ಸಾರಾಂಶ
ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸ್ಪಂದನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಜೂರಾದ ಮನೆಗಳ ಇ ಸ್ವತ್ತನ್ನು ಗ್ರಾಮ ಪಂಚಾಯಿತಿಯವರೇ ಮಾಡಿಸಿಕೊಡಬೇಕು ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಹಾಗೂ ತಹಸೀಲ್ದಾರ್ ತನುಜ ಟಿ.ಸವದತ್ತಿ ಸೂಚಿಸಿದರು.
ಶನಿವಾರ ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಂದಾಯ ಇಲಾಖೆಯಿಂದ ಮನೆ ಕಟ್ಟಿಕೊಂಡವರಿಗೆ ಹಕ್ಕು ಪತ್ರ ನೀಡುತ್ತೇವೆ. ನಂತರ ಚೆಕ್ ಬಂಧಿ ನೋಡಿಕೊಂಡು ಗ್ರಾಮ ಪಂಚಾಯಿತಿಯವರು ಇ ಸ್ವತ್ತು ಮಾಡಿಸಿಕೊಡಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿಯವರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಂದ ಸೂಕ್ತ ಸಲಹೆ ಪಡೆಯಬಹುದು. ಚೆಕ್ ಬಂಧಿ ವ್ಯತ್ಯಾಸ ಇದ್ದರೆ ಸರ್ವೇ ಮಾಡಿಸಿ ಚೆಕ್ ಬಂಧಿ ಸರಿಪಡಿಸಬೇಕು. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಂಡು ಮನೆ ಕಟ್ಟಿಕೊಂಡು ಹಕ್ಕು ಪತ್ರ ಪಡೆದವರಿಗೆ ಇ ಸ್ವತ್ತು ಮಾಡಿಸಿಕೊಡಬೇಕು ಎಂದು ಸಲಹೆ ನೀಡಿದರು.ಈ ವರ್ಷದಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಸ್ಪಂಧನ ಕಾರ್ಯಕ್ರಮ ಪ್ರತಿ ತಿಂಗಳ 3 ನೇ ಶನಿವಾರ ಒಂದೊಂದು ಗ್ರಾಮ ಪಂಚಾಯಿತಿಯಲ್ಲಿ ನಡೆಯಲಿದೆ. ತಾಲೂಕಿನಲ್ಲಿ ಪ್ರಥಮ ಬಾರಿಗೆ ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸ್ಪಂದನ ಪ್ರಾರಂಭವಾಗಿದೆ. ಗ್ರಾಮಸ್ಥರು ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ನೀಡಬಹುದು ಎಂದರು.
ಮುಖ್ಯ ಅತಿಥಿಯಾಗಿದ್ದ ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ ಮಾತನಾಡಿ, ನಾಗಲಾಪುರ ಗ್ರಾಪಂ ವ್ಯಾಪ್ತಿಯ ಜನರಿಗೆ ತಮ್ಮ ಊರಿನ ಸಮಸ್ಯೆ ಹೇಳಿಕೊಳ್ಳಲು ಉತ್ತಮ ಅವಕಾಶ ಸಿಕ್ಕಿದೆ. ಗ್ರಾಮ ಸ್ಪಂದನ ಕಾರ್ಯಕ್ರಮಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಿ ಎಂದರು.ಸಭೆಯಲ್ಲಿ ನಾಗಲಾಪುರ ಗ್ರಾಪಂ ಉಪಾಧ್ಯಕ್ಷೆ ಆಶಾ, ಸದಸ್ಯರಾದ ಶೋಭಾ, ಚಿನ್ನಯ್ಯ, ಜಯಮ್ಮ, ರಮೇಶ್, ಪಿಡಿಒ ಪ್ರೇಂ ಕುಮಾರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪ್ರಕಾಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
-- ಬಾಕ್ಸ್---ಗ್ರಾಮ ಸ್ಪಂದನದಲ್ಲಿ ಸಮಸ್ಯೆ ಅನಾವರಣ
ಗ್ರಾಮ ಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಾಮಸ್ಥರು ಮನೆಯ ಇ ಸ್ವತ್ತು, ರಸ್ತೆ, ಬೀದಿ ದೀಪ, ಕುಡಿಯವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಹೇಳಿಕೊಂಡರು.ಹಿಳುವಳ್ಳಿಯ 75 ವರ್ಷದ ವೃದ್ದೆ ರತ್ನಮ್ಮ ಮಾತನಾಡಿ, ನಾನು ಮನೆ ಕಟ್ಟಿಕೊಂಡು ಹಲವು ವರ್ಷಗಳೇ ಕಳೆದಿದೆ. ನಾನು ಮನೆಯ ಸುತ್ತ ಅಡಕೆ ತೋಟ ಮಾಡಿದ್ದೇನೆ. ಈಗ ನಾನು ಮನೆ ಕಟ್ಟಿಕೊಂಡ ಜಾಗ ಕೆರೆ ಒತ್ತುವರಿ ಭೂಮಿ ಎಂದು ನನ್ನ ಮೇಲೆ ಕೇಸು ಹಾಕಿದ್ದಾರೆ. ಈ ಹಿಂದೆ ಹಕ್ಕು ಪತ್ರ ನೀಡುವಾಗ ಆಗಿನ ತಹಸೀಲ್ದರ್ ಅವರಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಇಂದಿರಾನಗರದ ಗಣೇಶ್ ಮಾತನಾಡಿ, ನನಗೆ ಹಾಗೂ ಇಂದಿರಾ ನಗರದ ಹಲವಾರು ಮನೆಗಳಿಗೆ ಇ ಸ್ವತ್ತು ಮಾಡಿಕೊಟ್ಟಿಲ್ಲ. ಆ ಭಾಗದಲ್ಲಿ 200 ಮನೆಗಳಿವೆ. ರಸ್ತೆ ಹಾಳಾಗಿದೆ. ಚುನಾವಣೆ ಬಂದಾಗ ಎಲ್ಲರೂ ಓಟು ಕೇಳಲು ಬರುತ್ತಾರೆ. ನಂತರ ಮರೆತುಬಿಡುತ್ತಾರೆ ಎಂದು ದೂರಿದರು.ಸಿಂಸೆಯ ಸಜಿ ಮಾತನಾಡಿ, ಯಡದಾಳ್ ರಸ್ತೆ ಹಾಳಾಗಿದೆ. ಮಳೆಗಾಲದಲ್ಲಿ ವಾಹನ ಓಡಾಡಲು ತೊಂದರೆಯಾಗಿದೆ. ಕುಡಿಯುವ ನೀರಿಗೆ ಟ್ಯಾಂಕ್ ಆಗಿದ್ದರೂ ಪೈಪ್ ಲೈನ್ ಆಗಿಲ್ಲ ಎಂದರು.