ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸರ್ಕಾರದ ನಿರ್ಲಕ್ಷ್ಯದಿಂದ ಹದಗೆಟ್ಟ ಕೆ.ಆರ್.ಪೇಟೆ- ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿನ ರಸ್ತೆ ಗುಂಡಿಗಳನ್ನು ಪಟ್ಟಣದ ಮಾತೃಭೂಮಿ ಉಚಿತ ವೃದ್ಧಾಶ್ರಮದ ಸಂಸ್ಥಾಪಕ ಜೈಹಿಂದ್ ನಾಗಣ್ಣ ತಮ್ಮ ಸ್ವಂತ ಖರ್ಚಿನಲ್ಲಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಪಟ್ಟಣದ ಶ್ರೀ ರಾಮ ಪೆಟ್ರೋಲ್ ಬಂಕ್ ಬಳಿಯ ಬೃಹತ್ ರಸ್ತೆ ಗುಂಡಿ ಮುಚ್ಚುವ ಮೂಲಕ ತಮ್ಮ ಗುಂಡಿ ಮುಚ್ಚುವ ಸಾಮಾಜಿಕ ಸೇವೆಗೆ ಚಾಲನೆ ನೀಡಿರುವ ನಾಗಣ್ಣ, ಕೆ.ಆರ್.ಪೇಟೆಯಿಂದ ಕಿಕ್ಕೇರಿ ಪಟ್ಟಣದವರೆಗೂ ತಮ್ಮ ಗುಂಡಿ ಮುಚ್ಚುವ ಕಾಯಕವನ್ನು ಮಾಡುತ್ತಿದ್ದಾರೆ.
ತಾಲೂಕಿನ ಉದ್ದಗಲಕ್ಕೂ ಮೈಸೂರು- ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಹಾಳಾಗಿದೆ. ಇದು ಪ್ರಯಾಣಿಕರ ಪಾಲಿಗೆ ಯಮಯಾತನೆ ನೀಡುತ್ತಿದೆ. ಕನಿಷ್ಠ ತಾಲೂಕಿನ ರಸ್ತೆಗಳ ಗುಂಡಿಗಳನ್ನಾದರೂ ಮುಚ್ಚಿಸಿ ಎಂದು ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಇತ್ತೀಚಿನ ಕೆಡಿಪಿ ಸಭೆಯಲ್ಲಿಯೂ ಪ್ರಸ್ತಾಪಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಛೀಮಾರಿ ಹಾಕಿದ್ದರು.ಅನಂತರ ತಾವೇ ಬೀದಿಗಿಳಿದು ಅಧಿಕಾರಿಗಳನ್ನು ಕರೆತಂದು ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕವಾಗಿಯೇ ಶಾಸಕರು ಅಧಿಕಾರಿಗಳಿಗೆ ಛಾಟಿ ಬೀಸಿದ್ದರು. ನಂತರ ಇಲಾಖೆ ಅಧಿಕಾರಿಗಳು ಕೆಲವು ಕಡೆ ರಸ್ತೆ ಗುಂಡಿ ಮುಚ್ಚಿಸಿದರು. ಆದರೆ ಕಳಪೆ ಕಾಮಗಾರಿಯಿಂದ ಮುಚ್ಚಿದ ಎರಡು ಮೂರು ದಿನಗಳಲ್ಲಿಯೇ ಮತ್ತೆ ರಸ್ತೆಗಳು ಗುಂಡಿಮಯವಾದವು.
ಇದರಿಂದ ದಿನನಿತ್ಯ ಓಡಾಡುವ ಸವಾರರು ಒಂದಲ್ಲ ಒಂದು ಅಪಘಾತದಿಂದ ಪ್ರಾಣ ಹಾನಿ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ರಸ್ತೆ ಗುಂಡಿಗಳ ಬಗ್ಗೆ ಜಾಗೃತಿ ಮೂಡಿಸಲು ಮಾತೃಭೂಮಿ ವೃದ್ಧಾಶ್ರಮದ ನಾಗಣ್ಣ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಗಳಿರುವ ಕಡೆ ಎಚ್ಚರಿಕೆಯ ಫಲಕ ಹಾಕಿ ಅಧಿಕಾರಿಗಳ ಗಮನ ಸೆಳೆದರು.ನಾಗಣ್ಣನವರು ರಸ್ತೆ ಗುಂಡಿಗಳ ಬಗ್ಗೆ ಅಳವಡಿಸಿದ್ದ ಎಚ್ಚರಿಕೆಯ ಫ್ಲೆಕ್ಸ್ ಫಲಕಗಳನ್ನು ಅಧಿಕಾರಿಗಳು ನೋಡಿಕೊಂಡು ಹೋಗುತ್ತಿದ್ದರೇ ಹೊರತು ರಸ್ತೆ ಗುಂಡಿ ಮುಚ್ಚುವ ಪ್ರಯತ್ನ ಆರಂಭಿಸಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಹನ ಸವಾರರಿಗೆ ಮತ್ತು ಪ್ರಯಾಣಿಕರು ಅನುಭವಿಸುತ್ತಿರುವ ಬವಣೆ ಅರಿತ ಜೈಹಿಂದ್ ನಾಗಣ್ಣ ಈಗ ತಮ್ಮ ಮಾತೃಭೂಮಿ ಉಚಿತ ವೃದ್ಧಾಶ್ರಮದ ವತಿಯಿಂದಲೇ ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.