ಧಾರವಾಡ:
ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿರುವ ಡಾ. ದ.ರಾ. ಬೇಂದ್ರೆ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಈ ಮೂಲಕ ಉತ್ತರ ಕರ್ನಾಟಕಕ್ಕೂ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಸರಜೂ ಕಾಟ್ಕರ್ ಆಗ್ರಹಿಸಿದರು.ಇಲ್ಲಿನ ಸಾಧನಕೇರಿಯಲ್ಲಿನ ಡಾ. ದ.ರಾ. ಬೇಂದ್ರೆ ಭವನದಲ್ಲಿ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ವರಕವಿ ಬೇಂದ್ರೆ ಅವರ 45ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಲ್ಲಿಯವರೆಗೆ 12 ಜನರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದರಲ್ಲಿ ಕುವೆಂಪು ಮತ್ತು ದೇ. ಜವರೇಗೌಡ ಮಾತ್ರ ಸಾಹಿತ್ಯ ಕ್ಷೇತ್ರದಿಂದ ಇದ್ದಾರೆ. ಈಗ ಸರ್ಕಾರವು ಬೇಂದ್ರೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಉತ್ತರ ಕರ್ನಾಟಕವನ್ನು ಗೌರವಿಸಬೇಕೆಂದು ಆಗ್ರಹಿಸಿದರು.ಬೇಂದ್ರೆ ಅವರ ಮನೆಮಾತು ಮರಾಠಿ ಆಗಿದ್ದರೂ ಕನ್ನಡ ಭಾಷೆಗೆ ವಿಶಿಷ್ಠ ಸ್ಥಾನ ಕಲ್ಪಿಸಿದವರು. ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಎಂಬ ಕವಿವಾಣಿಯನ್ನು ನೀಡಿದ ಮಹಾನ್ ಕವಿ ಬೇಂದ್ರೆ. ಅವರ ಜೀವಿತಾವಧಿಯಲ್ಲೇ ನಾವೂ ಬಾಳಿದ್ದೇವೆನ್ನುವುದೇ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಹಿರಿಯ ಸಾಹಿತಿ ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿ, ವರಕವಿ ಬೇಂದ್ರೆ ಅವರು ಕೇವಲ ಕವಿಗಳಾಗಿರದೆ, ನಾಟಕಕಾರರು, ವಿಮರ್ಶಕರು, ಅನುವಾದಕರು, ಸಂಖ್ಯಾಶಾಸ್ತ್ರಜ್ಞರು, ವೇದ-ಉಪನಿಷತ್ತುಗಳ ಅಪಾರ ಜ್ಞಾನ ಹೊಂದಿದ ಬಹುಭಾಷಾ ಪಾಂಡಿತ್ಯ ಹೊಂದಿದ ಸಾಹಿತ್ಯ ತಪಸ್ವಿಗಳಾಗಿದ್ದರು ಎಂದು ಹೇಳಿದರು.
ಬೇಂದ್ರೆ ಅವರ ಕವನಗಳು ನಮಗೆ ಅರ್ಥವಾಗಬೇಕೆಂದರೆ, ಕವನ ರಚನೆಯ ಹಿನ್ನೆಲೆ ತಿಳಿದುಕೊಳ್ಳುವುದು ಮುಖ್ಯ. ಈ ಕಾರ್ಯವನ್ನು ಡಾ. ವಾಮನ ಬೇಂದ್ರೆಯವರು ಬೇಂದ್ರೆಯವರ ಎಲ್ಲ ಕವನಗಳನ್ನು ವಿಂಗಡಿಸಿ ಔದುಂಬರ ಗಾಥೆ ಜೀವನ ಮಹಾಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ಬೇಂದ್ರೆ ಅವರು ನವೋದಯ, ನವ್ಯ, ಪ್ರಗತಿಶೀಲ ಹಾಗೂ ಬಂಡಾಯದಲ್ಲೂ ತಮ್ಮ ಕವನ ರಚಿಸಿಕೊಟ್ಟಿದ್ದಾರೆ. ತಮ್ಮ ಸಾಮರ್ಥ್ಯವನ್ನು ಎಲ್ಲ ಕ್ಷೇತ್ರದಲ್ಲಿ ಅಭಿವ್ಯಕ್ತಿಗೊಳಿಸುವ ಮೂಲಕ ಇವರೊಬ್ಬ ಪ್ರಯೋಗಶೀಲ ಕವಿಗಳಾಗಿದ್ದರು ಎಂದರು. ಧಾರವಾಡದ ಸ್ವರಸಂವಾದಿನಿ ಸಂಗೀತ ವಿದ್ಯಾಲಯದ ಕಲಾತಂಡದವರು ಬೇಂದ್ರೆ ಅವರ ಗೀತೆಗಳ ಗಾಯನವನ್ನು ಪ್ರಸ್ತುತಪಡಿಸಿದರು. ತಬಲಾದಲ್ಲಿ ಡಾ. ಶಿವರಾಜ ಈರಾಪುರಂ, ಹಾರ್ಮೊನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ ಸಾಥ್ ನೀಡಿದರು. ಕಲಾವಿದ ಅನಂತ ದೇಶಪಾಂಡೆ ಅವರು ಬೇಂದ್ರೆ ಅವರ ಅಭಿನಯ ಮಾಡಿದರು.
ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಟ್ರಸ್ಟ್ ಸದಸ್ಯ ಪ್ರೊ. ಶೀಲಾಧರ ಮುಗಳಿ ವಂದಿಸಿದರು. ಟ್ರಸ್ಟ್ ಸದಸ್ಯ ಇಮಾಮ್ಸಾಬ್ ವಲ್ಲೆಪ್ಪನವರ, ಸುರೇಶ ಕುಲಕರ್ಣಿ, ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಡಾ. ಕೃಷ್ಣ ಕಟ್ಟಿ, ಡಾ. ಎಸ್.ಎಂ. ಶಿವಪ್ರಸಾದ್, ಪ್ರೊ. ಸಿ.ಕೆ. ನಾವಲಗಿ, ಬಿ.ಐ. ಈಳಗೇರ, ಸುಮಾ ಕಾಟ್ಕರ್, ಡಾ. ಚಂದ್ರಶೇಖರ ರೊಟ್ಟಿಗವಾಡ, ಡಾ. ಆರ್.ಎಫ್. ನಾಯ್ಕ್, ದೀವಾಕರ ಬಸಾಪೂರ, ಗಣೇಶ ಕದಂ, ಜಯತೀರ್ಥ ಜಹಗೀರದಾರ, ಮಲ್ಲಿಕಾರ್ಜುನ ಚಿಕ್ಕಮಠ, ಮಹಾಂತೇಶ ನರೇಗಲ್, ಎಂ.ವಿ. ಹೊಸಮನಿ, ಎಸ್.ಎಸ್. ಬಂಗಾರಿಮಠ, ಚಂದ್ರಶೇಖರ ಅಮೀನಗಡ, ಬಸವರಾಜ ಚಿಕ್ಕೂರ, ವಿ.ಜೆ. ಬಡಿಗೇರ, ಡಾ. ಸಂತೋಷ ನಾಯಿಕ ಮುಂತಾದವರು ಉಪಸ್ಥಿತರಿದ್ದರು.