ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಿಹಿ ಸುದ್ದಿ. ರಾಜ್ಯ ಸರ್ಕಾರ ಇದೀಗ 2000 ನೌಕರರ ನೇಮಕಾತಿಗೆ ಅಸ್ತು ಎಂದಿದೆ. ಜತೆಗೆ ಹೊಸ ಬಸ್ ಖರೀದಿಗೂ ಹಸಿರು ನಿಶಾನೆ ತೋರಿಸಿದೆ.ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಹಸಿರು ನಿಶಾನೆ ದೊರೆತಿದ್ದು, ಸುಮಾರು 10 ವರ್ಷಗಳ ಬಳಿಕ ಹೊಸ ನೌಕರರ ನೇಮಕವಾಗುತ್ತಿದೆ.
ಶಕ್ತಿ ಯೋಜನೆ ಪ್ರಾರಂಭವಾದ ಬಳಿಕ ಬಸ್‌ಗಳೆಲ್ಲ ರಶ್ಶೋ ರಶ್ ಆಗುತ್ತಿವೆ. ಒಂದೊಂದು ಬಸ್‌ನಲ್ಲಿ ಮಿತಿ ಮೀರಿ ಪ್ರಯಾಣಿಕರು ಹೋಗಬೇಕಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಸೀಟ್‌ಗಾಗಿ ಪ್ರಯಾಣಿಕರ ನಡುವೆ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಸಂಪೂರ್ಣ ನಷ್ಟದಲ್ಲಿದ್ದ ಸಂಸ್ಥೆ ಇದೀಗ ಸರ್ಕಾರದ ಶಕ್ತಿ ಯೋಜನೆಯಿಂದ ಉಸಿರಾಡುವಂತಾಗಿದೆ. ಮಹಿಳಾ ಪ್ರಯಾಣಿಕರ ಹೆಚ್ಚಳದಿಂದಾಗಿ ಸಂಸ್ಥೆ ಲಾಭದಲ್ಲಿ ಬರುತ್ತಿದೆ.ನೌಕರರ ನೇಮಕಕ್ಕೆ ಅಸ್ತು: ಕಳೆದ ಹತ್ತು ವರ್ಷಗಳಿಂದ ಸಂಸ್ಥೆಯಲ್ಲಿ ನೌಕರರು ನೇಮಕ ಮಾಡಿಕೊಂಡಿರಲೇ ಇಲ್ಲ. ಯಾವಾಗ ಪ್ರಸ್ತಾವನೆ ಸಲ್ಲಿಸಿದರೂ ಸಂಸ್ಥೆಯೇ ನಷ್ಟದಲ್ಲಿ ಇದೆ. ಇನ್ನು ನೌಕರರ ನೇಮಕ ಮಾಡಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಕೂಡ ಎದುರಾಗುತ್ತಿತ್ತು. ಇದೀಗ ಅತ್ತ ಬಸ್‌ಗಳು ರಶ್ ಆಗುತ್ತಿವೆ. ಇತ್ತ ನೌಕರರು ಹೆಚ್ಚುವರಿ ಕೆಲಸ ಮಾಡುವಂತಾಗಿದೆ. ಹೀಗಾಗಿ ನೌಕರರ ನೇಮಕ ಮಾಡಿಕೊಳ್ಳಿ ಎಂಬ ಬೇಡಿಕೆಯನ್ನು ಸಲ್ಲಿಸುತ್ತಲೇ ಇದ್ದರು.
ಇದೀಗ ನೌಕರರ ಬೇಡಿಕೆಗೆ ತಕ್ಕಂತೆ ಸಂಸ್ಥೆಯಲ್ಲಿ 2 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಚಾಲಕರು ಮತ್ತು ನಿರ್ವಾಹಕರ ಹುದ್ದೆಗಳನ್ನೇ ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಶುರುವಾಗಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.ಹೊಸ ಬಸ್ ಖರೀದಿ: ಇದರೊಂದಿಗೆ ಇತ್ತೀಚಿಗಷ್ಟೇ 50 ಹೊಸ ಬಸ್ ಖರೀದಿಸಿ ಚಾಲನೆ ನೀಡಲಾಗಿದೆ. ಇನ್ನು 300ಕ್ಕೂ ಅಧಿಕ ಹೊಸ ಬಸ್ ಖರೀದಿಗೂ ಹಸಿರು ನಿಶಾನೆ ತೋರಿಸಲಾಗಿದೆ. ಇದರಲ್ಲಿ ಸಾಮಾನ್ಯ ಬಸ್, ಕೆಲವೊಂದಿಷ್ಟು ವೋಲ್ವೋ, ರಾಜಹಂಸ ಸೇರಿದಂತೆ ವಿವಿಧ ಬಗೆಯ ಬಸ್‌ಗಳು ಸೇರಲಿವೆ. ನಗರ ಸಾರಿಗೆ ಸೇರಿದಂತೆ ವಿವಿಧೆಡೆ ಸಂಚರಿಸಲಿವೆ. ಇನ್ಮೇಲೆ ಟೆಂಡರ್ ಪ್ರಕ್ರಿಯೆ ನಡೆಸಬೇಕಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಹೊಸ ಬಸ್‌ಗಳು ಸಂಸ್ಥೆಗೆ ಬರಲಿವೆ ಎಂದು ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ.