ಬೈಂದೂರು: ಆಧ್ಯಾತ್ಮಿಕ ಲೋಕದಲ್ಲಿ ಕುಂಭಮೇಳಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಪಾವಿತ್ರ್ಯತೆಯೊಂದಿಗೆ ಬೈಂದೂರು ಕ್ಷೇತ್ರದ ಗೋಳಿಹೊಳೆಯಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 48 ದಿನಗಳ ಚಾತುರ್ಮಾಸ್ಯ ವ್ರತಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜು. 28ರಿಂದ ಆರಂಭವಾಗಲಿರುವ ಈ ಅನುಷ್ಠಾನವು ಬೈಂದೂರಿನ ಪಾಲಿಗೆ ಆಧ್ಯಾತ್ಮಿಕ ಕುಂಭಮೇಳದಂತಹ ಭವ್ಯ ಅನುಭವವನ್ನು ನೀಡಲಿದೆ. ಈ ಮಹೋನ್ನತ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಗೋಳಿಹೊಳೆಯಲ್ಲಿ ನಡೆಯಿತು.ಸಚಿವ ಮಾಂಕಾಳ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸರ್ವ ಜನರ ಹಿತೈಷಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಜಿಪಂ ಮಾಜಿ ಸದಸ್ಯ ರಾಜು ಪೂಜಾರಿ, ಕೆ.ಆರ್. ನಾಯ್ಕ್, ಬೈಂದೂರು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಶೇಖರ್ ಪೂಜಾರಿ, ಚಾತುರ್ಮಾಸ್ಯ ಸಂಚಾಲಕ ಶಿವರಾಜ್ ಪೂಜಾರಿ, ಅಶೋಕ್ ಪೂಜಾರಿ ಬೀಜಾಡಿ, ನರಸಿಂಹ ಪೂಜಾರಿ ಪಡುಕೋಣೆ, ಗಣೇಶ್ ಪೂಜಾರಿ ಕೆಂಚನೂರು, ಸಂತೋಷ್ ಪೂಜಾರಿ ಕರ್ಕುಂಜೆ, ಗೋವಿಂದ್ ಪೂಜಾರಿ, ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದು, ಈ ಧಾರ್ಮಿಕ ಸಂಕಲ್ಪಕ್ಕೆ ಸಾಕ್ಷಿಯಾದರು.ವಿನಾಯಕ ಶಕ್ತಿಯ ಸನ್ನಿಧಿಯಲ್ಲಿ ದಿನವೊಂದಕ್ಕೆ ಸಾವಿರಾರು ಭಕ್ತರ ಸಂಗಮವಾಗಬೇಕಿದೆ. ಈ 48 ದಿನಗಳ ಕಾಲ ಗೋಳಿಹೊಳೆಯ ಮಣ್ಣು ದೈವಿಕ ಕಂಪನದಿಂದ ಕೂಡಿರಲಿದೆ. ಇದು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ, ಜಿಲ್ಲೆಯ ಸಮಸ್ತ ಜನರ ಒಳಿತಿಗಾಗಿ ನಡೆಯುತ್ತಿರುವ ಶಕ್ತಿ ಯಜ್ಞ.ನಿತ್ಯೋತ್ಸವ: ಪ್ರತಿ ದಿನ ಧಾರ್ಮಿಕ ವಿಧಿ ವಿಧಾನಗಳು, ವಿಶೇಷ ಪೂಜೆಗಳು ನೆರವೇರಲಿವೆ.
ಸಂಸ್ಕೃತಿಯ ಮೆರುಗು: ಜಿಲ್ಲೆಯ ಕಲೆಗಳಾದ ಯಕ್ಷಗಾನ, ವೈವಿಧ್ಯಮಯ ಭಜನಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಸಭೆಗಳು ಮೇಳೈಸಲಿವೆ.ಯಶಸ್ಸಿನ ಹಾದಿಗೆ ಪವಿತ್ರ ಆಶೀರ್ವಾದ: ‘‘ಯಾರು ಈ ಪುಣ್ಯ ಕಾರ್ಯದಲ್ಲಿ ಮನಸಾರೆ ಪಾಲ್ಗೊಳ್ಳುತ್ತಾರೋ, ಅವರಿಗೆ ಜೀವನದಲ್ಲಿ ಯಶಸ್ಸು ಮತ್ತು ಶಾಂತಿ ಲಭಿಸುವುದು ನಿಶ್ಚಿತ. ಈ ಚಾತುರ್ಮಾಸ್ಯವು ಬೈಂದೂರು ಕ್ಷೇತ್ರದ ಏಳಿಗೆಯ ಪಥದಲ್ಲಿ ಒಂದು ಮೈಲಿಗಲ್ಲಾಗಲಿದೆ” ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕುಂಭಮೇಳದ ಪಾವಿತ್ರ್ಯವನ್ನು ಸ್ಮರಿಸುವಂತೆ ನಡೆಯಲಿರುವ ಈ 48 ದಿನಗಳ ಕಾಲಾವಧಿಯಲ್ಲಿ, ಪ್ರತಿದಿನ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜನಮಾನಸದಲ್ಲಿ ಧಾರ್ಮಿಕ ಭಾವನೆಗಳನ್ನು ಜಾಗೃತ ಗೊಳಿಸಿ, ಕ್ಷೇತ್ರದ ಏಳಿಗೆಗೆ ಸಾಕ್ಷಿಯಾಗಲಿರುವ ಈ ಪುಣ್ಯ ಮಹೋತ್ಸವಕ್ಕೆ ಇಡೀ ಜಿಲ್ಲೆಯ ಜನತೆಯ ಧಾರ್ಮಿಕ ಹಬ್ಬವಾಗಲಿದೆ.