ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ವಿವಿಧ ಗ್ರಾಮಗಳ ರೈತರ ತೋಟಗಳಲ್ಲಿನ ಉತ್ಪನ್ನಗಳು ಹಾಗೂ ಕೃಷಿ ಸಾಮಗ್ರಿಗಳ ಕಳ್ಳತನ ಹೆಚ್ಚುತ್ತಿರುವ ಹಿನ್ನೆಲೆ ಕಳ್ಳರನ್ನು ಶೀಘ್ರ ಬಂಧಿಸಿ, ರಾತ್ರಿ ಪಹರೆಯನ್ನು ಬಿಗಿಗೊಳಿಸುವಂತೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಹಾಗೂ ದ್ರಾಕ್ಷಿ ಬೆಳೆಗಾರರ ಚಿಕ್ಕಬಳ್ಳಾಪುರ ಸಂಘವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರಿಗೆ ಮನವಿ ಸಲ್ಲಿಸಿತು.

ನಗರ ಹೊರವಲಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ದ್ರಾಕ್ಷಿ ಬೆಳೆಗಾರರ ಸಂಘದ ಪದಾಧಿಕಾರಿಗಳು, ಪ್ರಗತಿಪರ ಕೃಷಿಕ ಕೆ.ಆ‌ರ್.ರೆಡ್ಡಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ತಾಲೂಕಿನ ನಂದಿ ಹೋಬಳಿಯ ಕೊಳವನಹಳ್ಳಿ ಗ್ರಾಮದ ರೈತ ಬಸವರಾಜು ಅವರ ತೋಟದಲ್ಲಿ ಕಟಾವಿಗೆ ಸಿದ್ಧವಾಗಿದ್ದ ಸುಮಾರು 2 ಟನ್‌ಗೂ ಅಧಿಕ ರೆಡ್ ಗ್ಲೋಬ್ ದ್ರಾಕ್ಷಿಯನ್ನು ಎರಡು ದಿನಗಳ ಹಿಂದೆ ಕಳ್ಳರು ಕಳವು ಮಾಡಿದ್ದು, ಇದರಿಂದ ಸುಮಾರು ₹3 ಲಕ್ಷ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಇದೇ ರೀತಿ ಕೆಲ ತಿಂಗಳ ಹಿಂದೆ ನಂದಿ ಕ್ರಾಸ್ ಸುತ್ತಮುತ್ತ ಕುರಿಗಳು, ಕೊಳವೆಬಾವಿ ಪಂಪ್ ಸೆಟ್‌ ಗಳು ಹಾಗೂ ವಿದ್ಯುತ್ ಕೇಬಲ್‌ಗಳ ಕಳ್ಳತನವೂ ನಡೆದಿದ್ದು, ನಿರಂತರ ಕಳ್ಳತನಗಳಿಂದ ರೈತರು ಆತಂಕಕ್ಕೊಳಗಾಗಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.


ಈಗಾಗಲೇ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಇಂತಹ ಕಳ್ಳತನಗಳು ಮತ್ತಷ್ಟು ಹೊರೆ ತಂದಿದ್ದು, ಕಳ್ಳರನ್ನು ಕೂಡಲೇ ಬಂಧಿಸುವುದು, ರೈತರ ತೋಟಗಳಲ್ಲಿ ರಾತ್ರಿ ಪೊಲೀಸ್ ಪಹರೆಯನ್ನು ಹೆಚ್ಚಿಸುವುದು ಹಾಗೂ ರೈತರ ಬೆಳೆ ಮತ್ತು ಕೃಷಿ ಸಾಮಗ್ರಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿಕ ಸಮಾಜ ಹಾಗೂ ದ್ರಾಕ್ಷಿ ಬೆಳೆಗಾರರ ಸಂಘ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ಬಸವರಾಜು, ಮುನಿರಾಜು, ಅಶ್ವತ್ಥಪ್ಪ, ಜಯರಾಮ್, ಆದಿನಾರಾಯಣಪ್ಪ, ಮುನಿಕೃಷ್ಣ, ದಯಾನಂದ್, ಶ್ರೀನಿವಾಸ್ ಇದ್ದರು.