ಪ್ರತಿಯೊಬ್ಬರೂ ಮನೆಯಲ್ಲಿ ಸ್ವಂತ ಗ್ರಂಥಾಲಯ ಹೊಂದಿ ಉತ್ತಮ ಪುಸ್ತಕಗಳನ್ನು ಓದಿ ಜ್ಞಾನಿಗಳಾಗಬೇಕು ಹಾಗೂ ಸಮರ್ಥ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಒಂದು ದೇಶ ಕಟ್ಟುವ ಸಂದರ್ಭದಲ್ಲಿ ಉತ್ತಮ ಗ್ರಂಥಾಲಯಗಳು ಹಾಗೂ ಪುಸ್ತಕಗಳನ್ನು ಜನತೆಗೆ ಪೂರೈಕೆ ಮಾಡಿ ಓದುವ ಅವಕಾಶಗಳನ್ನು ಕಲ್ಪಿಸಿಕೊಡುವುದರಿಂದ ಉತ್ತಮ ಪುಸ್ತಕಗಳು ದೇಶ ನಿರ್ಮಾಣದ ಸಾಧನಗಳಾಗಿ ಕೆಲಸ ಮಾಡುತ್ತವೆ ಎಂದು ಶಾಂತ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಶಿಕ್ಷಣ ಸಂಸ್ಥೆಯ ಕೇಂದ್ರೀಯ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ಪುಸ್ತಕ ದಿನದ ಆಶಯವನ್ನು ಕುರಿತು ಮಾತನಾಡುತ್ತಾ, ಯೋಗ್ಯ ಪುಸ್ತಕಗಳನ್ನು ಓದಿ ತಿಳಿಯುವುದರಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನ, ಜ್ಞಾನಾರ್ಜನೆ ಉಂಟಾಗಿ ಮಾನವ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಹುಟ್ಟಿನಿಂದ ಹಲವು ರೀತಿಯ ಶೋಷಣೆ, ತಾರತಮ್ಯ, ಅಪಮಾನಗಳಲ್ಲಿ ನೊಂದಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ. ಆರ್. ಅಂಬೇಡ್ಕರ್ ಅವರು ಸಾವಿರಾರು ಯೋಗ್ಯ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಆಳವಾಗಿ ಓದಿ ತಿಳಿಯುವ ಮೂಲಕ ಮಹಾ ಜ್ಞಾನಿಯಾಗಿ, ಹೋರಾಟಗಾರರಾಗಿ ಹಾಗೂ ಮಹಾನ್ ಮಾನವತಾವಾದಿಯಾಗಿ ಎನಿಸಿದ್ದಾರೆ. ಪ್ರತಿಯೊಬ್ಬರೂ ಮನೆಯಲ್ಲಿ ಸ್ವಂತ ಗ್ರಂಥಾಲಯ ಹೊಂದಿ ಉತ್ತಮ ಪುಸ್ತಕಗಳನ್ನು ಓದಿ ಜ್ಞಾನಿಗಳಾಗಬೇಕು ಹಾಗೂ ಸಮರ್ಥ ವ್ಯಕ್ತಿಗಳಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಲಾ ಶಾಂತ ಕೇಂದ್ರೀಯ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ವೆಂಕಟೇಶ್, ಶಾಂತ ಶಿಕ್ಷಣ ಸಂಸ್ಥೆಯ ಪ್ರೊ. ನರೇಶ್ ಸಂದೇಶ್, ಬಿ.ವನಿತಾ, ಅಭಿಲಾಶ್ ಹಾಗೂ ಅರೆವೈದ್ಯಕೀಯ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಇದ್ದರು.
ಸಿಕೆಬಿ-2 ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಶಿಕ್ಷಣ ಸಂಸ್ಥೆಯ ಕೇಂದ್ರೀಯ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ಪುಸ್ತಕ ದಿನದ ಆಶಯವನ್ನು ಕುರಿತು ಡಾ.ಕೋಡಿರಂಗಪ್ಪ ಮಾತನಾಡಿದರು.