ಜನರಲ್ಲಿ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ ಧ.ಗ್ರಾ.ಯೋಜನೆ: ಸುಧಾಕರ ಶೆಟ್ಟಿ ಪ್ರಶಂಸೆ

| Published : Nov 07 2025, 02:00 AM IST

ಜನರಲ್ಲಿ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ ಧ.ಗ್ರಾ.ಯೋಜನೆ: ಸುಧಾಕರ ಶೆಟ್ಟಿ ಪ್ರಶಂಸೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಅಭಿವೃದ್ಧಿ ಕಾರ್ಯದ ಜೊತೆಗೆ ಜನರಲ್ಲಿ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಅಮ್ಮ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್‌. ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.

- ಮಹಾವೀರ ಭವನದಲ್ಲಿ 2000 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಅಭಿವೃದ್ಧಿ ಕಾರ್ಯದ ಜೊತೆಗೆ ಜನರಲ್ಲಿ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಅಮ್ಮ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್‌. ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.

ಬುಧವಾರ ಬಸ್ತಿಮಠ ಮಹಾವೀರ ಭವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾರ್ಗ ದರ್ಶನದಲ್ಲಿ ನಡೆದ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಂಯುಕ್ತ ಆಶ್ರಯದಲ್ಲಿ ನಡೆದ 2000 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮದ್ಯ ವರ್ಜನ ಶಿಬಿರದಿಂದ ಮದ್ಯ ಸೇವನೆಯಿಂದ ಬಾಧಿತರಿಗೆ ಬದುಕಿನಲ್ಲಿ ಹೊಸ ಬೆಳಕು ತರುತ್ತಿದೆ. ಧ.ಗ್ರಾ. ಯೋಜನೆಯಿಂದ ಜನರ ನೈತಿಕ ಮೌಲ್ಯ, ಸಹ ಬಾಳ್ವೆ, ಸಂಸ್ಕಾರದ ಬುನಾದಿ ಗಟ್ಟಿಗೊಳಿಸುತ್ತಿದೆ. ಮದ್ಯ ಸೇವನೆ ಕೇವಲ ಒಂದು ದುಶ್ಚಟ ಮಾತ್ರವಲ್ಲ. ಅದು ದುರಂತವಾಗಿದೆ. ಇಂದು ಮದ್ಯ ಸೇವನೆಯಿಂದ ಸಾವಿರಾರು ಬಡ ಕುಟುಂಬಗಳು ಬೀದಿಗೆ ಬಂದಿದೆ. ಅವರ ಕುಟುಂಬದವರು ನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಸಾದ್ಯವಾಗದೆ ಕೆಲಸಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ ಎಂದರು.

ಕುಟುಂಬದ ಯಜಮಾನ ಮದ್ಯದ ವ್ಯಸನಕ್ಕೆ ಸಿಕ್ಕಿದರೆ ಅವರ ಕುಟುಂಬ ಮಾತ್ರವಲ್ಲ ಆ ಪೀಳಿಗೆಯೇ ಹಾಳಾಗುತ್ತದೆ. ಮದ್ಯದಂಗಡಿ ಮಾಲೀಕರು ಹಾಲಿನ ರೀತಿ ಮನೆ, ಮನೆಗೆ ಮದ್ಯ ಸರಬರಾಜು ಮಾಡುತ್ತಿದ್ದು ಅಂತವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಮ್ಮ ಅಮ್ಮ ಪೌಂಡೇಷನ್‌ ಈಗಾಗಲೇ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿದೆ. ಮುಂದಿನ ದಿನಗಳಲ್ಲಿ ಧ.ಗ್ರಾ.ಯೋಜನೆ ಜೊತೆ ಸೇರಿ ಮದ್ಯ ವರ್ಜನೆ ಮತ್ತು ನಿಷಾ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.

ಅತಿಥಿಯಾಗಿದ್ದ ಚಿಕ್ಕಮಗಳೂರು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ, ಶಿಬಿರಾರ್ಥಿಗಳು ಧರ್ಮಸ್ಥಳಕ್ಕೆ ಹೋದಾಗ ದೇವರ ಮುಂದೆ ನಿಂತು ಮುಂದೆ ನಾನು ಕುಡಿಯುವುದಿಲ್ಲ ಎಂದು ಸಂಕಲ್ಪ ಮಾಡಬೇಕು. ಆಗ ನಿಮ್ಮ ಸಂಸ್ಕಾರ, ವ್ಯಕ್ತಿತ್ವ ಬೆಳೆಯುತ್ತದೆ. ಪ್ರತಿ ತೀರ್ಥ ಕ್ಷೇತ್ರಕ್ಕೆ ಹೋದಾಗ ಒಂದೊಂದು ದುರಬ್ಯಾಸ ಬಿಡಬೇಕು. ನಾನು ಕೆಟ್ಟ ಕೆಲಸ ಮಾಡುವುದಿಲ್ಲ. ಅನ್ಯಾಯ, ಭ್ರಷ್ಟಾಚಾರ ಮಾಡುವುದಿಲ್ಲ. ನಾನು ಅಬ್ದುಲ್ ಕಲಾಂ , ಡಾ.ವೀರೇಂದ್ರ ಹೆಗ್ಡೆಯಂತೆ ಬದುಕುತ್ತೇನೆ ಎಂದು ದೃಡ ಸಂಕಲ್ಪ ಮಾಡಬೇಕು. ಇದೇ ನಾವು ದೇವರಿಗೆ ಮಾಡುವ ನಿಜವಾದ ಪೂಜೆ. ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಗ್ರಂಥಗಳಲ್ಲಿ ಮಾದಕ ವಸ್ತುಗಳ ಸೇವನೆ ನಿಷೇದದ ಬಗ್ಗೆ ಬರೆಯಲಾಗಿದೆ. ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಡೆ ಅವರ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು.

ನಮ್ಮ ಮನಸ್ಸು ಹಾಗೂ ಬುದ್ದಿಗಳಲ್ಲಿ ತಿಕ್ಕಾಟ ಬರುತ್ತದೆ. ಮನಸ್ಸು ಕೆಟ್ಟ ಆಲೋಚನೆಗಳಿಗೆ ಎಳೆಯುತ್ತದೆ. ಆಗ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಒಳ್ಳೆಯ ಚಿಂತನೆ ಮಾಡಬೇಕು ಎಂದು ಕರೆ ನೀಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ 2000 ನೇ ಮದ್ಯ ವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಮಲೆನಾಡು ಭಾಗದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆಯಾಗಿ ಶಿಬಿರ ಆಯೋಜನೆ ಮಾಡುವ ಸಂದರ್ಭವೇ ಬರದಿರಲಿ ಎಂದು ಆಶಿಸುತ್ತೇನೆ. ನರಸಿಂಹರಾಜಪುರದಲ್ಲಿ ಕಳೆದ ಮದ್ಯ ವರ್ಜನ ಶಿಬಿರದಲ್ಲಿ 130 ಶಿಬಿರಾರ್ಥಿಗಳು ಇದ್ದರು. ಈ ಬಾರಿ 44 ಶಿಬಿರಾರ್ಥಿಗಳು ಇದ್ದಾರೆ. 7 ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಹೊಸ ಜೀವನ ನೀಡಲಾಗಿದೆ. ಮದ್ಯವರ್ಜನ ಶಿಬಿರಕ್ಕೆ ಹಲವು ದಾನಿಗಳು ಕೈಜೋಡಿಸಿದ್ದಾರೆ ಎಂದರು.

ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಮದ್ಯವ್ಯಸನಿಗಳನ್ನು ಸಮಾಜ ಕೆಟ್ಟ ದೃಷ್ಠಿಯಿಂದ ನೋಡುತ್ತದೆ. ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಡೆ ಅವರ ವ್ಯಸನ ಮುಕ್ತ ರಾಜ್ಯದ ಕನಸು ನನಸಾಗುತ್ತಿದೆ ಎಂದರು.

ಸಭೆಯಲ್ಲಿ ದಾನಿ ಗದ್ದೇಮನೆ ಅಣ್ಣೇಗೌಡ, 2000 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಎನ್‌.ಎಂ.ಕಾಂತರಾಜ್,ಕಳ್ಳಿಕೊಪ್ಪದ ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಸತೀಶ್,ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ, ಮದ್ಯ ವರ್ಜನ ಸಮಿತಿ ಉಪಾಧ್ಯಕ್ಷೆ ಪ್ರೇಮ ಶ್ರೀನಿವಾಸ್, ಧ.ಗ್ರಾ.ಯೋಜನೆ ಕೊಪ್ಪ, ಎನ್‌.ಆರ್.ಪುರ ತಾಲೂಕು ಯೋಜನಾಧಿಕಾರಿ ರಾಜೇಶ್, ಶೌರ್ಯ ನಿಪತ್ತು ತಂಡದ ರಾಘವೇಂದ್ರ ಇದ್ದರು. ಶಿಬಿರಾಧಿಕಾರಿ ವಿದ್ಯಾಧರ ಮಾತನಾಡಿದರು.

ನಂತರ ಶಿಬಿರದ ಯಶಸ್ಸಿಗೆ ಸಹಾಯ ಮಾಡಿದ ದಾನಿಗಳು ಹಾಗೂ ಯೋಜನೆ ಪದಾಧಿಕಾರಿಗಳಿಗೆ ಗೌರವಿಸಲಾಯಿತು.

-- ಬಾಕ್ಸ್ --

ಸಮಾರೋಪ ಸಮಾರಂಭಕ್ಕೂ ಮೊದಲು ಕುಟುಂಬದ ದಿನ ಕಾರ್ಯಕ್ರಮದಲ್ಲಿ 44 ಶಿಬಿರಾರ್ಥಿಗಳಿಗೆ ಅವರ ಪತ್ನಿ ಯೊಂದಿಗೆ ಕಲಶ ಪೂಜೆ, ಕ್ಷಮಾದಾನ, ಪುನರ್ಜನ್ಮ, ಮರು ಮದುವೆ, ಅಕ್ಷತೆ ಕಾಳು ಹಾಕಿ ಆಶೀರ್ವಚನ, ಪತ್ನಿಗೆ ಹೂ ಮುಡಿಸುವುದು, ದೇವರಲ್ಲಿ ಸಂಕಲ್ಪ ಕಾರ್ಯಕ್ರಮ ಬದಲಾದ ಶಿಬಿರಾರ್ಥಿ ಗಳಿಗೆ ಆತ್ಮ ವಿಶ್ವಾಸ ಮೂಡಿಸುವ ಅಧ್ಯಾತ್ಮಿಕ ಕಾರ್ಯಕ್ರಮಹಿನ್ನೆಲೆ ಸಂಗೀತದೊಂದಿಗೆ ನಡೆಯಿತು. ಚಿತ್ರದುರ್ಗದ ಜನ ಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಕಾರ್ಯಕ್ರಮ ನಡೆಸಿಕೊಟ್ಟರು.