ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಕ್ಷೇತ್ರ ಶಾಸಕ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಇತ್ತೀಚೆಗೆ ನಡೆದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪುಢಾರಿಗಳು ಎಂದು ಹೀಗಳೆದು ಸ್ಥಾನದ ಗೌರವಕ್ಕೆ ಧಕ್ಕೆ ತಂದಿದ್ದಾರೆ. 1980ರ ಆಸುಪಾಸಿನಲ್ಲಿ ಸಚಿವರಾಗಿದ್ದ ಯಂಕಟಪ್ಪ ಅವರ ಮನೆಗೆ ಬೆಂಬಲಿಗರ ಮೂಲಕ ಕಲ್ಲು ಹೊಡೆಸಿ, ಕುಟುಂಬಸ್ಥರ ವಿರುದ್ಧ ಹಲ್ಲೆಗೆ ಯತ್ನಿಸಿದ್ದ ಯಡಿಯೂರಪ್ಪ ಅವರನ್ನು ಈಗ ಹೇಗೆ ಕರೆಯಬೇಕು ಎಂಬುದು ವಿಜಯೇಂದ್ರ ತಿಳಿಸಿಕೊಡಲಿ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ತಾಲೂಕು ವಕ್ತಾರ ಮಾಲತೇಶ್ ಭಂಡಾರಿ ಹೇಳಿದರು.ಪಟ್ಟಣದ ಸುದ್ದಿಮನೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರಾದ ವಿಜಯೇಂದ್ರ ಇತ್ತೀಚೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಈ ದಿಸೆಯಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪುಢಾರಿಗಳು ಎಂದು ಕೇವಲವಾಗಿ ಸಂಬೋಧಿಸಿ ಸ್ಥಾನದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅವರ ಬಾಲಿಶ ಹೇಳಿಕೆ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
ಯಂಕಟಪ್ಪ ಸಚಿವರಾಗಿದ್ದಾಗ ಯಡಿಯೂರಪ್ಪ ಅವರು ಬೆಂಬಲಿಗರ ಮೂಲಕ ಸಚಿವರ ಮನೆ ಮೇಲೆ ಕಲ್ಲುಹೊಡೆಸಿ, ಕುಟುಂಬಸ್ಥರ ವಿರುದ್ಧ ಹಲ್ಲೆಗೆ ಪ್ರಯತ್ನಿಸಿದ್ದರು. ಬೈರನಹಳ್ಳಿ ಹಾಲಪ್ಪ ಅವರನ್ನು ಕತ್ತೆ ಮೇಲೆ ಕುಳ್ಳಿರಿಸಿ, ಮೆರವಣಿಗೆ ನಡೆಸಿದರು. ಇಂಥ ಯಡಿಯೂರಪ್ಪ ಅವರನ್ನು ಏನೆನ್ನಬೇಕು? ವಿಜಯೇಂದ್ರ ಜನತೆಗೆ ಉತ್ತರಿಸಲಿ. ನ್ಯಾಯಮೂರ್ತಿ ಸಂತೋಷ ಹೆಗ್ಡೆ ವರದಿ ಆಧಾರದಲ್ಲಿ ರಾಜಿನಾಮೆ ನೀಡಿದ ಯಡಿಯೂರಪ್ಪ ಅವರು ಹೋಗಿದ್ದೆಲ್ಲಿಗೆ ಎಂದು ಪ್ರಶ್ನಿಸಿದ ಅವರು, ವಿಜಯೇಂದ್ರ ಈ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗಲಿದೆ ಎಂದರು.ಕೆಎಚ್‌ಬಿ ಬಡಾವಣೆಯಲ್ಲಿ ಅಪೂರ್ಣವಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ತರಾತುರಿಯಲ್ಲಿ ಉದ್ಘಾಟಿಸಿದರು. ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಅಸ್ಥಿತ್ವದ ನಂತರವೂ ಸಂಪೂರ್ಣಗೊಂಡ ಆಸ್ಪತ್ರೆಯನ್ನು ಪುನಃ ಹೋಮ ಹವನದ ಮೂಲಕ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಉಸ್ತುವಾರಿ ಸಚಿವರ ಗಮನಕ್ಕೆ ತಾರದೇ ಚಾಲನೆ ನೀಡಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಸತತ 4 ದಶಕ ಶಾಸಕ, ಡಿಸಿಎಂ, ಸಿಎಂ ಆಗಿ ಎಲ್ಲ ಅಧಿಕಾರ ಅನುಭವಿಸಿದ ಯಡಿಯೂರಪ್ಪ ಅವರು ತಾಲೂಕಿನ ನಿವೇಶನರಹಿತ ಬಡವರಿಗೆ ಉಚಿತ ನಿವೇಶನ ವಿತರಿಸಲಿಲ್ಲ. ಸಾಗುವಳಿದಾರರಿಗೆ ಹಕ್ಕುಪತ್ರ ದೊರಕಿಸಿಲ್ಲ. ಒತ್ತುವರಿದಾರ ಬಗರ್‌ಹುಕುಂ ರೈತರಿಗೆ ₹5 ಸಾವಿರ ದಂಡ, ಒಂದು ವರ್ಷ ಜೈಲು ಶಿಕ್ಷೆಯ ಕಠಿಣ ಕಾನೂನು ಜಾರಿಗೊಳಿಸಿದ ಕೀರ್ತಿ ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನ ಮಹಿಳೆಯರಿಗೆ ಅಂದಾಜು ₹10 ಕೋಟಿ, ಉಚಿತ ವಿದ್ಯುತ್, ಉಚಿತ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತಿತರ ಹಲವು ಜನಪರ ಯೋಜನೆಯನ್ನು ಸಿದ್ದರಾಮಯ್ಯ ಜಾರಿಗೊಳಿಸಿದ್ದು, ಯಡಿಯೂರಪ್ಪ ಅವರ ನೂರಾರು ಕೋಟಿ ಅನುದಾನದ ಕಾಮಗಾರಿಗಳು ಶೇ.40 ಕಮಿಷನ್ ಕಾಮಗಾರಿಯಾಗಿದೆ ಎಂದು ಟೀಕಿಸಿದರು.ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಕಸಬಾ ಬ್ಯಾಂಕ್ ಅಧ್ಯಕ್ಷ ಪಾಲಾಕ್ಷಪ್ಪ ಬಡಗಿ ಮಾತನಾಡಿದರು. ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಸ್ಲಂಬಾಷಾ ಮುಖಂಡ ಮುನಿಯಪ್ಪ ದಿಂಡದಹಳ್ಳಿ, ಶಫಿಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.
- - - ಕೋಟ್ 4 ಬಾರಿ ಸಿಎಂ ಎಂಬ ಹೆಗ್ಗಳಿಕೆಯ ಯಡಿಯೂರಪ್ಪ ಅವರು ಬಹುಮತಕ್ಕೆ ಅಗತ್ಯವಾದ 113 ಶಾಸಕರನ್ನು ಒಂದು ಬಾರಿಯೂ ಗೆಲ್ಲಿಸಲಿಲ್ಲ. ಹಿರಿಯ ನಾಯಕರನ್ನು ಕಡೆಗಣಿಸಿ ಪುತ್ರವ್ಯಾಮೋಹದಿಂದ ಒತ್ತಡದ ಮೂಲಕ ಪುತ್ರ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷರಾಗಿಸಿದ್ದಾರೆ. ವಿಜಯೇಂದ್ರರ ಹಗುರ ಹೇಳಿಕೆಯಿಂದ ಜೆಡಿಎಸ್ ರೀತಿಯಲ್ಲಿ ಬಿಜೆಪಿ ಪತನ ಕಾಲ ದೂರವಿಲ್ಲ- ಮಾಲತೇಶ್ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ
- - --4ಕೆಎಸ್.ಕೆಪಿ1: ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ವಕ್ತಾರ ಭಂಡಾರಿ ಮಾಲತೇಶ್ ಮಾತನಾಡಿದರು.