ತಲೆನೋವು, ಅಪಸ್ಮಾರ, ಬುದ್ಧಿಮಾಂದ್ಯತೆ ಮತ್ತು ಪಾರ್ಶ್ವವಾಯುನಂತಹ ನಾಲ್ಕು ಪ್ರಮುಖ ನರವೈಜ್ಞಾನಿಕ ಸಮಸ್ಯೆಗಳನ್ನು ಪರಿಹರಿಸಲು ಭೌತಚಿಕಿತ್ಸೆಯ ಸಲಕರಣೆಗಳು ನೆರವಾಗಲಿದೆ. ರೋಗಿಯ ಫಲಿತಾಂಶಗಳನ್ನು ಸುಧಾರಿಸಲು ಆರಂಭಿಕ ಗುರುತಿಸುವಿಕೆ, ಸಕಾಲಿಕ ಚಿಕಿತ್ಸೆ ಮತ್ತು ಟೆಲಿ- ನರಶಾಸ್ತ್ರ, ಟೆಲಿ- ಪುನರ್ವಸತಿ ಮತ್ತು ಭೌತಚಿಕಿತ್ಸೆಯ ಸೇವೆಗಳ ಲಭ್ಯತೆಯ ಮಹತ್ವ ತಿಳಿಸಲಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿರುವ ಮೆದುಳು ಆರೋಗ್ಯ ಕೇಂದ್ರಕ್ಕೆ (ಬಿಎಚ್‌ಸಿ) ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಂಸ್ಥೆಯಿಂದ ಕೊಡುಗೆ ನೀಡಿರುವ ಭೌತಚಿಕಿತ್ಸೆಯ ಸಲಕರಣೆಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಕುಮಾರ್ ಅವರು ಚಾಲನೆ ನೀಡಿದರು.ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿ ಸಿಮ್ಸ್ ನಲ್ಲಿ ನರರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಸಲುವಾಗಿ ಸ್ಥಾಪಿಸಲಾಗಿರುವ ಮೆದುಳು ಆರೋಗ್ಯ ಕೇಂದ್ರಕ್ಕೆ ನೀಡಲಾಗಿರುವ ಭೌತಚಿಕಿತ್ಸೆಯ ಸಲಕರಣೆಗಳನ್ನು ಆರೋಗ್ಯಾಧಿಕಾರಿಗಳು ಟೇಪ್ ಕತ್ತರಿಸುವ ಮೂಲಕ ಸಾರ್ವಜನಿಕರ ಉಚಿತ ಸೇವೆಗೆ ಸಮರ್ಪಿಸಿದರು.
ಇದೇ ವೇಳೆ ಮಾತನಾಡಿದ ಅವರು, ತಲೆನೋವು, ಅಪಸ್ಮಾರ, ಬುದ್ಧಿಮಾಂದ್ಯತೆ ಮತ್ತು ಪಾರ್ಶ್ವವಾಯುನಂತಹ ನಾಲ್ಕು ಪ್ರಮುಖ ನರವೈಜ್ಞಾನಿಕ ಸಮಸ್ಯೆಗಳನ್ನು ಪರಿಹರಿಸಲು ಭೌತಚಿಕಿತ್ಸೆಯ ಸಲಕರಣೆಗಳು ನೆರವಾಗಲಿದೆ. ರೋಗಿಯ ಫಲಿತಾಂಶಗಳನ್ನು ಸುಧಾರಿಸಲು ಆರಂಭಿಕ ಗುರುತಿಸುವಿಕೆ, ಸಕಾಲಿಕ ಚಿಕಿತ್ಸೆ ಮತ್ತು ಟೆಲಿ- ನರಶಾಸ್ತ್ರ, ಟೆಲಿ- ಪುನರ್ವಸತಿ ಮತ್ತು ಭೌತಚಿಕಿತ್ಸೆಯ ಸೇವೆಗಳ ಲಭ್ಯತೆಯ ಮಹತ್ವ ತಿಳಿಸಲಿದೆ ಎಂದರು.ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್ ಅವರು ಮಾತನಾಡಿ, ಜಿಲ್ಲೆಯಾದ್ಯಂತ ಪುನರ್ವಸತಿ ಸೇವೆಗಳನ್ನು ಬಲಪಡಿಸಲು, ನರವೈಜ್ಞಾನಿಕ ಆರೋಗ್ಯ ಜಾಗೃತಿ ಮೂಡಿಸಲು ಮತ್ತು ರೋಗಿಗಳ ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ಆರೋಗ್ಯ ಇಲಾಖೆ ಬದ್ಧವಾಗಿದೆ. ಭೌತಚಿಕಿತ್ಸೆ ಸಲಕರಣೆಗಳ ಉಚಿತ ಸೇವೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ಮಾಡಿದರು.
ಸಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ. ಸಿ.ಎಸ್. ಮಾರುತಿ, ನಿವಾಸಿ ವೈದ್ಯಾಧಿಕಾರಿ ಡಾ. ಏಜಾಜ್ ಖಾನ್, ಮನೋವೈದ್ಯಾಧಿಕಾರಿ ಡಾ. ರಘು, ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ಗೋವಿಂದರಾಜು, ನರ್ಸಿಂಗ್ ಅಧೀಕ್ಷಕರಾದ ಜಮುನಾ, ಫಿಸಿಯೋಥೆರಪಿಸ್ಟ್ ನಂದಿನಿ, ಉಜ್ಜಿವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಜಿಲ್ಲಾ ವ್ಯವಸ್ಥಾಪಕರಾದ ಕಿರಣ್ ಕುಮಾರ್, ಮೆದುಳು ಆರೋಗ್ಯ ಉಪಕ್ರಮ ಜಿಲ್ಲಾ ಸಂಯೋಜಕರಾದ ಸತೀಶ್, ಇತರರು ಕಾರ್ಯಕ್ರಮದಲ್ಲಿ ಇದ್ದರು.