ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಸರ್ಕಾರಿ ಗುಡ್ಡ ಕಬಳಿಕೆಗೆ ಮುಂದಾಗಿದ್ದು ಜಿಲ್ಲಾಡಳಿತ ತಕ್ಷಣವೇ ಕಬಳಿಕೆ ತಡೆದು ಸಮಗ್ರ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೇಕಂದವಾಡಿ ಬಳಿ 218 ಎಕರೆ ವಿಸ್ತೀರ್ಣದ ಬಹುದೊಡ್ಡ ಸರ್ಕಾರಿ ಗುಡ್ಡವನ್ನೇ ಕಬಳಿಸಲು ಮುಂದಾಗಿದ್ದಾರೆ. ಈ ಗುಡ್ಡ ಖನಿಜ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿದ್ದು, ಈಗಾಗಲೇ ಈ ಪ್ರದೇಶದಲ್ಲಿ ಅಕ್ರಮವಾಗಿ ಮನೆ ಕಟ್ಟಲಾಗಿದೆ. ಜೊತೆಗೆ ಗುಡ್ಡವನ್ನೇ ಕರಗಿಸಲಾಗುತ್ತಿದೆ ಎಂದು ದೂರಿದರು.

ಚಂದ್ರಪ್ಪ ಅವರ ಈ ಅಕ್ರಮ ಕಾರ್ಯ ಗೊತ್ತಿದ್ದೂ ಏನೂ ಮಾತನಾಡದ ಸ್ಥಿತಿಗೆ ಜಿಲ್ಲಾ, ತಾಲೂಕು ಆಡಳಿತದ ಅಧಿಕಾರಿಗಳು ತಲುಪಿದ್ದಾರೆ. ಒಂದು ವೇಳೆ ಪ್ರಶ್ನೀಸಿದರೆ ಅಧಿಕಾರಿಗಳ ವಿರುದ್ಧ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳುವ ಮೂಲಕ ಅವರನ್ನು ಕಟ್ಟಿಹಾಕುವ ಕಾರ್ಯ ನಡೆಯುತ್ತಿದೆ ಎಂದು ದೂರಿದರು.

ಸರ್ಕಾರ ನಮ್ಮದೇ ಇದೆ. ಹಾಗೆಂದು ನಾವು ಅಧಿಕಾರಿಗಳು ಮಾಡುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತದೆ ಇರಲು ಸಾಧ್ಯವೇ ಇಲ್ಲ. ಎಷ್ಟೇ ಬಲಶಾಲಿಯಾಗಿದ್ದರೂ ನ್ಯಾಯದ ಹಾದಿಯಲ್ಲಿ ಅಧಿಕಾರಿಗಳು ಸಾಗಬೇಕು. ಬಡಜನರಿಗೆ ಅನುಕೂಲ ಮಾಡಿಕೊಡಲು ಶ್ರಮಿಸಬೇಕು. ಆದರೆ, ಅಧಿಕಾರಿಗಳು ಶಾಸಕನ ಒತ್ತಡಕ್ಕೆ ಮಣಿದು ತಪ್ಪು ದಾರಿಯಲ್ಲಿ ಸಾಗುತ್ತಿದ್ದಾರೆ. ಆದ್ದರಿಂದ ಬಹಿರಂಗವಾಗಿ ನಮ್ಮ ಸರ್ಕಾರದ ಆಡಳಿತದ ವಿರುದ್ಧವೇ ಮಾತನಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆಂಜನೇಯ ಹೇಳಿದರು. ಲಿಡ್ಕರ್ ಮಾಜಿ ಅಧ್ಯಕ್ಷ ಹಳಿಯೂರು ಶಂಕರ್ ಇದ್ದರು.