ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿತಾಲೂಕಿನ ದೋಟಿಹಾಳ ಗ್ರಾಮದಲ್ಲಿರುವ ಖಾದಿ ಗ್ರಾಮದ್ಯೋಗ ಕೇಂದ್ರ ಸ್ಥಗಿತಗೊಂಡು ಸುಮಾರು ಮೂರು ವರ್ಷ ಗತಿಸಿದರೂ ಅದನ್ನು ಪ್ರಾರಂಭ ಮಾಡುವ ಕೆಲಸವನ್ನು ಸಹಕಾರ ಇಲಾಖೆಯ ಅಧಿಕಾರಿಗಳು ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಗ್ರಾಮದ ಖಾದಿ ಗ್ರಾಮದ್ಯೋಗ ಕೇಂದ್ರವು ಸುಮಾರು ವರ್ಷಗಳಿಂದ ಮುಚ್ಚಿದ ಬಾಗಿಲು ತೆರೆದೇ ಇಲ್ಲ. ಈ ಕುರಿತು ಗಮನ ಹರಿಸಬೇಕಾದ ಅಧಿಕಾರಿಗಳು ಸಹಿತ ನಮಗೇನೂ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡತನ ಮೆರೆಯುತ್ತಿದ್ದಾರೆ. ಇದು ಸಹಕಾರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಮೂರು ವರ್ಷಗಳ ಹಿಂದೆ ಈ ಖಾದಿ ಗ್ರಾಮದ್ಯೋಗ ಕೇಂದ್ರದ ಕಾರ್ಯದರ್ಶಿಯಾಗಿದ್ದ ನಾರಾಯಣಪ್ಪ ಪತ್ತಾರ ನಿಧನರಾದ ಬಳಿಕ ಕೇಂದ್ರದ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಆದರೂ ಸಹಿತ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅಧಿಕಾರಿಗಳ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಕೇಂದ್ರದಲ್ಲಿ ನೆಯುವ ಮಗ್ಗಗಳು, ನೂಲು ಸೇರಿದಂತೆ ಲಕ್ಷಾಂತರ ರುಪಾಯಿ ಸಾಮಗ್ರಿಗಳು ತುಂಬಿಕೊಂಡಿವೆ. ಆದರೆ ಅವೆಲ್ಲವೂ ಧೂಳು ತಿನ್ನುತ್ತಿವೆ. ಅಧಿಕಾರಿಗಳ ನಿರ್ಲಕ್ಷದಿಂದ, ನಿರ್ವಹಣೆ ಕೊರತೆಯಿಂದ ಸಂಪೂರ್ಣವಾಗಿ ಕೆಲಸ ನಿಲ್ಲಿಸಿವೆ. ಇದನ್ನೇ ಅವಲಂಬಿಸಿದ್ದ ಕೆಲವು ನೇಕಾರ ಕುಟುಂಬಗಳು ಬದುಕು ಸಾಗಿಸಲು ಚರಕ ಕೈಬಿಟ್ಟು ಪರ್ಯಾಯ ಮಾರ್ಗದತ್ತ ಸಾಗುವಂತಾಗಿದೆ.ಕ್ರಮ: ನಾನು ಬಡ್ತಿ ಮೇಲೆ ಇತ್ತೀಚೆಗೆ ಬಂದಿದ್ದು, ಎರಡು ಮೂರು ದಿನಗಳಲ್ಲಿ ದೋಟಿಹಾಳ ಖಾದಿ ಗ್ರಾಮದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ, ಕ್ರಮ ಕೈಗೊಳ್ಳುವೆ ಎಂದು ಕುಷ್ಟಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುರೇಶ ಬಿರಾದಾರ ಪಾಟೀಲ ಹೇಳಿದರು.ನಿರ್ಲಕ್ಷ್ಯ: ದೋಟಿಹಾಳದ ಖಾದಿ ಗ್ರಾಮದ್ಯೋಗ ಕೇಂದ್ರದ ಕುರಿತು ಸಹಕಾರಿ, ಜವಳಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದು, ಕೂಡಲೇ ಕಾರ್ಯದರ್ಶಿಯ ನೇಮಕ, ಆಡಳಿತ ಮಂಡಳಿ ಚುನಾವಣೆ ಮೂಲಕ ಸ್ಥಗಿತಗೊಂಡ ಸೊಸೈಟಿ ಮುನ್ನಡೆಸಬೇಕು ಎಂದು ಹೋರಾಟಗಾರ ಶ್ರೀನಿವಾಸ ಕಂಟ್ಲಿ ಹೇಳಿದರು.
;Resize=(128,128))
;Resize=(128,128))
;Resize=(128,128))