೈಬಿಡಲಿ: ಕೇಂದ್ರ ಸಚಿವ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಅಹಂಕಾರದಿಂದ ₹1.30 ಲಕ್ಷ ಕೋಟಿಯ ಎಐ ಗೂಗಲ್‌ ಆಂಧ್ರಕ್ಕೆ ಹೋಗಿದೆ. ಕೈಗಾರಿಕೆಗಳಿಗೆ ಮೂಲಭೂತ ಸೌಲಭ್ಯ ಒದಗಿಸದೆ ಇರುವುದು ಹಾಗೂ ಅವರ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದರಿಂದ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಹುಬ್ಬಳ್ಳಿ:

ಇತ್ತೀಚೆಗೆ ಸಿಎಂ, ಡಿಸಿಎಂ, ಸಚಿವರು ಅಹಂಕಾರದ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಇಂತಹ ಅಹಂಕಾರದ ಹೇಳಿಕೆ ನೀಡುವುದನ್ನು ನಿಲ್ಲಿಸಿ. ಸರ್ಕಾರ ನಡೆಸುವವರಿಗೆ ವಿನಮ್ರತೆ ಮುಖ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅಹಂಕಾರದಿಂದ ₹1.30 ಲಕ್ಷ ಕೋಟಿಯ ಎಐ ಗೂಗಲ್‌ ಆಂಧ್ರಕ್ಕೆ ಹೋಗಿದೆ. ಕೈಗಾರಿಕೆಗಳಿಗೆ ಮೂಲಭೂತ ಸೌಲಭ್ಯ ಒದಗಿಸದೆ ಇರುವುದು ಹಾಗೂ ಅವರ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದರಿಂದ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಕರ್ನಾಟಕ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಹೋಗಲಿದೆ. ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಇಂತಹ ಘಟನೆಗಳು, ಆರೋಪಗಳು ಬಂದಾಗ ಸೌಜನ್ಯದಿಂದ ಮಾತನಾಡಿ ಸಮಸ್ಯೆ ಪರಿಹರಿಸಲಾಗಿದೆ ಎಂದ ಜೋಶಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರು ಅಹಂಕಾರದಿಂದ ಮಾತನಾಡುವುದನ್ನು ಬಿಡಬೇಕೆಂದು ಸಲಹೆ ನೀಡಿದರು.

ಸರ್ಕಾರ ಸಂಪೂರ್ಣ ದಿವಾಳಿ:

ರಾಜ್ಯ ಸರ್ಕಾರ ದಿವಾಳಿಯಾಗಿದ್ದು ವಾಟರ್‌ಮನ್, ಶಿಕ್ಷಕರು ಸೇರಿದಂತೆ ನೌಕರರಿಗೆ ವೇತನ ಕೂಡ ಕೊಡುತ್ತಿಲ್ಲ. ಎಲ್ಲ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಆಡಳಿತ ನಡೆಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ ಜೋಶಿ, ಹುಬ್ಬಳ್ಳಿ-ಧಾರವಾಡದ ರಸ್ತೆಯಲ್ಲಿನ ಧೂಳು ನಿಯಂತ್ರಣ ಹಾಗೂ ಗುಂಡಿ ಮುಚ್ಚಲು ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರಿಗೆ ದುಡ್ಡು ಕೊಟ್ಟಿಲ್ಲ. ಇದರ ಬಗ್ಗೆ ಮಾತನಾಡದ ಉಸ್ತುವಾರಿ ಸಚಿವ ಸಂತೋಷ ಲಾಡ್‌ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ ಎಂದರು.

ದೇಶದಿಂದ ಈರುಳ್ಳಿ ರಫ್ತು ಮಾಡಲು ತೊಂದರೆ ಇಲ್ಲ. ಕೆಲವೊಂದು ದೇಶದಲ್ಲಿ ಈರುಳ್ಳಿ ಇರಬಹುದು, ಹೀಗಾಗಿ ಬೇಡ ಎಂದಿರಬಹುದು. ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿ ಖರೀದಿಗೆ ನಾವು ಸಿದ್ಧವಾಗಿದ್ದೇವೆ. ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಲಿ ಎಂದರು.

ದ್ವೇಷ ತುಂಬಿಕೊಂಡಿದ್ದಾರೆ:

ಸನಾತನ ಬಗ್ಗೆ ಜಾಗ್ರತವಾಗಿರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಜೋಶಿ, ಈ ದೇಶದಲ್ಲಿ ಶಾಂತಿ- ಸೌಹಾರ್ದತೆ ನೆಲೆಸಲು ಹಿಂದೂ ಸಮಾಜ ಕಾರಣ. ಸನಾತನ ಅಂದರೆ ಹಿಂದೂ, ಹಿಂದೂ ಧರ್ಮ ಬಗ್ಗೆ ಅವರಲ್ಲಿ ದ್ವೇಷ ಇದೆ. ಹಿಂದೂ ಸಮಾಜದ ಬಗ್ಗೆ ಸಿದ್ದರಾಮಯ್ಯ ಎಷ್ಟರಮಟ್ಟಿಗೆ ದ್ವೇಷ ತುಂಬಿಕೊಂಡಿದ್ದಾರೆ ಎನ್ನುವುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತದೆ ಎಂದರು.

ಸಿನೀಯರ್ ಖರ್ಗೆ ಮಾದರಿ:

ಸಚಿವ ಪ್ರಿಯಾಂಕ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಬೇಕಾಬಿಟ್ಟೆಯಾಗಿ ಮಾತನಾಡುತ್ತಿದ್ದಾರೆ. ತಮ್ಮ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಗೃಹಮಂತ್ರಿಯಾಗಿದ್ದವರು. ಕೇಂದ್ರದಲ್ಲಿ ಮಂತ್ರಿ, ಪ್ರತಿಪಕ್ಷದ ನಾಯಕರಾಗಿದ್ದಾರೆ. ರಾಜಕೀಯವಾಗಿ ಟೀಕೆ ಮಾಡುತ್ತೇವೆ. ಆದರೆ, ಈ ರೀತಿ ಯಾವತ್ತೂ ಅವರು ಮಾತನಾಡಿಲ್ಲ. ವೈಚಾರಿಕ ಭಿನ್ನಾಭಿಪ್ರಾಯವಿರಲಿ, ಆದರೆ, ಅಸಹಿಷ್ಣುತೆ ಸರಿಯಲ್ಲ. ಸಂಘ ಪ್ರಾರಂಭವಾದಾಗಿನಿಂದ ಪಥಸಂಚಲನ ನಡೆಯುತ್ತಿದೆ. ಸಂಘ ಚಿತ್ತಾಪುರ ಘಟನೆ ಬಗ್ಗೆ ತೀರ್ಮಾನ ಮಾಡುತ್ತದೆ ಎಂದರು.