ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ರೈತರು ತೋಟಗಳಲ್ಲಿ ಬೆಳೆದ ಅಡಕೆ ಮರಗಳು ಪ್ರಕೃತಿ ವಿಕೋಪದಿಂದಾಗಿ ಹಾನಿಗೀಡಾಗಿದ್ದು, ಈ ಸಂಬಂಧ ಬಾಧಿತ ರೈತರಿಗೆ ಪರಿಹಾರ ಕ್ರಮವಾಗಿ ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಸಲ್ಲಿಸಲಾಗಿದ್ದ ಪ್ರಸ್ತಾವನೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿ, ಸಂತ್ರಸ್ಥ ರೈತರಿಗೆ ಪರಿಹಾರದ ಮೊತ್ತ ದೊರಕಿಸಿಕೊಡಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.ಇಲ್ಲಿನ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಬೆಳೆಹಾನಿ ಕುರಿತು ಜಿಲ್ಲಾಡಳಿತ ಈಗಾಗಲೇ ಬಾಧಿತ ರೈತರಿಂದ ಮಾಹಿತಿ ಸಂಗ್ರಹಿಸಿ, ಸರ್ಕಾರಕ್ಕೆ ನಿಯಮಾನುಸಾರ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು. ಶೇ.33ಕ್ಕಿಂತ ಮೇಲ್ಪಟ್ಟು ಹಾನಿಗೊಳಗಾದ ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರ್ ಗೆ ₹22, 000 ಬಿಡುಗಡೆಗೊಳಿಸುವಂತೆಯೂ ಕೋರಿಕೆ ಸಲ್ಲಿಸಲಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.
ಕಳೆದ ಏಪ್ರಿಲ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಹಾನಿಗೊಳಗಾದ ಒಟ್ಟು 592 ಮನೆಗಳ ಪೈಕಿ 66 ಮನೆಗಳು ಸಂಪೂರ್ಣ ನಾಶಗೊಂಡಿವೆ. 526 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೇ ತಿಂಗಳಲ್ಲಿ 220 ಮನೆಗಳು ಹಾನಿಗೊಳಗಾಗಿದ್ದು, 1 ಮನೆ ಪೂರ್ಣಪ್ರಮಾಣದಲ್ಲಿ ಹಾಗೂ 219 ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಏಪ್ರಿಲ್ ತಿಂಗಳಲ್ಲಿ 514 ಹೆಕ್ಟೇರ್ ಮತ್ತು ಮೇ ತಿಂಗಳಲ್ಲಿ 460 ಹೆಕ್ಟೇರ್ ಬೆಳೆ ನಾಶವಾಗಿದ್ದು, ಈ ಸಂಬಂಧ ಸಂತ್ರಸ್ಥ ಕುಟುಂಬಗಳಿಂದ ಮಾಹಿತಿ ಪಡೆದು, ಪರಿಹಾರ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಇದ್ದಾಗ್ಯೂ ಸಂತ್ರಸ್ಥರಿಗೆ ಪರಿಹಾರ ಧನ ದೊರಕಿಸಿಕೊಡದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಮಳೆಯಿಂದ ಹಾನಿಗೊಳಗಾಗಿರುವ ಅಧಿಕೃತ ಮನೆಗಳಿಗೆ ಪರಿಹಾರ ದೊರೆಯಲಿದೆ. ಅನಧಿಕೃತ ಮನೆಗಳಿಗೆ ಪರಿಹಾರಧನ ನೀಡಲು ಅವಕಾಶ ಇಲ್ಲವಾಗಿದ್ದು, ಸಂಬಂಧಿತ ಇಲಾಖಾ ಸಚಿವರ ಗಮನಸೆಳೆದು, ಸಂತ್ರಸ್ಥ ಕುಟುಂಬದವರೆಲ್ಲರಿಗೂ ಪರಿಹಾರ ಧನ ದೊರಕಿಸಿಕೊಡಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು.
ಕಳೆದ ಸಾಲಿನಲ್ಲಿ 17,446 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಗೆ ಜಿಲ್ಲೆಯ ರೈತರು ಬೆಳೆವಿಮೆಗಾಗಿ ಒಟ್ಟು ₹3.8 ಕೋಟಿ ಮೊತ್ತವನ್ನು ಪಾವತಿಸಿದ್ದರು. ಆದರೆ, ಸರಿಯಾದ ಕ್ರಮದಲ್ಲಿ ಬೆಳೆ ಕಟಾವು ಮಾನದಂಡಗಳನ್ನು ಅನುಸರಿಸದಿರುವುದರಿಂದ ಸರಿಯಾಗಿ ಮೌಲ್ಯಮಾಪನ ನಡೆಯದೇ ಬಾಧಿತ ರೈತರಿಗೆ ಸರಿಯಾದ ಮೊತ್ತ ಪಾವತಿಯಾಗಿರುವುದಿಲ್ಲ. ಅಂತಹ ಸಂತ್ರಸ್ತ ರೈತರಿಗೆ ಸರಿಯಾದ ವಿಮಾ ಪರಿಹಾರ ಮೊತ್ತವನ್ನು ದೊರಕಿಸಿಕೊಡಲು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
72 ಮಳೆ ಮಾಪನ ಕೇಂದ್ರ ಕ್ರಿಯಾಶೀಲ:
ಜಿಲ್ಲೆಯಲ್ಲಿರುವ 280 ಮಳೆಮಾಪನ ಕೇಂದ್ರಗಳಲ್ಲಿ 72 ಕೇಂದ್ರಗಳು ಮಾತ್ರ ಕ್ರಿಯಾಶೀಲವಾಗಿದ್ದು, ಉಳಿದ ಕೇಂದ್ರಗಳು ದುರಸ್ತಿಯಲ್ಲಿವೆ. ಒಂದು ವಾರದೊಳಗಾಗಿ ಸುಮಾರು 220 ಕೇಂದ್ರಗಳು ಚಾಲ್ತಿಯಲ್ಲಿರುವಂತೆ ಹಾಗೂ ದುರಸ್ತಿ ಮಾಡಿದ ಕೇಂದ್ರಗಳಿಗೆ ಸಿಮ್ ಅಳವಡಿಸಿ, ಕ್ರಿಯಾಶೀಲವಾಗಿರುವಂತೆ ಅಧಿಕಾರಿಗಳು ಗಮನಹರಿಸಬೇಕು. ಮಳೆಮಾಪನ ಕೇಂದ್ರಗಳ ಅಸಮರ್ಪಕ ದುರಸ್ತಿಯಿಂದಾಗಿ ದಾಖಲೆಗಳ ಸಮರ್ಪಕ ನಿರ್ವಹಣೆ ಆಗದೆ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಸಂಸದರು ಸೂಚಿಸಿದರು.ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಿ:
ಜಿಲ್ಲೆಯಲ್ಲಿ ಮುಂಗಾರು ಬೆಳೆಗೆ ಅಗತ್ಯವಾಗಿರುವ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ವನವಾಸಿಗಳು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ರಸಗೊಬ್ಬರದ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ರೈತರು ಸಮಸ್ಯೆಯಿಂದ ಪಾರಾಗಲು ಅಧಿಕಾರಿಗಳು ರೈತರಿಗೆ, ರೈತರ ಸಮಸ್ಯೆಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವಂತೆ ಸಂಸದರು ಸಲಹೆ ನೀಡಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಎನ್.ಹೇಮಂತ್ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.