ಕನ್ನಡಪ್ರಭ ವಾರ್ತೆ ಪಾವಗಡ

ಗ್ರಾಮೀಣ ಪ್ರತಿಭೆಗಳು ಸಾಂಸ್ಕೃತಿಕ ರಾಯಭಾರಿಗಳು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಕಟ್ಟಾನರಸಿಂಹಮೂರ್ತಿ ಆಶಯ ವ್ಯಕ್ತಪಡಿಸಿದರು.

ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ವೀರ್ಲಗೊಂದಿಯ ದುರ್ಗಾ ಪರಮೇಶ್ವರಿ ಗ್ರಾಮೀಣ ಸಮಗ್ರ ವಿದ್ಯಾ ಕಲಾ ಯುವ ಅಭಿವೃದ್ಧಿ ಸಂಸ್ಥೆ ಇವರ ವತಿಯಿಂದ ಶುಕ್ರವಾರ ಪಟ್ಟಣದ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಗಡಿನಾಡು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿರು. ನಾಡು ನುಡಿ, ಜೀವನ ಬಿಂಬಿಸುವ ಕಲೆಗಳ ಜೀವಂತಿಕೆ ಕಾಪಾಡುವ ಅನಿವಾರ್ಯತೆ ಇದ್ದು, ಕಲೆಗಳಿಂದ ಮನೋ ಉಲ್ಲಾಸ ಹಾಗೂ ಉತ್ತಮ ಆರೋಗ್ಯಕರ ಜೀವನ ಕಾಣಲು ಸಾಧ್ಯ ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ವಿವಿಧ ರೀತಿಯ ಕಲೆಗಳು ಜನಮಾನದಲ್ಲಿ ಉಸಿರಾಗಿ ಉಳಿಸಿದ್ದು, ಅವುಗಳನ್ನು ಪೋಷಿಸಿ ಸಂರಕ್ಷಿಸುವ ಹೊಣೆ ಸರ್ಕಾರ ಹಾಗೂ ಯುವಕರ ಮೇಲೆ ಇದೆ. ಗ್ರಾಮೀಣ ಮುಗ್ದ ಪ್ರತಿಭೆಗಳು ಸಾಂಸ್ಕೃತಿಕ ರಾಯಭಾರಿಗಳಾಗಿ ಹೊರಹೊಮ್ಮುತ್ತಿರುವುದು ಶ್ಲಾಘವೀಯವಾಗಿದೆ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಧ್ಯಮ ಪ್ರತಿನಿಧಿ ಸತ್ಯ ಲೋಕೇಶ್ ಮಾತನಾಡಿ, ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಏರ್ಪಾಡಿಸುವ ಇಂತಹ ಕಾರ್ಯಕ್ರಮಗಳು ಗಡಿ ಭಾಗದಲ್ಲಿನ ಮುಗ್ಧ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಗಳಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.


ಮುಖ್ಯ ಶಿಕ್ಷಕ ಕೆ.ಜಿ.ಮಲ್ಲಿಕಾರ್ಜುನ ಅವರು ಮಾತನಾಡಿ, ಪಾಶ್ಚಾತ್ಯ ಸಾಂಸ್ಕೃತಿಕ ಪ್ರಭಾವದಿಂದ ಪುರಾತನ ಕಲೆಗಳು ವಿನಾಶದ ಅಂಚಿನಲ್ಲಿದ್ದು.ಆತಂಕ ತಂದಿದೆ.ಗ್ರಾಮೀಣ ಹಾಗೂ ಪ್ರಾಚೀನ ಕಲೆಗಳ ಜೀವಂತಿಕೆ ಹಾಗೂ ಉಳಿವಿಗೆ ಸರ್ಕಾರ ಇನ್ನಷ್ಟು ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿದರು.ಇದೇ ವೇಳೆ ವಿದ್ಯಾರ್ಥಿಗಳಿಂದ ರೂಪಿಸಿದ್ದ ಭರತನಾಟ್ಯ,ಯಕ್ತಗಾನ,ಕಲಾಪ್ರಕಾರ,ಸುಗಮಸಂಗೀತ, ಮತ್ತು ಭಕ್ತಿ ಸಂಗೀತಗಳು ಆಕರ್ಷಣೀಯವಾಗಿದ್ದವು. ಶಾಲಾ ಮುಖ್ಯ ಶಿಕ್ಷಕ ಸುಜಾತಮ್ಮ ಅವರ ಅಧ್ಯಕ್ಷತೆ ವಹಿಸಿದ್ದು,ಶಾಲಾ ಶಿಕ್ಷಕರು ಹಾಗೂ ಇತರೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.