ಹೊನ್ನಾವರ ತಾಲೂಕಿನ ಅರೆಅಂಗಡಿಯ ಎಸ್‌ಎಸ್‌ಕೆಪಿ ಶಾಲೆಯ ಆವರಣದಲ್ಲಿ ಬಿ.ವಿ. ಭಂಡಾರಿ ವೇದಿಕೆಯಲ್ಲಿ ಆಯೋಜಿಸಿದ್ದ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು.
ಹೊನ್ನಾವರ: ಸಾಹಿತ್ಯ ಸಮ್ಮೇಳನ ಒಂದು ಜೀವನದ ಪ್ರಕ್ರಿಯೆ ಆಗಬೇಕು. ಸಮ್ಮೇಳನವನ್ನು ಇಡಿಯಾಗಿ ಅನುಭವಿಸಿದಾಗ ಅದು ನಮ್ಮ ಮನಸ್ಸಿನೊಳಗೆ ಇಳಿಯುತ್ತದೆ ಎಂದು ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಹೇಳಿದರು.
ಅರೆಅಂಗಡಿಯ ಎಸ್‌ಎಸ್‌ಕೆಪಿ ಶಾಲೆಯ ಆವರಣದಲ್ಲಿ ಬಿ.ವಿ. ಭಂಡಾರಿ ವೇದಿಕೆಯಲ್ಲಿ ಆಯೋಜಿಸಿದ್ದ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮ್ಮೇಳನಾಧ್ಯಕ್ಷರಾಗಿರುವ ಸುರೇಶ ನಾಯ್ಕ ಅವರು ಶಿಕ್ಷಕರಾಗಿ, ಸಾಹಿತಿಯಾಗಿ ಜನಪರವಾಗಿ ನಿಂತವರು. ಪರಿಷತ್ತಿನ ಸದಸ್ಯರು, ಸ್ಥಳೀಯ ಜನರು ಒಟ್ಟಾಗಿ ನಿಂತು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನ ಒಂದು ಹಬ್ಬವಿದ್ದಂತೆ. ಸಾಹಿತಿಗಳು ಸಮ್ಮೇಳನವನ್ನು ಪೂರ್ಣವಾಗಿ ಗಮನಿಸಬೇಕು. ಕಿವಿಯನ್ನು, ಮನಸ್ಸನ್ನು ಒಡ್ಡಿಕೊಳ್ಳಬೇಕು. ಸಾಹಿತ್ಯ ಸಮ್ಮೇಳನವು ಒಂದು ಹಬ್ಬವಿದ್ದಂತೆ ಎಂದರು.ಸಮ್ಮೇಳನದ ಸರ್ವಾಧ್ಯಕ್ಷ ಸುರೇಶ ನಾಯ್ಕ ಬಣಸಾಲೆ ಮಾತನಾಡಿ, ಸಾಹಿತಿಯಾದವನಿಗೆ ಸಾಮಾಜಿಕ ಕಳಕಳಿ ಇರಬೇಕು. ಸಾಮಾನ್ಯ ವ್ಯಕ್ತಿಯಂತೆ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ನಮ್ಮ ಭಾಷೆಯನ್ನು, ಸಾಹಿತ್ಯವನ್ನು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಇದರೊಂದಿಗೆ ಪ್ರೀತಿಯ ಸಮಾಜವನ್ನು ಕಟ್ಟಬೇಕು. ಹೂತೋಟದಲ್ಲಿ ಬೇರೆ ಬೇರೆ ಬಣ್ಣದ ಹೂವುಗಳು ಇರುವ ಹಾಗೆ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಜಾತಿ, ಧರ್ಮ, ಗಡಿಯ ಆಚೆ ಪ್ರೀತಿಯನ್ನು ಕಟ್ಟೋಣ. ಮನುಷ್ಯರಾಗಿ ಬದುಕೋಣ ಎಂದರು.ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಗ್ರಾಪಂ ಒಕ್ಕೂಟದ ಅಧ್ಯಕ್ಷ ಗಣೇಶ ನಾಯ್ಕ, ಸಹಕಾರಿ ಧುರೀಣರಾದ ಜಿ.ಜಿ. ಶಂಕರ, ವಿ.ಎನ್. ಭಟ್ ಅಳ್ಳಂಕಿ, ಸ್ಥಳೀಯ ಜನಪ್ರತಿನಿಧಿಗಳಾದ ಸುಬ್ರಹ್ಮಣ್ಯ ಭಟ್ಟ, ಎಚ್.ಆರ್. ಗಣೇಶ, ರಜನಿ ನಾಯ್ಕ, ಗೋವಿಂದ ಗೌಡ, ವಿಷ್ಣು ಸಭಾಹಿತ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಭಟ್ಕಳ ಅಧ್ಯಕ್ಷ ಗಂಗಾಧರ ನಾಯ್ಕ, ಪರಿಷತ್ತಿನ ಸದಸ್ಯರು ಇದ್ದರು.
ಕಸಾಪ ತಾಲೂಕು ಸದಸ್ಯ ಈಶ್ವರ ಕೊಡಾಣಿ ಸ್ವಾಗತಿಸಿದರು. ಅಧ್ಯಕ್ಷ ಎಸ್.ಎಚ್. ಗೌಡ ವಂದಿಸಿದರು. ಸದಸ್ಯ ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.ನಿರ್ಣಯ ಮಂಡನೆ: ಸಾಹಿತ್ಯ ಸಮ್ಮೇಳನದ ನಿರ್ಣಯವನ್ನು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್.ಎಂ. ಮಾರುತಿ ಮಂಡಿಸಿದರು. ಸಮ್ಮೇಳನದಲ್ಲಿ ಪ್ರಮುಖವಾದ ೫ ನಿರ್ಣಯಗಳನ್ನು ಕೈಗೊಳ್ಳಲಾಯಿತು.
೧. ಹೊನ್ನಾವರ ತಾಲೂಕಿನಲ್ಲಿ ಸಾಹಿತ್ಯ ಕೃತಿಗಳನ್ನು ಸಂಗ್ರಹಿಸುವುದು, ಸಾಹಿತ್ಯ ಚಟುವಟಿಕೆ ನಡೆಸುವುದು ಸೇರಿದಂತೆ ಉಪಯುಕ್ತ ಕೆಲಸಗಳಿಗಾಗಿ ಸಾಹಿತ್ಯ ಭವನ ನಿರ್ಮಾಣ ನಿರ್ಮಿಸುವುದು.೨. ಕನ್ನಡ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದು. ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ಸಿಗಲು ಸರ್ಕಾರದ ಗಮನ ಸೆಳೆಯುವುದು.
೩. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಟ್ಟು ಪ್ರಕೃತಿ ಮತ್ತು ಜನಜೀವನದ ಮೇಲೆ ಆಗುವ ತೊಂದರೆ ನಿವಾರಿಸುವುದು.೪. ನದಿತಿರುವು ಯೋಜನೆಯಿಂದ ಜಿಲ್ಲೆಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದ್ದು, ರೈತರ, ಕಾರ್ಮಿಕರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಕೈಬಿಡುವುದು.
೫. ಹೊನ್ನಾವರ ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಪುಲ ಅವಕಾಶಗಳಿದ್ದು, ಕೊರತೆಗಳನ್ನು ನಿವಾರಿಸಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದು.