ಕುಮಟಾ: ತಾಲೂಕಿನ ಹೊಸಾಡದ ಅಮೃತಧಾರ ಗೋಬ್ಯಾಂಕಿನ ಆವಾರದಲ್ಲಿ ಫೆ. ೧೯ರಿಂದ ೨೨ರ ವರೆಗೆ ನಾಲ್ಕು ದಿನಗಳ ಕಾಲ ಗೋಸಂಧ್ಯಾ ಹಾಗೂ ಆಲೆಮನೆ ಹಬ್ಬ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಮುರಲೀಧರ ಪ್ರಭು ತಿಳಿಸಿದರು.

೨೦೦೬ರಲ್ಲಿ ರಾಘವೇಶ್ವರ ಶ್ರೀಗಳ ಕನಸಿನ ಕೂಸಾಗಿ ಸ್ಥಾಪನೆಗೊಂಡಿದ್ದ ಅಮೃತಧಾರಾ ಗೋ ಬ್ಯಾಂಕಿನಲ್ಲಿ ಈಗ ೩೦೦ರಷ್ಟು ಗೋವುಗಳಿವೆ. ಕಳೆದ ೨೦ ವರ್ಷಗಳಿಂದ ಸಾವಿರಾರು ಗೋವುಗಳನ್ನು ಸಂರಕ್ಷಿಸಿ, ಪಾಲಿಸಿದ್ದು ಮಾತ್ರವಲ್ಲದೇ ಸಾವಿರಾರು ರೈತರಿಗೆ ಗೋಬ್ಯಾಂಕಿನಿಂದ ಗೋವುಗಳನ್ನು ನೀಡಿದೆ. ಗೋಶಾಲೆಯ ನಿರ್ವಹಣೆಗೆ ಪ್ರತಿ ತಿಂಗಳು ೮ ಲಕ್ಷಕ್ಕೂ ಹೆಚ್ಚು ಖರ್ಚಿದೆ. ಎಲ್ಲ ಬಗೆಯ ಭಾರತೀಯ ತಳಿಯ ಗೋವುಗಳನ್ನು ಇಷ್ಟು ವರ್ಷಗಳಿಂದ ಸಂರಕ್ಷಿಸಿದ ಸಾಧನೆಯ ಹಿಂದೆ ಗೋಪ್ರೇಮಿಗಳ, ದಾನಿಗಳ, ಜನತೆಯ ಬೆಂಬಲ ಕಾರಣವಾಗಿದೆ. ಮುಂದಿನ ಪೀಳಿಗೆಗೆ ಗೋಪಾಲನೆ ಹಾಗೂ ಅಲೆಮನೆ ಸಂಸ್ಕೃತಿಯ ಮಹತ್ವವನ್ನು ಬಿತ್ತರಿಸುವ ಉದ್ದೇಶವೂ ಇಲ್ಲಿದೆ ಎಂದರು.

ಗೋಸಂಧ್ಯಾ ಸಮಿತಿಯ ಅರುಣ ಹೆಗಡೆ ಮಾತನಾಡಿ, ೨೦೧೩ರಿಂದ ಗೋಸಂಧ್ಯಾ ಕಾರ್ಯಕ್ರಮ ಆರಂಭಿಸಿದ್ದು, ಕಳೆದ ಕೆಲವು ವರ್ಷಗಳಿಂದ ಅಲೆಮನೆ ಹಬ್ಬವನ್ನೂ ಜೋಡಿಸಲಾಗಿದೆ. ಕಾಮಧೇನು ಪೂಜೆ, ಗೋಪೂಜೆ, ಗೋಗ್ರಾಸಸೇವೆ, ಹವನಗಳು ಮುಂತಾದವುಗಳ ಜತೆಗೆ ಸಾವಯವ ಆರೋಗ್ಯಭರಿತ ಕಬ್ಬಿನಹಾಲು, ಬೆಲ್ಲದ ಸವಿಖಾದ್ಯಗಳು, ಬಾಳೆದಿಂಡು, ಪಪ್ಪಾಯಿ, ದೇಸಿ ಆಹಾರೋತ್ಸವ, ಹಳ್ಳಿಮನೆ ತಿಂಡಿಗಳ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿವೆ ಎಂದರು.

ಗೋಬ್ಯಾಂಕಿನ ಜಿ.ಎಸ್. ಹೆಗಡೆ ಮಾತನಾಡಿ, ಅಮೃತಧಾರಾ ಗೋಬ್ಯಾಂಕಿನ ನಿರ್ವಹಣೆಯ ಶೇ. ೭೦ರಷ್ಟು ವೆಚ್ಚವನ್ನು ಅಲೆಮನೆ ಹಬ್ಬ, ಯಕ್ಷಗಾನ ಮುಂತಾದ ಹಲವಾರು ಕಾರ್ಯಕ್ರಮಗಳು ಮತ್ತು ದಾನಿಗಳ ಮೂಲಕ ಸಂಗ್ರಹಿಸಿ ಉಳಿತಾಯ ಮಾಡಬೇಕಾದ ಅನಿವಾರ್ಯತೆ ಇದೆ. ಸಮಾಜಕ್ಕೆ ಗೋವಿನ ಋಣ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವ ಅವಕಾಶ ಇಲ್ಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್.ವಿ. ಹೆಗಡೆ ಭದ್ರನ್, ಮಧುಕರ ಹೆಗಡೆ ಇದ್ದರು.

ಕಾರ್ಯಕ್ರಮಗಳು: ಪ್ರತಿನಿತ್ಯ ಸಂಜೆ ೫.೩೦ರಿಂದ ಕಾರ್ಯಕ್ರಮಗಳು ಶುರುವಾಗಲಿದ್ದು, ಫೆ. ೧೯ರಂದು ಸಂಜೆ ಗೋವಿನ ಮಹತ್ವ ಸಾರುವಲ್ಲಿ ಮಹತ್ವದ ಪಾತ್ರ ವಹಿಸಿದ ವೈದಿಕರ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ, ಕುಚಿಪುಡಿ ನೃತ್ಯ, ಪುಣ್ಯಕೋಟಿ ತಾಳಮದ್ದಲೆ, ಫೆ. ೨೦ರಂದು ಹಿರಿಯ ನಾಗರಿಕರ ಸಮಾವೇಶ ಹಾಗೂ ದೀಪನೃತ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ, ಫೆ. ೨೧ರಂದು ಗೋಸಂಧ್ಯಾ ಕಾರ್ಯಕ್ರಮ, ಗೋಬ್ಯಾಂಕಿನ ಸಾಮಾಜಿಕ ಜಾಲತಾಣದ ಯುವಬಳಗದ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ, ಫೆ. ೨೨ರಂದು ಮಾತೆಯರ ಸಮಾವೇಶ, ಮಕ್ಕಳ ಸಂತೆ, ಭಜನ್ ಸಂಧ್ಯಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ಕಬ್ಬಿನಗಾಣಗಳ ನಡುವೆ ಸಜ್ಜುಗೊಳಿಸಿದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕೃಷಿ ಸಹಾಯಕ ಉಪಕರಣಗಳು, ಗವ್ಯೋತ್ಪನ್ನ, ಕರಕುಶಲ ಉತ್ಪನ್ನ, ಕಬ್ಬಿನ ಹಾಲಿನ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.