ರಜೆ ಮಜಾ: ಮಕ್ಕಳಿಗೆ ಆಗದಿರಲಿ ಪ್ರಾಣ ಸಜೆ

| Published : May 23 2024, 01:09 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಹೆಚ್ಚು ಉತ್ಸಾಹ, ಸಂತೋಷ. ಪಾಠದಿಂದ ಮುಕ್ತಿ ದೊರೆತು ಹಾಯಾಗಿ ಆಟದ ಜತೆಗೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಲು ಅನುಕೂಲ ಎನ್ನುವ ಆಲೋಚನೆ ಮಕ್ಕಳದ್ದು. ಇನ್ನು ಪೋಷಕರಿಗೆ ಬೇಸಿಗೆ ರಜೆ ವೇಳೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕಿಂತ ಕ್ರೀಡೆ, ಮೆಂಟಲ್‌ ಆಬಿಲಿಟಿ, ಯೋಗ, ಬೇಸಿಗೆ ಶಿಬಿರ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವ ಆತುರ

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಹೆಚ್ಚು ಉತ್ಸಾಹ, ಸಂತೋಷ. ಪಾಠದಿಂದ ಮುಕ್ತಿ ದೊರೆತು ಹಾಯಾಗಿ ಆಟದ ಜತೆಗೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಲು ಅನುಕೂಲ ಎನ್ನುವ ಆಲೋಚನೆ ಮಕ್ಕಳದ್ದು. ಇನ್ನು ಪೋಷಕರಿಗೆ ಬೇಸಿಗೆ ರಜೆ ವೇಳೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕಿಂತ ಕ್ರೀಡೆ, ಮೆಂಟಲ್‌ ಆಬಿಲಿಟಿ, ಯೋಗ, ಬೇಸಿಗೆ ಶಿಬಿರ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವ ಆತುರ.

ಸಾಮಾನ್ಯವಾಗಿ ನಗರ ಪ್ರದೇಶದಲ್ಲಿರುವ ಪೋಷಕರಿಗೆ ತಮ್ಮ ಮಕ್ಕಳು ಬೇಸಿಗೆ ರಜೆ ವೇಳೆಯೇ ಹೆಚ್ಚು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಲಿ ಎಂದು ಆಲೋಚಿಸುತ್ತಾರೆ. ಆದರೆ, ಬಹುತೇಕ ಹೋಬಳಿ, ಪಟ್ಟಣ, ಗ್ರಾಮಗಳಲ್ಲಿರುವ ಪೋಷಕರು ಮಕ್ಕಳನ್ನು ಅವರ ಗ್ರಾಮಗಳಿಗೆ ಬಿಟ್ಟು ಬರುತ್ತಾರೆ. ಹಳ್ಳಿಯ ಜೀವನ ಮಕ್ಕಳಿಗೆ ಪರಿಚಯವಾಗಲಿ, ಸಂಬಂಧಗಳು ಗಟ್ಟಿಯಾಗಲಿ ಎಂದು ಮಕ್ಕಳನ್ನು ಬಿಟ್ಟು ಬರುತ್ತಾರೆ. ಆದರೆ, ಬಹುತೇಕ ಮಕ್ಕಳು ಅಪಾಯ ತಂದುಕೊಳ್ಳುತ್ತಿರುವುದು ಇತ್ತೀಚೆಗೆ ವ್ಯಾಪಕವಾಗಿ ವರದಿಯಾಗುತ್ತಿದೆ.

ಈಜಾಡಲು ಹೋಗಿ ಜೀವ ತೆತ್ತುತ್ತಿದ್ದಾರೆ:

ಬೇಸಿಗೆ ರಜೆಗೆಂದು ಅಜ್ಜಿಯ ಮನೆಗೆ ಬಂದ 10 ವರ್ಷಕ್ಕಿಂತ ಮೇಲ್ಪಟ್ಟ 16 ವರ್ಷದೊಳಗಿನ ಮಕ್ಕಳು ಸ್ನೇಹಿತರೊಟ್ಟಿಗೆ ಈಜಾಡಲು ಹೋಗಿ ನೀರುಪಾಲಾದ ವರದಿಗಳು ಈಗ ಹೆಚ್ಚಾಗಿ ಕೇಳಿಬರುತ್ತಿವೆ. ಈ ಬಗ್ಗೆ ಮಕ್ಕಳು ಮಾತ್ರವಲ್ಲ, ಪೋಷಕರು ಕೂಡ ಹೆಚ್ಚು ಮುತುವರ್ಜಿ ವಹಿಸಬೇಕಾದ ಅನಿವಾರ್ಯತೆ ಇದೆ.

ಮೇ 20 ರಂದು ರಬಕವಿ-ಬನಹಟ್ಟಿ ತಾಲೂಕಿನ ಹೊಸೂರ ಗ್ರಾಮದ ಕೆರೆಯಲ್ಲಿ 13 ಮತ್ತು 10 ವರ್ಷದ ಇಬ್ಬರು ಮಕ್ಕಳು ಈಜಾಡಲು ಹೋಗಿ ಮೃತಪಟ್ಟಿದ್ದಾರೆ. ಅಲ್ಲದೆ, ಅದೇ ತಾಲೂಕಿನ ಹಳಿಂಗಳಿ ಗ್ರಾಮದ ಜಾಕ್‌ವೆಲ್‌ನಲ್ಲಿ 23 ವರ್ಷದ ಯುವಕ ಕೂಡ ಈಜಲು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ. ಅದರಂತೆಯೇ ವಿಜಯಪುರ ನಗರದಲ್ಲಿ ಇಂಡಿ ರಸ್ತೆಯಲ್ಲಿರುವ ಬಿಜ್ಜರಗಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಮೂರು ಮಕ್ಕಳು ಒಂಟೆಯ ಹಿಂದೆ ಹೋಗಿ, ಮರುದಿನ ಇದೆ ತ್ಯಾಜ್ಯ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದರು.

ಮೇ 21ರಂದು ಇಂಡಿಯಲ್ಲಿ ದೇಶಪಾಂಡೆ ತಾಂಡಾದಲ್ಲಿ ಈಜಾಡಲು ಹೋಗಿ ಇಬ್ಬರು ಮಕ್ಕಳು ನೀರು ಪಾಲಾಗಿದ್ದರು. ಅದರಂತೆ ಕಳೆದ ವಾರದಲ್ಲಿ ಹಾಸನ ಜಿಲ್ಲೆಯ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಈಜಲು ಹೋಗಿ 4 ಜನ ಮಕ್ಕಳು ಮೃತಪಟ್ಟಿದ್ದಾರೆ. ಇಂತಹ ಅನೇಕ ಅನಾಹುತಗಳು ಈಗ ಎಲ್ಲೆಡೆ ನಡೆಯುತ್ತಿವೆ.

ಈಜಾಡಲೆಂದು ಮಕ್ಕಳು ಕೆರೆಯತ್ತ ಸ್ನೇಹಿತರೊಟ್ಟಿಗೆ ಹೋಗುತ್ತಾರೆ. ಸ್ನೇಹಿತರ ಒತ್ತಾಯಕ್ಕೆ ಮಣಿದು ನೀರಿಗೆ ಇಳಿಯುತ್ತಾರೆ. ಆದರೆ, ಈಜು ಬಾರದೇ ನೀರಲ್ಲಿಯೇ ಅಸುನೀಗುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳು ಎಲ್ಲಿಗೆ ಹೊರಟಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಂಡ ಮೇಲೆ ಮಕ್ಕಳನ್ನು ಹೊರಗೆ ಬಿಡುವುದು ಒಳಿತು. ಜತೆಗೆ ನಿಗಾ ವಹಿಸುವುದು ಕೂಡ ಉತ್ತಮ. ಇದರ ಜತೆಗೆ ಈಗೀಗ ಮಳೆಯಾಗುತ್ತಿರುವುದರಿಂದ ನದಿ, ಕೆರೆ, ಹಳ್ಳ, ಕೊಳ್ಳಗಳಿಗೆ ನೀರು ಬರುತ್ತಿದೆ. ಹೀಗಾಗಿ ಪೋಷಕರು ಮಕ್ಕಳ ಆ ಕಡೆಗೆ ಹೋಗದಂತೆ ನೋಡಿಕೊಳ್ಳುವುದು ಉತ್ತಮ.

ರಜೆಯ ಮಜಾ ಮಕ್ಕಳಿಗೆ ಉಲ್ಲಾಸ, ಉತ್ಸಾಹ ನೀಡುವಂತಿರಬೇಕು. ಆದರೆ, ಅದೇ ರಜೆ ಮಕ್ಕಳಿಗೆ ಸಜೆಯಾಗಿ ಅವರ ಜೀವಕ್ಕೆ ಕುತ್ತು ತರುವಂತಹ ಪರಿಸ್ಥಿತಿ ನಿರ್ಮಾಣವಾಗದಿರಲಿ.

--------------

ಬಾಕ್ಸ್‌...

ಮಕ್ಕಳ ಮೇಲೆ ನಿಗಾ ವಹಿಸಲು ಡಿಸಿ ಕೋರಿಕೆ

ಮಕ್ಕಳು ಶಾಲಾ, ಕಾಲೇಜು ಅವಧಿಯಲ್ಲಿ ಸಮಾನ ವಯಸ್ಕರ ಜೊತೆಗೆ ಮೋಜಿಗಾಗಿ ಈಜಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಹೀಗಾಗಿ ಪಾಲಕರು ಮಕ್ಕಳ ಮೇಲೆ ನಿಗಾವಹಿಸುವಂತೆ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಜಾನಕಿ ಕೆ.ಎಂ ಕೋರಿದ್ದಾರೆ.

ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಕೆರೆ, ನದಿ, ನದಿ, ಜಾಕ್‌ವೆಲ್ ಹಾಗೂ ಇತರೆ ನೀರಿನ ಮೂಲಗಳ ಕಡೆಗೆ ಈಜಲು ಬಿಡದೇ ಮನೆಯಲ್ಲಿಯೇ ರಜಾ ಅವಧಿಗಳನ್ನು ಸಂತೋಷದಿಂದ ಕಳೆಯುವಂತೆ ನೋಡಿಕೊಳ್ಳಲು ಹಾಗೂ ಅವರ ಮೇಲೆ ಸೂಕ್ತ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.