- ಹೊನ್ನಾಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಎಂ.ಪಿ.ರೇಣುಕಾಚಾರ್ಯ ಆರೋಪ

- - -

- ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಕೈ ಸೇರದೇ ಫಲಾನುಭವಿಗಳ ಪರದಾಟ

- ಸುಳ್ಳು ಭರವಸೆ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ವೇತನ ನೀಡಲು ಹಣವೇ ಇಲ್ಲ

- ವಿದ್ಯುತ್‌ ಖಾಸಗೀಕರಣದಿಂದ ವಿದ್ಯುತ್ ಶುಲ್ಕ ಹೆಚ್ಚಾಗಿ, ಜನಸಾಮಾನ್ಯರು, ರೈತರಿಗೆ ಸಂಕಷ್ಟ


- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಯಾವುದೇ ಸಾಮಾಜಿಕ ಭದ್ರತೆ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೆಲ ತಿಂಗಳಿಂದ ವೇತನ ನೀಡುತ್ತಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

ಸರ್ಕಾರದ ವೈಫಲ್ಯಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವ ಅಂಗವಾಗಿ ಅವರ ನಿವಾಸದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಭದ್ರತೆಯಡಿ ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಅಂಗವಿಕಲ ವೇತನ 3 ತಿಂಗಳಿನಿಂದ ನೀಡಿಲ್ಲ. ನಾವು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಸಂಧ್ಯಾ, ವಿಧವಾ ಹಾಗೂ ಅಂಗವಿಕಲ ಅರ್ಹ ಫಲಾನುಭವಿಗಳೇ ಈ ಬಗ್ಗೆ ತಿಳಿಸಿದ್ದಾರೆ. ಪ್ರತಿ ತಿಂಗಳು ವೇತನ ಬಂದರೆ ಮಾತ್ರೆ, ಇನ್ನಿತರ ಖರ್ಚುಗಳಿಗೆ ಆಗುತ್ತಿತ್ತು. ಆದರೆ, ಈಗ ಮೂರು ತಿಂಗಳಿನಿಂದ ವೇತನವೇ ಬರುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ ಎಂದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಸಿ.ಎಂ. ಆಗಿದ್ದಾಗ ಸಾಮಾಜಿಕ ಭದ್ರತೆಯ ಯೋಜನೆಯಲ್ಲಿ ₹1200 ವೇತನ ನೀಡಲಾಗುತ್ತಿತ್ತು. ಸುಳ್ಳು ಭರವಸೆ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ವೇತನ ನೀಡಲು ಹಣ ಇಲ್ಲದೇ ಖಜಾನೆ ದಿವಾಳಿಯಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಹೊಸದಾಗಿ ನೋಂದಣಿ ಏಕೆ ಎಂದು ಪ್ರಶ್ನಿಸಿದರು.

ವಿದ್ಯುತ್‌ ಖಾಸಗೀಕರಣಕ್ಕೆ ವಿರೋಧ:

ಸರ್ಕಾರ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ವಿವಿಧ ನಿಗಮಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದಕ್ಕೆ ಬಿಜೆಪಿ ವಿರೋಧಿಸುತ್ತದೆ. ಖಾಸಗೀಕರಣ ಮಾಡಿದರೆ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಸೌಲಭ್ಯ ರದ್ದಾಗುತ್ತದೆ. ಎಷ್ಟೋ ಸಿಬ್ಬಂದಿಗೆ ಸಮಸ್ಯೆಯಾಗಲಿದೆ. ವಿದ್ಯತ್ ಕ್ಷೇತ್ರ ಖಾಸಗೀಕರಣ ಮಾಡದೇ ಸರ್ಕಾರದ ಅಧೀನದಲ್ಲೇ ಇರಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ರೈತರು, ವಿದ್ಯುತ್ ಇಲಾಖೆ ಸಿಬ್ಬಂದಿ ಜೊತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಪಡಿತರ ಚೀಟಿ ವಿಚಾರದಲ್ಲೂ ಸಮಸ್ಯೆ ಉಲ್ಬಣಗೊಂಡಿದೆ, ಈ ಬಗ್ಗೆಯೂ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ಸುರೇಶ್ ಜೆ., ಕೆ.ಕೆ.ಪಿ. ಕುಬೇರಪ್ಪ, ಮಾರುತಿ ನಾಯ್ಕ, ನೆಲಹೊನ್ನೆ ಮಂಜುನಾಥ್, ಅನಿಲ್‌ ಕುಮಾರ್ ಕಂದೂರು, ಎಂ.ಎಸ್. ಪಾಲಾಕ್ಷಪ್ಪ, ಶಿವಾನಂದ್, ರಂಗನಾಥ್, ರಘು, ಬಿಜೆಪಿ ಮುಖಂಡರು ಇದ್ದರು.

- - -

(ಕೋಟ್‌) * 30ರಂದು ಪ್ರತಿಭಟನೆ ವಿಧವಾ ವೇತನ, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು, ಅರ್ಹರಿಗೆ ಪಡಿತರ ಚೀಟಿ ನೀಡಿಲ್ಲ. ತಕ್ಷಣ ಬಿಪಿಎಲ್ ಕಾರ್ಡ್ ಇಲ್ಲವದರಿಗೂ ಹೊಸದಾಗಿ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಜೂ.30ರ ಮಂಗಳವಾರ ಹೊನ್ನಾಳಿ ಪಟ್ಟಣದ ಟಿ.ಬಿ.ವೃತ್ತದಿಂದ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಅನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು. ರೈತರು, ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ರೇಣುಕಾಚಾರ್ಯ ಮನವಿ ಮಾಡಿದರು.

- - -

-25ಎಚ್.ಎಲ್.ಐ1: ಸಭೆ ನಂತರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.