ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾಗುತ್ತಿರುವ ಪಡಿತರ ಆಹಾರ ಪದಾರ್ಥಗಳಲ್ಲಿ ಗೋಲ್‌ಮಾಲ್ ನಡೆಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ ಎಂದು ರಾಜ್ಯ ಆಹಾರ ನಿಗಮದ ಅಧ್ಯಕ್ಷ ಡಾ.ಎಚ್.ಕೃಷ್ಣ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಗೋದಾಮುಗಳಿಂದ ಪೂರೈಕೆಯಾಗುವ ಆಹಾರ ಪದಾರ್ಥಗಳಲ್ಲಿ ತೂಕದಲ್ಲಿ ಮೋಸವೆಸಗುತ್ತಿರುವುದು ಹಾಗೂ ನ್ಯಾಯಬೆಲೆ ಅಂಗಡಿಗಳಿಂದ ಪಡಿತರದಾರರಿಗೆ ನೀಡುವ ಆಹಾರ ಪದಾರ್ಥಗಳ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ. ಹಾಗಾಗಿ ಗೋದಾಮು, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ವ್ಯತ್ಯಾಸಗಳು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಪಡಿತರದಲ್ಲಿ ಬೆಲ್ಲ ನೀಡಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಮುಂದಿನ ಆರು ತಿಂಗಳಲ್ಲಿ ಈ ವಿಷಯವಾಗಿ ತೀರ್ಮಾನ ಕೈಗೊಳ್ಳಲಾಆಗುವುದು. ದಕ್ಷಿಣ ಕರ್ನಾಟಕದಲ್ಲಿ ಗೋಧಿಗೆ ಬೇಡಿಕೆ ಕಡಿಮೆ ಇರುವ ಕಾರಣ ಗೋದಾಮುಗಳಲ್ಲಿ ದಾಸ್ತಾನು ಮಾಡಿದ ಗೋಧಿ ಹಾಳಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಹೀಗಾಗಿ ಶಾಲಾ ಮಕ್ಕಳಿಗೆ ಗೋಧಿ ಪಾಯಸ, ಮುದ್ದೆಯಲ್ಲಿ ಅನ್ನದ ಬದಲು ಗೋಧಿ ಹಿಟ್ಟು ಸೇರಿಸಿ ಆಹಾರಗಳಲ್ಲಿ ಗೋಧಿ ಬಳಸಲು ಸೂಚಿಸಲಾಗಿದೆ ಎಂದರು.ಆದಾಯ ತೆರಿಗೆದಾರರು ಎಂಬ ಕಾರಣದಿಂದ ಅನೇಕ ಬಡವರ ಬಿಪಿಎಲ್ ಕಾರ್ಡ್ ರದ್ದಾಗಿರುವುದು ಗಮನಕ್ಕೆ ಬಂದಿದೆ. ಬಡವರು ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪುನರ್ ಪರಿಶೀಲಿಸಿ, ರದ್ದಾಗಿರುವ ಬಿಪಿಎಲ್ ಕಾರ್ಡ್‌ಗಳನ್ನು ಬಡವರಿಗೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈಗಾಗಲೇ ಬೆಂಗಳೂರು ನಗರ ಮತ್ತು ಗ್ರಾಮೀಣ, ತುಮಕೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜನರಿಂದ ಅಹವಾಲು ಸ್ವೀಕರಿಸಿದ್ದೇವೆ. ಆಹಾರ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಹೀಗಾಗಿ, ಆಹಾರ ಉತ್ತಮವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಕಳಪೆ ಆಹಾರ ಮತ್ತು ಕಲಬೆರಕೆ ಆಹಾರದ ಬಗ್ಗೆ ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.ಅ.೨೫ರವರೆಗೆ ನಾಲ್ಕು ದಿನ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಅಂಗನವಾಡಿ, ಹಾಸ್ಟೆಲ್, ಬೇಕರಿ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ನಮ್ಮ ಆಯೋಗದ ವ್ಯಾಪ್ತಿಗೆ ಆಹಾರ, ಕೃಷಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕಾನೂನು ಮಾಪನ ಶಾಸ್ತ್ರ ಸೇರಿದಂತೆ ೧೪ ಇಲಾಖೆಗಳು ಬರುತ್ತವೆ. ಈ ಇಲಾಖೆಗಳಲ್ಲಿ ಯಾವುದೇ ಸಮಸ್ಯೆ, ಕುಂದುಕೊರತೆ ಇದ್ದರೆ ಆಯೋಗದ ಗಮನಕ್ಕೆ ತಂದರೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಗೋಷ್ಠಿಯಲ್ಲಿ ಸದಸ್ಯರಾದ ಲಿಂಗರಾಜ ಕೋಟೆ, ರೋಹಿಣಿ, ಮಾರುತಿ, ನಾಗರಾಜಮೂರ್ತಿ ಇತರರಿದ್ದರು.