ಕನ್ನಡಪ್ರಭ ವಾರ್ತೆ ಮಡಿಕೇರಿ
ಸಹಕಾರ ಸಂಘಗಳು ಪ್ರತಿವರ್ಷ ಕಡ್ಡಾಯವಾಗಿ ಆಡಿಟಿಂಗ್ ಮಾಡಿಸುವ ಮೂಲಕ ಪಾರದರ್ಶಕ ಆಡಳಿತವನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಪಿ.ಗಣಪತಿ ಕರೆ ನೀಡಿದ್ದಾರೆ.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಆದಾಯ ತೆರಿಗೆ, ಜಿಎಸ್‌ಟಿ ಮಾಹಿತಿ ಹಾಗೂ ಪದಾಧಿಕಾರಿಗಳ ಕರ್ತವ್ಯ, ಜವಾಬ್ದಾರಿ ಕುರಿತು ರಾಜ್ಯ ಮಟ್ಟದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಕೊಡಗು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ 115 ವರ್ಷಗಳ ಇತಿಹಾಸವಿದೆ. ಉತ್ತಮ ಸಹಕಾರಿ ಸಂಘಗಳಿರುವ ಹೆಗ್ಗಳಿಕೆಯನ್ನು ಹೊಂದಿರುವ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಮತ್ತು ಮಾದರಿ ಎನಿಸಿದೆ. ಈ ಖ್ಯಾತಿ ಹೀಗೆ ಮುಂದುವರಿಯಬೇಕಾದರೆ ಪಾರದರ್ಶಕ ಆಡಳಿತ ನಡೆಸುವುದು ಮುಖ್ಯ ಎಂದರು.ಜಿಲ್ಲೆಯಲ್ಲಿರುವ ಒಟ್ಟು ಸಹಕಾರಿ ಸಂಘಗಳಲ್ಲಿ 103 ಮಾತ್ರ ಲಾಭದಲ್ಲಿದ್ದು, ಉಳಿದವು ನಷ್ಟದಲ್ಲಿವೆ. ಈ ಹಿಂದೆ ಇದ್ದ 115 ದವಸ ಭಂಡಾರಗಳಲ್ಲಿ ಪ್ರಸ್ತುತ 76 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೆಲವು ಸಹಕಾರ ಸಂಘಗಳು ಮತ್ತು ದವಸ ಭಂಡಾರಗಳು ಆಡಿಟ್ ವರದಿ ನೀಡುವಲ್ಲಿ ವಿಫಲವಾಗಿವೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಕೊಡಗಿನ ಸಹಕಾರಿ ರಂಗಕ್ಕೆ ಕೆಟ್ಟ ಹೆಸರು ಬರಬಹುದು, ಹಿರಿಯರ ಶ್ರಮಕ್ಕೆ ಕುಂದು ಬರಬಹುದು ಎಂದು ಕೆ.ಪಿ.ಗಣಪತಿ ಆತಂಕ ವ್ಯಕ್ತಪಡಿಸಿದರು. ಆಡಿಟ್ ವರದಿ ನೀಡದ ಆಡಳಿತ ಮಂಡಳಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಮತ್ತು ಸಮರ್ಥ ಆಡಳಿತ ನೀಡಲಾಗದೆ ಅಸಹಾಯಕರಾಗುವವರು ಸಹಕಾರಿ ರಂಗದಲ್ಲಿ ಇರಬಾರದು. ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ ಕಾಲ ಕಾಲಕ್ಕೆ ಬದಲಾಗುವ ಕಾಯ್ದೆ, ಆದಾಯ ತೆರಿಗೆ ಮತ್ತು ಜಿಎಸ್‌ಟಿಯ ಮಾಹಿತಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಮಾಹಿತಿಯ ಕೊರತೆ ಎದುರಾದರೆ ಅಧಿಕಾರಿಗಳಿಗೆ ಸಲಹೆಗಳನ್ನು ನೀಡಲು ಮತ್ತು ಆಡಿಟ್ ವರದಿಯ ನ್ಯೂನತೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಟ್ಟಣ ಸಹಕಾರ ಸಂಘ, ದವಸ ಭಂಡಾರ ಸೇರಿದಂತೆ ಸಹಕಾರಿ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಹಕಾರಿ ಕಾಯ್ದೆ ಮತ್ತು ತೆರಿಗೆ ಪದ್ದತಿಯ ಕುರಿತು ಸಹಕಾರಿಗಳಿಗೆ ಮನದಟ್ಟು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.ಕಾಯ್ದೆ ಅರಿವು ಬೇಕು: ಸಹಕಾರಿ ಕ್ಷೇತ್ರದಲ್ಲಿ ನಾವೇ ಹಿರಿಯರು ಅಥವಾ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಮೈಮರೆಯಬಾರದು. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು ಬದಲಾಗುವ ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಕಾಯ್ದೆಯ ಅರಿವು ಇಲ್ಲದಿದ್ದರೆ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದ್ದನ್ನೇ ಕೇಳಿಕೊಂಡು ಆಡಳಿತ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದರು.ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ವಿರಾಜಪೇಟೆಯ ಹಿರಿಯ ಸಹಕಾರಿ ಬಿ.ಬಿ.ನಾಣಯ್ಯ ಮಾತನಾಡಿ ಸರ್ವ ಸಹಕಾರಿಗಳು ಒಗ್ಗೂಡಿ ಕೊಡಗಿನ ಸಹಕಾರಿ ರಂಗವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.ಸಹಕಾರಿ ರಂಗದ ಮೂಲಕವೇ ಸಮಾಜ ಸೇವೆ ಸಲ್ಲಿಸುವಂತೆ ನನ್ನ ತಂದೆಯವರು ನೀಡಿದ ಮಾರ್ಗದರ್ಶನದಂತೆ ನಾನು ಇಲ್ಲಿಯವರೆಗೆ ಸೇವೆ ಸಲ್ಲಿಸಿದ್ದೇನೆ. ಪರರಿಗೆ ನಾವು, ನಮಗೆ ಪರರು ಎಂಬ ಆದರ್ಶದಡಿ ಮುನ್ನಡೆಯುತ್ತಿದ್ದು, ಸಹಕಾರಿ ರಂಗ ಜನಸೇವೆಗೆ ಉತ್ತಮ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಸನ್ನದು ಲೆಕ್ಕಿಗ ಸಿ.ಎ.ಅನಿಲ್ ಭಾರದ್ವಾಜ್ ಅವರು ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆಯ ಕುರಿತು ವಿವರಿಸಿದರು.ವಿಶೇಷ ಆಹ್ವಾನಿತರಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಉಪಾಧ್ಯಕ್ಷ ಉಪಾಧ್ಯಕ್ಷ ಹೆಚ್.ಕೆ.ಮಾದಪ್ಪ, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ನಿರ್ದೇಶಕರುಗಳಾದ ಕೆ.ಟಿ.ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಟಿ.ಸುಬ್ಬಯ್ಯ, ಎಂ.ಎಂ.ಶ್ಯಾಮಲ, ಅಮೃತ್ ವಿ.ಸಿ, ಎಸ್.ಆರ್.ಸುನಿಲ್ ರಾವ್, ಹೆಚ್.ಎಂ.ರಮೇಶ್, ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಡಿ.ರವಿಕುಮಾರ್, ಕೆಐಸಿಎಂ ನ ಪ್ರಾಂಶುಪಾಲರು ಮತ್ತು ಸಮನ್ವಯಾಧಿಕಾರಿ ಪುಟ್ಟಸ್ವಾಮಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ವಿರಾಜಪೇಟೆಯ ಹಿರಿಯ ಸಹಕಾರಿ ಬಿ.ಬಿ.ನಾಣಯ್ಯ ಅವರಿಗೆ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.