ಆರ್‌ಎಸ್‌ಎಸ್‌ ಅಂತಹ ಸಂಘಗಳ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ತೊಂದರೆ ಇಲ್ಲ. ಈ ಕುರಿತಾಗಿ ಕೇಂದ್ರ ಸರ್ಕಾರ ಆದೇಶಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಆದೇಶಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಹೀಗಾಗಿ ಲಿಂಗಸೂರಿನಲ್ಲಿ ಪಿಡಿಒ ಅಮಾನತು ಕಾನೂನುಬಾಹಿರ.

ಧಾರವಾಡ : ನಾನು ಸಿಎಂ ಆಗಿದ್ದ ಅವಧಿಯಲ್ಲಿ 2013ರಲ್ಲಿ ಒಂದು ಕಾರ್ಯಕ್ರಮಕ್ಕೆ ಜಾಗ ಕೇಳಿದಾಗ, ಶಿಕ್ಷಣ ಇಲಾಖೆ ಜಾಗೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲವೆಂದು ಹೇಳಲಾಗಿತ್ತು. ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದುಕೊಳ್ಳಬೇಕೆಂದು ಬಿಜೆಪಿ ಸರ್ಕಾರ ಆರ್‌ಎಸ್‌ಎಸ್‌ ಕುರಿತಾಗಿ ಆದೇಶಿಸಿತ್ತು. ಅದನ್ನೇ ನಾವು ಮುಂದುವರಿಸಿದ್ದೇವೆ ಎಂದು ಕಾಂಗ್ರೆಸ್‌ ಸರ್ಕಾರ ಹೇಳುತ್ತಿರುವುದು ಸುಳ್ಳು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕಿಡಿಕಾರಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಪತ್ರದಲ್ಲೇನಿದೆ? ಎನ್ನುವುದನ್ನು ಪ್ರಿಯಾಂಕ ಖರ್ಗೆ ಅವರು ಮೊದಲು ನೋಡಲಿ. ಅವರಿಗೆ ಧೈರ್ಯವಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆ ನಿಷೇಧಿಸಲಿ ನೋಡೋಣ ಎಂದು ಸವಾಲು ಹಾಕಿದರು.

ಚಿತ್ತಾಪುರದಲ್ಲಿ ಪಥಸಂಚಲನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೆಟ್ಟರ್‌, ಪಥಸಂಚಲನದಲ್ಲಿ ಸಾವಿರಾರು ಯುವಕರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ಚಿತ್ತಾಪುರದಲ್ಲಿ ಅದನ್ನು ತಡೆಯುವ ಪ್ರಯತ್ನ ಮಾಡಿದರು. ಧ್ವಜಗಳನ್ನು ಕಿತ್ತು ಹಾಕಿದರು. ಆದರೆ, ಹೈಕೋರ್ಟ್ ಪಥಸಂಚಲನಕ್ಕೆ ಅವಕಾಶ ನೀಡಿದೆ. ಒಂದು ವೇಳೆ ಕಾನೂನುಬಾಹಿರ ಆಗಿದ್ದರೆ ಅನುಮತಿ ಸಿಗುತ್ತಿರಲಿಲ್ಲ. ಪ್ರಿಯಾಂಕ್‌ ಖರ್ಗೆ ಅಹಂಕಾರದಿಂದ ಅಶಾಂತಿ ಆಗುತ್ತಿದೆ. ಹಿಂದೂ ಸಮಾಜ, ಲಿಂಗಾಯತ ಸಮಾಜ ಒಡೆಯುವುದೇ ಸಿದ್ದರಾಮಯ್ಯನವರ ಉದ್ದೇಶ. ಜತೆಗೆ ಅಲ್ಪಸಂಖ್ಯಾತರ ತುಷ್ಟೀಕರಣವೂ ಅವರ ಕರ್ತವ್ಯವಾಗಿದ್ದು, ಇದರಿಂದಾಗಿ ಸಮಾಜ ಹಾಳಾಗುತ್ತಿದೆ. ಮುಖ್ಯಮಂತ್ರಿ ಆದಿಯಾಗಿ ರಾಜ್ಯ ಸರ್ಕಾರ ಆರ್‌ಎಸ್‌ಎಸ್‌ ಎದುರು ಹಾಕಿಕೊಂಡವರು ಭಸ್ಮ ಆಗಲಿದ್ದಾರೆ. ದೀಪ ಆರುವಾಗ ಜೋರಾಗಿ ಉರಿಯುತ್ತದೆ ಎಂಬಂತೆ ಸಿದ್ದರಾಮಯ್ಯ ಸರ್ಕಾರದ ಅಂತಿಮ ಕ್ಷಣ ಬಂದಿದೆ ಎಂದು ಶಾಪ ಹಾಕಿದರು.

ಆರ್‌ಎಸ್‌ಎಸ್‌ ಅಂತಹ ಸಂಘಗಳ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ತೊಂದರೆ ಇಲ್ಲ. ಈ ಕುರಿತಾಗಿ ಕೇಂದ್ರ ಸರ್ಕಾರ ಆದೇಶಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಆದೇಶಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಹೀಗಾಗಿ ಲಿಂಗಸೂರಿನಲ್ಲಿ ಪಿಡಿಒ ಅಮಾನತು ಕಾನೂನುಬಾಹಿರ ಎಂದು ಶೆಟ್ಟರ್‌ ಹೇಳಿದರು.

1966ರಲ್ಲಿ ಪ್ರಧಾನಿ ಜವಾಹರಲಾಲ್‌ ನೆಹರು ಆರ್‌ಎಸ್‌ಎಸ್‌ ಮತ್ತು ಜಮಾತೆ ಇಸ್ಲಾಂ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು ಎಂದು ಆದೇಶಿಸಿದ್ದರು. 1970 ಹಾಗೂ 1980ರಲ್ಲಿ ಎರಡು ಬಾರಿ ಈ ಆದೇಶಕ್ಕೆ ತಿದ್ದುಪಡಿ ಮಾಡಲಾಗಿದೆ. ಕೊನೆಗೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2024ರ ಜು. 9ರಲ್ಲಿ ಸಂಘದ ಚಟುವಟಿಕೆ ಮಾಡುವ ಬಗ್ಗೆ ಆದೇಶಿಸಲಾಗಿದೆ. ಆದ್ದರಿಂದ ಪಿಡಿಒ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.