ಕನ್ನಡಪ್ರಭ ವಾರ್ತೆ ಆಲಮಟ್ಟಿ
ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಲುವೆ ಕಾಮಗಾರಿಗಾಗಿ ವಶಪಡಿಸಿಕೊಂಡ ಜಮೀನಿಗೆ ನ್ಯಾಯಾಲಯ ಆದೇಶದಂತೆ ಪರಿಹಾರ ನೀಡದ ಕಾರಣ ಕೋರ್ಟ್ ಆದೇಶದ ಮೇರೆಗೆ ಕೆಬಿಜೆಎನ್‌ಎಲ್‌ನ ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರ (ಎಂಡಿ) ಕಾರು ಸೇರಿದಂತೆ ಕಚೇರಿ ಸಾಮಗ್ರಿಗಳನ್ನು ಬುಧವಾರ ಜಪ್ತಿ ಮಾಡಲಾಯಿತು.ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ಎಂಡಿ ಕಚೇರಿಗೆ ಸೇರಿದ ಒಂದು ಇನ್ನೋವಾ ಕಾರು, ಒಂದು ಜೀಪ್, ಫ್ಯಾಕ್ಸ್, ಝರಾಕ್ಸ್ ಯಂತ್ರ, 16 ಅಲಮಾರಾ, 13 ಕಂಪ್ಯೂಟರ್, 20 ಕುರ್ಚಿ, 22 ಟೇಬಲ್, 1 ಫ್ಯಾಕ್ಸ್ ಮಶಿನ್, ಬಲ್ಪಗಳು, ಪ್ರಿಂಟರ್, ಸಿಲಿಂಗ್ ಫ್ಯಾನ್ ಜಪ್ತಿ ಸೇರಿದಂತೆ ಇತರೆ ವಸ್ತುಗಳನ್ನು ಪಂಚರ ಸಮ್ಮುಖದಲ್ಲಿ ಜಪ್ತಿ ಮಾಡಿ ಕೋರ್ಟ್‌ಗೆ ಸಲ್ಲಿಸಲಾಗಿದೆ.
ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮದ ಮಹಾಲಿಂಗಪ್ಪ ಮಹಾದೇವಪ್ಪ ಲಿಗಾಡೆಗೆ ಸೇರಿದ 1 ಎಕರೆ 4 ಗುಂಟಾ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದಕ್ಕೆ ವಿಜಯಪುರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ₹62,59,734 ಪರಿಹಾರ ನೀಡಬೇಕೆಂದು ಆದೇಶಿಸಿತ್ತು ಎಂದು ವಕೀಲ ಆರ್.ಜಿ.ಪಾಟೀಲ ತಿಳಿಸಿದರು.ಇನ್ನೊಂದು ಪ್ರಕರಣದಲ್ಲಿ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಅಕ್ರುಮಸಾಬ್ ಹುಸೇನಸಾಬ್ ಮುಲ್ಲಾಗೆ ಸೇರಿದ 1 ಎಕರೆ 33 ಗುಂಟಾ ಜಮೀನನ್ನು ಕಾಲುವೆಗಾಗಿ ವಶಪಡಿಸಿಕೊಳ್ಳಲಾಗಿತ್ತು. ಅವರಿಗೆ ವಿಜಯಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ₹4,28,68,020 ಪರಿಹಾರ ನೀಡಲು ಆದೇಶಿಸಿತ್ತು ಎಂದು ರೈತ ಪರ ವಕೀಲ ಜಿ.ಎಸ್.ಬಿಜ್ಜೂರ ತಿಳಿಸಿದರು.
ಈ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡುವಂತೆ ಕೆಬಿಜೆಎನ್ಎಲ್ ಎಂಡಿಗೆ, ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ನೀಡಿರಲಿಲ್ಲ. ಸದ್ಯ ನ್ಯಾಯಾಲಯದ ಆದೇಶದಂತೆ ಜಪ್ತಿ ಕಾರ್ಯ ಮಾಡಲಾಗುತ್ತಿದೆ ಎಂದು ರೈತರ ಪರ ವಕೀಲರು ತಿಳಿಸಿದ್ದಾರೆ.