ಕುಶಾಲನಗರ ಫಾತಿಮಾ ಕಾನ್ವೆಂಟ್ ನ‌ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಫಾತಿಮಾ ಕಾನ್ವೆಂಟ್ ನ‌ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮತ್ತು ಗಣ್ಯರು ಗಿಡ ನೆಡುವ ಮೂಲಕ ಚಾಲನೆ‌ ನೀಡಿದರು. ನಂತರ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿ ಮಕ್ಕಳನ್ನು ಸುಶಿಕ್ಷಿತರಾಗಿಸಿ ಸಮಾಜಕ್ಕೆ ಕೊಡುಗೆ ನೀಡುವುದು ಶ್ಲಾಘನೀಯ ಸಂಗತಿ. ವಿದ್ಯಾರ್ಥಿಗಳು ಕೂಡ ಶಿಕ್ಷಕರು ನೀಡುವ ಶಿಕ್ಷೆಗೆ ಅಂಜದೆ ಅವರ ಸಲಹೆ,‌ ಮಾರ್ಗದರ್ಶನಕ್ಕೆ ಗೌರವ ನೀಡಿದ್ದೇ ಆದಲ್ಲಿ ಜೀವನದಲ್ಲಿ ಗುರಿ ಯಶಸ್ಸು ಸಾಧಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕ ಪ್ರಾಂತ್ಯದ ಸಾಮಾಜಿಕ ಧರ್ಮ ಪ್ರಚಾರಕರಾದ ಸಿಸ್ಟರ್ ಗ್ಲಾಡಿ ಮಾತನಾಡಿ, ಕಳೆದ 5 ದಶಕಗಳಿಂದ ಸಂಸ್ಥೆಯ ಸುದೀರ್ಘ ಪಯಣ ಹಾಗೂ ಏಳಿಗೆಗೆ ಕಾರಣಕರ್ತರಾದ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಎಲ್ಲರ ಸಹಕಾರ ಅವಿಸ್ಮರಣೀಯವಾದುದು. ಸಂಸ್ಥೆ ಶತಮಾನೋತ್ಸವದತ್ತ ದಾಪುಗಾಲಿಡಲಿ ಎಂದು ಶುಭ ಹಾರೈಸಿದರು.

ತಪೋವನ ಧರ್ಮಗುರು ಫಾ.ಲಾರೆನ್ಸ್, ಮಾತನಾಡಿ ಶುಭ ಹಾರೈಸಿದರು. ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿನ ಸಿಸ್ಟರ್ ಗಳು ಅವಿವಾಹಿತರಾಗಿದ್ದು ವಿದ್ಯಾರ್ಥಿಗಳನ್ನು ತಮ್ಮ‌ ಮಕ್ಕಳಂತೆ ಆರಾಧಿಸುತ್ತಿದ್ದಾರೆ. ಬಿಡುವಿನ‌ ವೇಳೆಯಲ್ಲಿ ಎಲ್ಲರ ಒಳಿತಿಗಾಗಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆಯಲ್ಲಿ ತೊಡಗುತ್ತಾರೆ ಎಂದು ಅವರು ಹೇಳಿದರು.ಸಂಸ್ಥೆ ಹಳೆಯ ವಿದ್ಯಾರ್ಥಿಗಳಾದ ರಾಜೇಶ್ ಹಾಗೂ ಗೌತಮ್ ತಮ್ಮ ಅನಿಸಿಕೆ‌ ಹಂಚಿಕೊಂಡರು.ವೇದಿಕೆಯಲ್ಲಿ ಸಂಸ್ಥೆ ವ್ಯವಸ್ಥಾಪಕಿ ಸಿ. ಆಗ್ನೆಸ್, ಹಳೆ ವಿದ್ಯಾರ್ಥಿ ಹಾಗೂ ಸಲಹೆಗಾರ ಡಾ.ರಾಮ್, ಪಿಯು ಪ್ರಾಂಶುಪಾಲೆ ಸಿ‌.ಜೆಸ್ವಿನಾ, ಸಿ.ಫ್ಲೋರೆಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿ.ಚೇತನ ಇದ್ದರು.

ಸಂಸ್ಥೆಯ ನಿವೃತ್ತ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದದವರು ಇದ್ದರು.