ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ತಮ್ಮ ಮನೆಯ ಬಡತನದ ಅರಿವಿನ ಜೊತೆಗೆ ಓದಿನ ಬಗ್ಗೆ ಛಲ, ಸಾಧನೆಗೆ ಪರಿಶ್ರಮವಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.ಇಲ್ಲಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಹಲಗೂರು ಹೋಬಳಿಯ ಸಮಸ್ತ ನಾಗರೀಕರು, ಅಭಿಮಾನಿಗಳು ಹಾಗೂ ಗುರು ವೃಂದದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಕನ್ನಡ ಮಾತ್ರ ಬರುತ್ತದೆ. ಇಂಗ್ಲಿಷ್ ಭಾಷೆ ಬರುವುದಿಲ್ಲ ಎಂದುಕೊಳ್ಳುತ್ತೇವೆ. ಆದರೆ, ಅವರಲ್ಲಿ ಸಾಧನೆ ಮಾಡುವ ಛಲವಿರುತ್ತದೆ. ನಮ್ಮ ತಂದೆ ತಾಯಿ ತುಂಬಾ ಕಷ್ಟಪಡುತ್ತಿದ್ದಾರೆ. ನಾವು ಏನನ್ನಾದರೂ ಸಾಧನೆ ಮಾಡಿ ಪೋಷಕರನ್ನು ನೆಮ್ಮದಿಯಾಗಿರಸಬೇಕು ಎಂಬುದು ಅರಿವಿರುತ್ತದೆ ಎಂದರು.ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಮಾಡುತ್ತಿರುವ ತಾಲೂಕು ಎಂದರೆ ಅದು ಮಳವಳ್ಳಿ. ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಗಲಿ, ಬೇರೆ ಯಾವುದೇ ವಿಷಯಗಳಲ್ಲಿ ಆಗಲಿ ಮಳವಳ್ಳಿ ತಾಲೂಕಿನ ಮಕ್ಕಳು ಮುಂದಿನ ಸಾಲಿನಲ್ಲಿ ನಿಲುತ್ತಾರೆ ಎಂದರು.
ಮಕ್ಕಳು ಭವಿಷ್ಯದಲ್ಲಿ ಯಾವುದೇ ಸ್ಥಾನಕ್ಕೆ ಹೋದರೂ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ನಿಮ್ಮಗಳ ಕನಸಾಗಿರಬೇಕು. ಅದನ್ನು ಪ್ರಯತ್ನಿಸಿದರೆ ಮುಂದಿನ ದಿವಸಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತ್ಯುನ್ನತ ಗುಣಮಟ್ಟದ ಶಿಕ್ಷಣ, ಗುರುಕುಲದ ಜೊತೆಗೆ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹುಟ್ಟು ಹಾಕಲು ಸುಲಭವಾಗುತ್ತದೆ ಎಂದರು.ನೀವು ನಿಮ್ಮ ಊರಿನ ನ್ಯಾಯಬೆಲೆ ಅಂಗಡಿಗಳು ಮುಚ್ಚಲು ಹೇಗೆ ಬಿಡುವುದಿಲ್ಲವೋ ಹಾಗೆಯೇ ನಿಮ್ಮ ಊರಿನ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡಬಾರದು. ನ್ಯಾಯಬೆಲೆ ಅಂಗಡಿ ಮುಚ್ಚಿ ಹೋದರೆ ಬಡವರ ಹಸಿವು ಹೆಚ್ಚಾಗುತ್ತದೆ. ಸರ್ಕಾರಿ ಶಾಲೆ ಮುಚ್ಚಿ ಹೋದರೆ ನಿಮ್ಮ ಜೇಬು ಖಾಲಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನನ್ನ 23 ವರ್ಷದ ಉದ್ಯೋಗದ ಅವಧಿಯಲ್ಲಿ ಅನುಭವದಿಂದ ಹೇಳುತ್ತೇನೆ ಗ್ರಾಮಾಂತರ ಪ್ರದೇಶದ ವ್ಯಕ್ತಿಗಳಿಗೆ ಶ್ರೀಸಾಮಾನ್ಯರ ಸಮಸ್ಯೆಗಳ ಬಗ್ಗೆ ಅರಿವಿರುವುದರಿಂದ ಅದಕ್ಕೆ ಸ್ಪಂದಿಸುವಂತಹ ವಿಶಾಲ ಮನೋಭಾವನೆ ಇರುತ್ತದೆ. ಆಡಳಿತಾತ್ಮಕ ವಿಷಯಗಳಲ್ಲಿ ಅವರು ಆಯ್ಕೆಯಾಗಿ ಆಡಳಿತ ವ್ಯವಸ್ಥೆಯಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಕುಳಿತು ಸೂಕ್ತ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತವರಾದರೆ ಅವರು ಸಮಾಜದ ಯೋಗ ಕ್ಷೇಮಕ್ಕಾಗಿ ನಿರಂತರ ಚಿಂತಿಸಬಲ್ಲರು ಎಂದು ಅಭಿಪ್ರಾಯಪಟ್ಟರು.ನಮ್ಮಲ್ಲಿ ಮಾತೃದೇವೋಭವ, ಪಿತೃದೇವೋಭವ ಆಚಾರ್ಯ ದೇವೋ ಭವ ಅತಿಥಿ ದೇವೋ ಭವ ಎಂಬಂತ ಸೂಕ್ತಿಗಳನ್ನು ಎಲ್ಲರೂ ಅರಿತಿದ್ದೇವೆ. ಅದರಲ್ಲಿ ಮತ್ತೊಂದು ನಮ್ಮಂತಹ ಕಾರ್ಯಾಂಗ ವ್ಯವಸ್ಥೆಯಲ್ಲಿರುವಂತಹ ಅಧಿಕಾರಿ ವರ್ಗದವರು ತಿಳಿದುಕೊಳ್ಳಬೇಕಾಗಿದೆ ಎಂದರು.
ರಾಷ್ಟ್ರ ದೇವೋಭವ ಎಂಬುದು ನನ್ನ ಧ್ಯೇಯ. ಅಬ್ದುಲ್ ಕಲಾಂ ಹೇಳಿರುವಂತೆ ಯಾರು ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕರಾಗಿರುತ್ತಾರೋ ಅವರು ಯಾರಿಗೂ ತಲೆಬಾಗಬೇಕಾಗಿಲ್ಲ. ಯಾರು ತಮ್ಮ ಕರ್ತವ್ಯದಲ್ಲಿ ಅಪ್ರಮಾಣಿಕತೆ ತೋರಿಸುತ್ತಾರೋ ಅವರು ಎಲ್ಲರಿಗೂ ತಲೆಬಾಗಬೇಕಾಗುತ್ತದೆ ಎಂದರು.ಸಮಾರಂಭದಲ್ಲಿ ಡಾ.ಲಕ್ಷ್ಮಿ ಅಶ್ವಿನ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಎ.ಎಸ್.ದೇವರಾಜು, ಎ,ಟಿ.ಶ್ರೀನಿವಾಸ್, ಬಸವರಾಜು, ಪುಟ್ಟಸ್ವಾಮಿ, ಕೃಷ್ಣ, ಮನೋಹರ, ಬಿ.ಕೆ.ಕೆಂಪು, ಮುನಿರಾಜು, ಎನ್. ಕೆ.ಕುಮಾರ್, ಸುರೇಶ್, ಭಾಸ್ಕರ್ ಸೇರಿದಂತೆ ಹಲವರು ಇದ್ದರು.