ಶಿವಮೊಗ್ಗದ ಕೃಷಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್‌

| Published : Nov 10 2025, 12:45 AM IST

ಸಾರಾಂಶ

ನವುಲೆಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ‘ಕೃಷಿ ಮೇಳ’ದ 3ನೇ ದಿನ ಜನಸಾಗರವೇ ಹರಿದ್ದು ಬಂದಿದ್ದು, ವಾರಾಂತ್ಯ ಹಿನ್ನೆಲೆಯಲ್ಲಿ ಭಾನುವಾರ ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಶಾಲಾ ಮಕ್ಕಳು, ಕೃಷಿ ಮೇಳವನ್ನು ನೋಡಿ ಪುಳಕಿತರಾದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನವುಲೆಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ‘ಕೃಷಿ ಮೇಳ’ದ 3ನೇ ದಿನ ಜನಸಾಗರವೇ ಹರಿದ್ದು ಬಂದಿದ್ದು, ವಾರಾಂತ್ಯ ಹಿನ್ನೆಲೆಯಲ್ಲಿ ಭಾನುವಾರ ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಶಾಲಾ ಮಕ್ಕಳು, ಕೃಷಿ ಮೇಳವನ್ನು ನೋಡಿ ಪುಳಕಿತರಾದರು.

ಮೇಳದಲ್ಲಿ ಬೆಳೆದಿದ್ದ ಹೂವಿನ ಬೆಳೆಗಳು, ತರಕಾರಿಗಳು, ಧಾನ್ಯಗಳು, ಪಶುಸಂಗೋಪನೆ ವಿಭಾಗದಲ್ಲಿ ಉದ್ದ ಕಿವಿಯ ಮೇಕೆಗಳು, ದುಬಾರಿ ಬೆಲೆಯ ಹಳ್ಳಿಕಾರ್ ಹೋರಿ, ಆಕರ್ಷಕ ಕತ್ತಿನ ಟರ್ಕಿ ಕೋಳಿ, ಸಿರಿಧಾನ್ಯಗಳ ಮನೆ, ನರ್ಸರಿಯಲ್ಲಿನ ಸಸಿ ಕಂಡು ವಿದ್ಯಾರ್ಥಿಗಳು ಸಂಭ್ರಮಪಟ್ಟರು. ಕೃಷಿಯಲ್ಲಿ ಇಷ್ಟೆಲ್ಲಾ ಆವಿಷ್ಕಾರಗಳಿವೆ ಎಂಬುದನ್ನು ಇವತ್ತೇ ತಿಳಿದಿದ್ದು ಎಂದು ವಿದ್ಯಾರ್ಥಿಗಳು ಆಶ್ಚರ್ಯ ಚಕಿತಗೊಂಡರು.

ಕೃಷಿ ಮೇಳದಲ್ಲಿ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು, ಸಸಿಗಳು ಮತ್ತು ತಳಿಗಳ ಪ್ರದರ್ಶನ ಮತ್ತು ಮಾರಾಟದ ಜತೆಗೆ ತಂತ್ರಜ್ಞಾನ ಉದ್ಯಾನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ ಕೃಷಿ ಮತ್ತು ತೋಟಗಾರಿಕೆ-ಅರಣ್ಯ-ಸಮಗ್ರ ಪದ್ಧತಿಗಳು ಕೃಷಿ ಮತ್ತು ತೋಟಗಾರಿಕಾ ವಸ್ತುಪ್ರದರ್ಶನ, ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರಾತ್ಯಕ್ಷಿಕೆಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಜೈವಿಕ ಪರಿಕರಗಳ ಪ್ರದರ್ಶಿಸಲಾಗುತ್ತಿದೆ. ಅಲ್ಲದೇ ರೈತ-ವಿಜ್ಞಾನಿಗಳ ನಡುವೆ ಕೃಷಿ ಲಾಭದಾಯಕದ ಕುರಿತು ಸಂವಾದವೂ ನಡೆಯುತ್ತಿದೆ.

450 ಮಳಿಗೆ:

ಕಳೆದ ಬಾರಿಯ ಕೃಷಿ ಮೇಳದಲ್ಲಿ 300 ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ವಿವಿಧ ಕೃಷಿ ವಿಶ್ವವಿದ್ಯಾಲಯದ ವಿಭಾಗಗಳು, ಕೃಷಿ, ತೋಟಗಾರಿಕೆ ಇಲಾಖೆಗಳ ವಿವಿಧ ವಿಭಾಗಗಳು ಸ್ಟಾಲ್ ನಿರ್ಮಿಸಿದ್ದವು. ಕೀಟಗಳ ಕುರಿತು ಸಮಗ್ರ ಮಾಹಿತಿ ಒದಗಿಸುವ ಕೀಟ ಪ್ರಪಂಚ ಎಲ್ಲರನ್ನು ಆಕರ್ಷಿಸಿದವು. ಸಾವಯವ ಕೃಷಿ ಸಂಶೋಧನ ಕೇಂದ್ರಗಳು, ಬಹುಸ್ಥರೀಯ ಬೆಳೆ ಪದ್ಧತಿ, ಅಡಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ, ಜೈವಿಕ ಇಂಧನ ಉದ್ಯಾನಗಳು ರೈತರ ಗಮನ ಸೆಳೆದವು. ಈ ಬಾರಿಯ ಕೃಷಿ ಮೇಳದಲ್ಲಿ 225 ಹೈಟೆಕ್ ಮಳಿಗೆ, 150 ಎಕಾನಮಿ ಮಳಿಗೆ,೨೫ ಯಂತ್ರೋಪಕರಣ ಮಳಿಗೆ, 40ಆಹಾರ ಮಳಿಗೆಗಳು ಸೇರಿದಂತೆ 450ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಬಗೆಬಗೆಯ ಆಹಾರ ಉತ್ಪನ್ನ, ಸಮಗ್ರ ಜಲಾನಯನ ಅಭಿವೃದ್ಧಿ, ಜೇನು ಕೃಷಿ, ನಮ್ಮ ತೋಟ, ಅಣಬೆ ಕೃಷಿ, ಮೀನುಗಾರಿಕೆ ಮಳಿಗೆಗಳು, ಸಿರಿಧಾನ್ಯಗಳ ಮಳಿಗೆ, ವಿವಿಧ ರೀತಿಯ ಬಾಳೆ, ಅಡಿಕೆ , ಕೃಷಿ ಮತ್ತು ತೊಟಗಾರಿಕೆ ತಳಿ, ವಿವಿಧ ಯಂತ್ರೋಪಕರಣ, ಸಾವಯವ ಗೊಬ್ಬರ, ವಿವಿಧ ನರ್ಸರಿಗಳು ಪಾಲ್ಗೊಂಡಿದ್ದವು. ಹಲವು ಬಗೆಯ ಸಸ್ಯ ತಳಿ ಪ್ರದರ್ಶನ ಮಾಡಲಾಗಿತ್ತು.

ಗಮನ ಸೆಳೆದ ಎಮ್ಮೆಗಳು:

ಹರಿಯಾಣ ಮತ್ತು ದೆಹಲಿ ಹಾಗೂ ಗುಜರಾತ್ ಮೂಲದ ಎಮ್ಮೆ ತಳಿಗಳು ಕೃಷಿ ಮೇಳದ ಆಕರ್ಷಣೆಯಾಗಿದ್ದವು. ರೈತರು ಮುಗಿಬಿದ್ದು ಈ ಎಮ್ಮೆಗಳನ್ನು ನೋಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು.

ಮುರ್ರಾ ತಳಿ:

ಹರಿಯಾಣ ಮತ್ತು ದೆಹಲಿ ರಾಜ್ಯದ ಮೂಲ ತಳಿಯಾಗಿದೆ.ಗಟ್ಟಿಯಾಗಿ ಸುರುಳಿ ಸುತ್ತಿರುವ ಕೊಂಬುಗಳು,ಅತೀ ಕಪ್ಪೆನೆಯ ದೇಹದ ಬಣ್ಣದ ಗುಣ ಲಕ್ಷಣ ಹೊಂದಿದೆ. 6-8 ಲೀಟರ್‌ ಪ್ರತಿ ದಿನ ಹಾಲು ನೀಡಲಿದೆ. ಹೆಚ್ಚು ಕೊಬ್ಬಿನಂಶ ಉಳ್ಳ ಹಾಲು ನೀಡುತ್ತದೆ. ಬರ ಮತ್ತು ಕಾಯಿಲೆಗಳನ್ನು ತಡೆಯುವ ಸಾಮರ್ಥ್ಯವನ್ನು ಮುರ್ರಾ ತಳಿ ಹೊಂದಿದೆ.

ಜಾ-ಬಾದಿ ತಳಿ:

ಗುಜರಾತ್ ರಾಜ್ಯದ ಮೂಲ ತಳಿಯಾದ ಜಾ-ಬಾದಿ ಎಮ್ಮೆ ಗಟ್ಟಿಯಾಗಿ ಸುರುಳಿಸುತ್ತಿ ಜೋತು ಬೀಳುವ ಕೊಂಬುಗಳನ್ನು ಹೊಂದಿದೆ.ಪ್ರತಿದಿನ 7-8 ಲೀಟರ್‌ ಹಾಲು ನೀಡಲಿದೆ. ಹೆಚ್ಚು ಕೊಬ್ಬಿನಂಶ ಉಳ್ಳ ಹಾಲು ನೀಡಲಿದೆ.ಜೊತೆಗೆ ಬರ ಮತ್ತು ಖಾಯಿಲೆಗಳನ್ನು ತಡೆಯುವ ಸಾಮರ್ಥ್ಯಮತ್ತು ಕಾಡಿನಲ್ಲಿ ಸಿಂಹಗಳನ್ನು ಹೆದರಿಸಿ ಹೋರಾಡುವ ತಾಕತ್ತು ಹೊಂದಿದೆ.

ಕೃಷಿ ಮೇಳಕ್ಕೆ ಧಾರವಾಡ ಕೃಷಿ ವಿವಿ ಕುಲಪತಿ ಭೇಟಿ

ಕೃಷಿ ಮತ್ತು ತೋಟಗಾರಿಕಾ ಮೇಳದ ಮೂರನೇ ದಿನವಾದ ಭಾನುವಾರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಾಟೀಲ್ ಅವರು ಮೇಳದಲ್ಲಿ ಪಾಳ್ಗೊಂಡಿದ್ದರು. ಮೇಳದ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಪ್ರಾತ್ಯಕ್ಷಿಕೆ ತತ್ವಗಳಿಗೆ ಭೇಟಿ ನೀಡಿ ಅಣಬೆ, ಅಡಕೆ ಸಿಪ್ಪೆಯಿಂದ ಗೊಬ್ಬರ ತಯಾರು ಮಾಡುವುದು ಮತ್ತು ಮತ್ತು ಕೃಷಿ ವಿಜ್ಞಾನ ಕೇಂದ್ರದ ಹೂ ಮತ್ತು ತರಕಾರಿ ಪ್ರಾತ್ಯಕ್ಷಿಕೆಗೆ ಭೇಟಿ ನೀಡಿದರು. ಜತೆಗೆ ಕೃಷಿ ವಿಜ್ಞಾನ ಕೇಂದ್ರದಿಂದ ಉದ್ಘಾಟನೆಗೊಂಡಿರುವ ಕೃಷಿ ಆನ ಕೇಂದ್ರಕ್ಕೂ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ನೀಡುವ 25ಕ್ಕೂ ಹೆಚ್ಚು ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ 42 ಉತ್ಪಾದನಾ ತಂತ್ರಜ್ಞಾನಗಳು, 31 ಸಸ್ಯ ರಕ್ಷಣಾ ತಂತ್ರಜ್ಞಾನಗಳು, 25 ಕೃಷಿ ಯಾಂತ್ರೀಕರಣ, 29 ತೋಟಗಾರಿಕೆ, 5 ಆಹಾರ ವಿಜ್ಞಾನಗಳಲ್ಲಿ, ಕೊಯ್ಲೋತ್ತರ ತಂತ್ರಜ್ಞಾನ ಮತ್ತು ಒಳನಾಡು ಮೀನುಗಾರಿಕೆ ವಿಭಾಗಗಳಲ್ಲಿ ಪ್ರಗತಿ ಸಾಧಿಸಲಾಗಿದೆ.

ಪ್ರೊ.ಆರ್.ಸಿ ಜಗದೀಶ್ ಕುಲಪತಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ.