ಸಾರಾಂಶ
ಹಿಂದಿನ ಅಧಿಕಾರದ ಅವಧಿಯಲ್ಲಿ ಬಿ.ತರಗತಿಯಲ್ಲಿ ಇಬ್ಬರು ಮಾತ್ರ ಗೆಲುವು ಸಾಧಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತಾಲೂಕಿನಲ್ಲಿ ಎನ್‌ಡಿಎ ಪರ ಜನರು ಇದ್ದಾರೆ ಎನ್ನುವುದು ಸಾಬೀತಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಬೆಂಬಲಿತರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನೂತನ ನಿರ್ದೇಶಕರಿಗೆ ಅಭಿನಂದನೆ ಹಾಗೂ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ, ಹಿಂದಿನ ಅಧಿಕಾರದ ಅವಧಿಯಲ್ಲಿ ಬಿ.ತರಗತಿಯಲ್ಲಿ ಇಬ್ಬರು ಮಾತ್ರ ಗೆಲುವು ಸಾಧಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತಾಲೂಕಿನಲ್ಲಿ ಎನ್‌ಡಿಎ ಪರ ಜನರು ಇದ್ದಾರೆ ಎನ್ನುವುದು ಸಾಬೀತಾಗಿದೆ ಎಂದರು.
ಮಂಡ್ಯ ಜಿಲ್ಲೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಸಲಾಗದಿದ್ದರೂ ಕೂಡ ವಿರೋಧದ ನಡುವೆಯೂ ಕಾವೇರಿ ಆರತಿಯನ್ನು ಮಾಡಲಾಗುತ್ತಿದೆ. ಈ ಬಗ್ಗೆ ರೈತರು ಹಾಗೂ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿದರೂ ಕೂಡ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಹಠಕ್ಕೆ ಬಿದ್ದಂತೆ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಕಾರ್ಯಕ್ರಮದ ನೆಪದಲ್ಲಿ ಹಣ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಆರೋಪಿಸಿದರು.ತಾಲೂಕಿನಲ್ಲಿ ಇತ್ತೀಚೆಗೆ ಐದು ಕೊಲೆಗಳಾಗಿವೆ. ಕಾನೂನು ಸುವ್ಯವ್ಯಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾನೂನು ವಿರೋಧ ಚಟುವಟಿಕೆಗಳು ನಡೆಯದಂತೆ ತಡೆಯುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ನನ್ನ ಅಧಿಕಾರದ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಹಾಕಲಾಗಿರುವ ನಾಮಫಲಕಗಳಿಗೆ ಕಲ್ಲು ಹೊಡೆದಿರುವ ಬಗ್ಗೆ ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ತಾಲೂಕಿನಲ್ಲಿ ದ್ವೇಷ ರಾಜಕಾರಣದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ದೂರು ನೀಡಿದರೂ ಕೂಡ ಇಲ್ಲಿಯವರೆಗೆ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದರು.ಇದೇ ಸಂದರ್ಭದಲ್ಲಿ ಜೆಡಿಎಸ್ ಯುವಘಟಕ ಜಿಲ್ಲಾಧ್ಯಕ್ಷ ರವಿ ಕಂಸಾಗರ, ಟಿಎಪಿಸಿಎಂಎಸ್ ನಿರ್ದೇಶಕರಾದ ಶಿವರುದ್ರ, ರಾಮಣ್ಣ, ಶೋಭ ರತ್ನಮ್ಮ, ಪುರಸಭೆ ಸದಸ್ಯ ನಂದಕುಮಾರ್, ಮುಖಂಡರಾದ ಕಾಂತರಾಜು, ಸಿದ್ದಚಾರಿ, ಹನುಮಂತು, ಕೆಂಪರಾಜು, ವೇಣು, ಕಂಬರಾಜು, ಪುಟ್ಟಯ್ಯ ಸೇರಿದಂತೆ ಇತರರು ಇದ್ದರು.