ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಾವು ವಡ್ಡರು, ಕಲ್ಲುಗಳ ನಂಬಿಕೊಂಡು ಬದುಕುವವರು. ರಾಜ್ಯದ ಕಲ್ಲುಕ್ವಾರಿಗಳಲ್ಲಿ ಶೇ.50ರಷ್ಟು ವಡ್ಡರ ಸಮುದಾಯಕ್ಕೆ ಮೀಸಲಿಟ್ಟು ಕಲ್ಲು ಭಾಗ್ಯ ಕೊಟ್ಟರೆ ರಾಯಲ್ಟಿ ಮೂಲಕ ನಾವು ಖಜಾನೆ ತುಂಬಿಸುತ್ತೇವೆಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.ಭೋವಿ ಗುರುಪೀಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ದೀಕ್ಷಾ ರಜತ ಮಹೋತ್ಸವದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಇಂದು ಶ್ರೀಮಂತರಿಗೆ ಸುಲಭವಾಗಿ ಕ್ರಷರ್ ಸಿಗುತ್ತಿದೆ. ಕಲ್ಲು ವಡ್ಡರಿಗೆ ಸಮಸ್ಯೆ ಆಗಿದೆ. ಕುಲಕಸಬು ಮಾಡುವವರಿಗೆ ಅವಕಾಶ ಮಾಡಿಕೊಡುವುದು ಸರ್ಕಾರದ ಕರ್ತವ್ಯವೆಂದರು.
ಭೋವಿ ಸಮುದಾಯ ರಟ್ಟೆ ನಂಬಿ ಬದುಕುತ್ತಿದ್ದು ಕಾಯಕ ಮತ್ತು ಶ್ರಮಿಕ ವರ್ಗವಾಗಿದೆ. ಅಕ್ಷರದಿಂದ ವಂಚಿತರಾದ ಈ ಸಮುದಾಯ ಮೇಲೆತ್ತಲು ತಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಶಿಕ್ಷಣದ ತಳಹದಿ ಮೇಲೆ ಸಂಘಟನೆ ಮಾಡಲು ಉದ್ದೇಶಿಸಲಾಗಿದೆ. ಭೋವಿ ಸಮಾಜದ ಯುವಕರು ಶಿಕ್ಷಣವಂತರಾಗಿ ಅಧಿಕಾರಿ ವರ್ಗದ ಸಂಖ್ಯೆ ಹೆಚ್ಚಬೇಕು. ಶಾಲೆಯಲ್ಲಿ ಶಿಕ್ಷಕ, ಆಸ್ಪತ್ರೆಯಲ್ಲಿ ವೈದ್ಯ, ಕೋರ್ಟ್‌ನಲ್ಲಿ ವಕೀಲ, ನಿರ್ಮಾಣ ಇಲಾಖೆಯಲ್ಲಿ ಇಂಜಿನಿಯರ್, ಭೋವಿಗಳು ಬಂದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ. ಸ್ವಯಂ ಚಾಕರಿಕೆ ಮಾಡಿಕೊಂಡು ಬಂದ ಸಮುದಾಯ ನಮ್ಮದಾಗಿದ್ದು ಗ್ರಾಪಂ ನಿಂದ ಸಂಸದರಾಗುವ ತನಕ ಸಮಾಜ ಸಂಘಟಿತವಾಗಿದೆ. ಕಾರ್ಯಕ್ರಮದಲ್ಲಿ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಜನ ಸೇರಿರುವುದು ಭೋವಿು ಸಮಾಜ ಸದೃಢವಾಗಿರುವುದರ ಸಂಕೇತ. ಇದು ಗರ್ವ ಪಡುವ ವಿಚಾರವೆಂದರು.ಸಂಘಟನೆ ಗಟ್ಟಿಯಾದ ನಂತರವೇ ಭೋವಿ ಅಭಿವೃದ್ಧಿ ನಿಗಮ, ಕೆಪಿಎಸ್‌ಸಿ ಸದಸ್ಯತ್ವ, ಆಯಕಟ್ಟಿನ ಜಾಗದಲ್ಲಿ ಅಧಿಕಾರಿಗಳ ಸರ್ಕಾರ ನಿಯೋಜನೆ ಮಾಡಿತು. ಧಾರ್ಮಿಕತೆ ತಳಹದಿ ಮೇಲೆ ಸಮಾಜದ ಅಭಿವೃದ್ಧಿ ತೊಡಗಿದ್ದೇನೆ. ಈ ಸಮುದಾಯಕ್ಕೆ ಮೂಢನಂಬಿಕೆ, ಕಂದಾಚಾರ ಶಾಪವಾಗಿತ್ತು. ಇಂದು ಎಷ್ಟೋ ಗ್ರಾಮಗಳ ಮೌಢ್ಯರಹಿತ, ದುಶ್ಚಟ ಮುಕ್ತ ಗ್ರಾಮಗಳನ್ನಾಗಿ ಮಾಡಿದ್ದೇವೆ. ಇದು ಗುರು ಪೀಠದ ಗುರಿಯಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದರೆ ಸಮುದಾಯದ ಅಭ್ಯುದಯ ಸಾಧ್ಯವಾಗುತ್ತದೆ ಎಂದು ಶ್ರೀಗಳು ಹೇಳಿದರು.
ಮಂತ್ರಾಲಯದ ಸುಬುದೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ ಭೋವಿ ಜನಾಂಗ ಶ್ರಮ ಜೀವಿಗಳು, ಶೋಷಣೆಗೆ ಒಳಪಟ್ಟವರು. ಇಂತಹ ಜನಾಂಗವನ್ನು ಬಿಟ್ಟು ಬೇರೆ ಯಾವ ಸಮಾಜವೂ ಏನು ಮಾಡಲು ಆಗಲ್ಲ. ಭೋವಿ ಸಮುದಾಯದ ಏಳಿಗೆಗೆ ಗುರುಪೀಠ ಸ್ಥಾಪಿಸಿಕೊಂಡು ಕಳೆದ 25 ವರ್ಷಗಳಿಂದಲೂ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಸುಲಭದ ಕೆಲಸವಲ್ಲ. ಅನ್ನ, ಅಕ್ಷರ, ಆರ್ಥಿಕ ಸಂಕಷ್ಟ ಪರಿಹರಿಸುವಲ್ಲಿ ದೃಢ ಸಂಕಲ್ಪ ತೊಟ್ಟಿದ್ದಾರೆ. ಸ್ವಾಮೀಜಿಯವರದು ಉತ್ತಮ ವ್ಯಕ್ತಿತ್ವ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರ ಯೋಜನೆ ಹಾಕಿಕೊಂಡು ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಮಂತ್ರಾಲಯ ಜಾತ್ಯಾತೀತ ಕ್ಷೇತ್ರ ಹಿಂದೂ, ಮುಸಲ್ಮಾನ, ಕ್ರಿಸ್ತರು ನಮ್ಮಲ್ಲಿಗೆ ಬರುತ್ತಾರೆ. ಮುಂದಿನ ತಿಂಗಳು ನಡೆಯುವ ಜಾತ್ರೆಗೆ ಬನ್ನಿ ಎಂದು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರು.ದೀಕ್ಷಾ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಮೈಸೂರು ಮಹಾರಾಜರು ಮೊದಲು ಭೋವಿಗಳಿಗೆ ಮೀಸಲಾತಿ ಕೊಟ್ಟರು. ನಂತರ ಡಿ.ದೇವರಾಜ ಅರಸುರವರು ಮೀಸಲಾತಿ ನೀಡಿದರು. ಕೆಪಿಸಿಸಿ ಮೆಂಬರ್, ವಿಧಾನಪರಿಷತ್‍ಗೆ ನಾಮನಿರ್ದೇಶನ, ನಮ್ಮ ಜನಾಂಗದವರು ಸಂಸದರಾಗಬೇಕೆಂಬ ಬೇಡಿಕೆಯಿಟ್ಟಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲವನ್ನು ಈಡೇರಿಸಿದ್ದಾರೆ. ನಿಮ್ಮ ಜೊತೆ ನಾವಿರುತ್ತೇವೆ. ನಮ್ಮ ಮಠಕ್ಕೆ ವಿಶೇಷ ಅನುದಾನ ಕೊಡಿ. ಭೋವಿ ಅಭಿವೃದ್ಧಿ ನಿಗಮಕ್ಕೆ ಐದು ನೂರು ಕೋಟಿ ರು ಮೀಸಲಿಡಿ ಎಂದು ಮನವಿ ಮಾಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೋವಿ ಸಮುದಾಯವನ್ನು ಶೈಕ್ಷಣಿಕ, ಸಾಮಾಜಿಕವಾಗಿ ಜಾಗೃತಿಗೊಳಿಸಿದ ಫಲವಾಗಿ ದೀಕ್ಷಾ ರಜತ ಮಹೋತ್ಸವ ಆಚರಿಸಲು ಸಾಧ್ಯವಾಗಿದೆ. ಭೋವಿಗಳು ಕಲ್ಲು ಹೊಡೆಯುವ ಕೆಲಸವನ್ನೇ ಮಾಡಬೇಕೆಂದಿಲ್ಲ. ಸಂವಿಧಾನದಲ್ಲಿ ಸಿಕ್ಕಿರುವ ಅವಕಾಶ ಬಳಸಿಕೊಂಡು ಶಿಕ್ಷಣವಂತರಾಗಬೇಕು. ಪ್ರತಿಭಾವಂತ ಮಕ್ಕಳಿಗೆ ಪುರಸ್ಕರಿಸುತ್ತಿರುವುದು ಪ್ರೇರಣೆಯಾದಂತಿದೆ. ಮುಂದಿನ ವರ್ಷಗಳಲ್ಲಿ ಇದು ಇನ್ನು ಹೆಚ್ಚಬೇಕು. ಸಂವಿಧಾನದ ಮೂಲಕ ಜಾಗೃತರಾಗಿ. ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಗಳು ಸಿದ್ದರಾಗಿದ್ದಾರೆಂದರು.ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಭೋವಿಗಳು ಕೆರೆ ಕಟ್ಟೆ ಕಟ್ಟುವುದು ಕಲ್ಲು ಹೊಡೆಯುವುದು ಕುಲ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ದುಶ್ಚಟಗಳಿಂದ ದೂರವಿರುವಂತೆ ಸ್ವಾಮೀಜಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಹದಿನಾಲ್ಕನೆ ವಯಸ್ಸಿನಲ್ಲಿಯೇ ಸ್ವಾಮೀಜಿಯಾಗಿ ದೀಕ್ಷೆ ಪಡೆದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ 25 ವರ್ಷಗಳನ್ನು ಕಳೆದಿದ್ದಾರೆ. ಜನಾಂಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕುಲ ಕಸುಬಿಗೆ ಕೊಡಲಿ ಪೆಟ್ಟು ಬಿದ್ದಿದೆ. ಕಲ್ಲು ಹೊಡೆಯಲು ಅವಕಾಶ ಮಾಡಿಕೊಡಿ. ಅರಣ್ಯ ಇಲಾಖೆಯವರ ಕಿರುಕುಳ ತಪ್ಪಿಸಿ ಭೋವಿ ಅಭಿವೃದ್ಧಿ ನಿಗಮಕ್ಕೆ ಐದು ನೂರು ಕೋಟಿ ರು. ಅನುದಾನ ಕೊಡಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದರು.
ಪುಲಕೇಶಿ ನಗರ ಶಾಸಕ ಎ.ಸಿ.ಶ್ರೀನಿವಾಸ್, ಪಾವಗಡ ಶಾಸಕ ವಿ. ವೆಂಕಟೇಶ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರುಗಳಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರಪಪ್ಪಿ, ಟಿ.ರಘುಮೂರ್ತಿ, ಕೋಲಾರ ಸಂಸದ ಮಲ್ಲೇಶ್‍ಬಾಬು, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ಬಾಬು, ನ್ಯಾಯವಾದಿ ಶಂಕರಪ್ಪ, ನಾರಾಯಣಸ್ವಾಮಿ, ನೇರಲಗುಂಟೆ ರಾಮಪ್ಪ, ಸೀತಾರಾಮಪ್ಪ ಸೇರಿದಂತೆ ಭೋವಿ ಸಮಾಜದ ಅನೇಕ ಮುಖಂಡರುಗಳು ವೇದಿಕೆಯಲ್ಲಿದ್ದರು.