ಕೊಡಗು ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಆಗಿಲ್ಲ: ತೆನ್ನಿರ ಮೈನಾ

| Published : Dec 05 2023, 01:30 AM IST

ಕೊಡಗು ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಆಗಿಲ್ಲ: ತೆನ್ನಿರ ಮೈನಾ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವ ಅಭಿವೃದ್ಧಿ ನಿಗಮ

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡವ ಅಭಿವೃದ್ಧಿ ನಿಗಮಕ್ಕೆ ಈ ವರೆಗೆ ಜಿಲ್ಲಾಧಿಕಾರಿ ಪಿ.ಡಿ. ಖಾತೆಗೆ ಯಾವುದೇ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆಯಲಾದ ದಾಖಲೆಗಳ ಮೂಲಕ ದೃಢಪಟ್ಟಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರತಾಪ ಸಿಂಹ ಕೊಡವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ ಸರ್ಕಾರ ರು.10 ಕೋಟಿ ಅನುದಾನ ನೀಡಿದ್ದು, ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿದೆ ಎಂದು ಹೇಳಿಕೆ ನೀಡಿದ್ದರು. ತಾನು ಈ ಬಗ್ಗೆ ಮಾಹಿತಿ ಹಕ್ಕುವಿನಲ್ಲಿ ಅರ್ಜಿ ಸಲ್ಲಿಸಿದ್ದು, ಕಚೇರಿಯಿಂದ ಉತ್ತರ ಬಂದಿದ್ದು, ಕೊಡವ ಅಭಿವೃದ್ಧಿ ನಿಗಮಕ್ಕೆ ಯಾವುದೇ ಅನುದಾನ ಬಂದಿಲ್ಲ ಎಂದು ಸ್ಪಷ್ಟವಾಗಿದೆ ಎಂದರು.ಪ್ರತಾಪ ಸಿಂಹ ಅವರು ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಾ ಜನರ ದಾರಿ ತಪ್ಪಿಸುತ್ತಿದ್ದು ಕೂಡಲೇ ಕೊಡಗು ಜಿಲ್ಲೆಯ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಆಡಳಿತದ ಅವಧಿಯಲ್ಲಿ ಕೊಡವ ಅಭಿವೃದ್ಧಿ ನಿಗಮಕ್ಕೆ ಹತ್ತು ಕೋಟಿ ನೀಡಿರುವುದಾಗಿ ಅವರು ವಿರಾಜಪೇಟೆಯ ಕೊಡವ ಸಮಾಜದ ಕಾರ್ಯಕ್ರಮ ಒಂದರಲ್ಲಿ ವೇದಿಕೆಯಲ್ಲಿ ಬಹಿರಂಗಪಡಿಸಿದರು. ಆ ಕಾರ್ಯಕ್ರಮದಲ್ಲಿದ್ದ ಶಾಸಕ ಎ.ಎಸ್. ಪೊನ್ನಣ್ಣ ಯಾವುದೇ ಹಣ ಬಿಡುಗಡೆ ಆಗಿಲ್ಲವೆಂದು ಸ್ಪಷ್ಟಪಡಿಸಿದ್ದರು. ಆದರೂ ಸಂಸದರು ಇದುವರೆಗೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡೆ ಹೇಳಿಕೆಗಳನ್ನು ನೀಡುತ್ತಿದ್ದರು ಎಂದರು. ಮಡಿಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಸುವರ್ಣ ಕರ್ನಾಟಕ ಭವನ 2016 ರಲ್ಲಿ ಐದು ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಅಂದಿನ ಶಾಸಕರ ನಿರ್ಲಕ್ಷ್ಯದಿಂದ ಬೇಜವಾಬ್ದಾರಿ ತನದಿಂದ ಪೂರ್ಣಗೊಳ್ಳದೆ 2020 ರಲ್ಲಿ ಗಡಿ ಪ್ರದೇಶ ಅಭಿವೃದ್ದಿ ನಿಗಮದಿಂದ ಬಂದ ಐದು ಕೋಟಿ ರು.ಗಳ ಅನುದಾನವನ್ನು ಎರಡನೇ ಹಂತದ ಕಾಮಗಾರಿ ಎಂದು ಬಳಕೆ ಮಾಡಲಾಯಿತು.ಆದರೂ ಕೂಡ ಅದು ಪೂರ್ಣವಾಗಲಿಲ್ಲ. 2018 ರಲ್ಲಿ ಲೋಕಾರ್ಪಣೆ ಆಗಬೇಕಿದ್ದು ಮಡಿಕೇರಿ ತಾಲೂಕು ಸೌಧ ಕೂಡ ಒಂದನೇ ಹಂತದ ಐದು ಕೋಟಿ ರೂಗಳನ್ನು ವ್ಯಯಿಸಿ ಮತ್ತೆ ಹೆಚ್ಚುವರಿಯಾಗಿ ಗಡಿ ಪ್ರದೇಶ ಅಭಿವೃದ್ಧಿಯಿಂದ ರು.5 ಕೋಟಿ ರೂಗಳನ್ನು ಬಳಕೆ ಮಾಡಿ ಇನ್ನೂ ಮುಕ್ತಾಯವಾಗಿಲ್ಲ ಎಂದು ಆರೋಪಿಸಿದರು. ಡಿಸಿಸಿ ಸದಸ್ಯರಾದ ಅಬ್ದುಲ್ ರಜಾಕ್, ಕೇಟೋಳಿರ ಮೋಹನ್ ರಾಜ್, ಅಯಿಲಪಂಡ ಪುಷ್ಪ ಪೂಣಚ್ಚ,ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಡಿರ ಸದಾ ಮುದ್ದಪ್ಪ, ಮಡಿಕೇರಿ ಬ್ಲಾಕ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ಕೆ.ಜೆ.ಪೀಟರ್ ಇದ್ದರು.