ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಕಾವೇರಿ ನದಿಯಲ್ಲಿ ಪೂಜೆ ನಡೆಸಿ ಪೂರ್ಣ ಕಳಸದೊಂದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಅಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೆರವಣಿಗೆ ಸಂದರ್ಭ ಭಜನೆ ಕುಣಿತ ಎಲ್ಲರ ಗಮನ ಸೆಳೆಯಿತು, ನೆಲ್ಲಿಹುದಿಕೇರಿಯ ಸುಜಾತಾ ಮತ್ತು ವನಿತಾ ಮತ್ತು ಅವರ ತಂಡದ 40 ಮಂದಿ ಮೆರವಣಿಗೆಗೆ ಮೆರಗು ತಂದರು. ದಾರಿಯುದ್ದಕ್ಕೂ ಕುಣಿಯುತ್ತಾ ಸಾಗಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡ್ಡೆಹೊಸುರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಎಂ.ಸಾಗರ್‌ ವಹಿಸಿದ್ದರು.

ಮಂಗಳೂರು ವಿಭಾಗದ ಎ.ಬಿ.ವಿ.ಪಿ.ಸಂಘಟನಾ ಸಂಯೋಜಕರಾದ ಕೇಶವ ಬಂಗೇರಾ ಹಾಜರಿದ್ದು ಕಾರ್ಯಕ್ರಮದ ಬಗ್ಗೆ ಮಾತನಾಡಿ ಹಿಂದೂ ಸಂಗಮ ಕಾರ್ಯಕ್ರಮ ಯಾರ ವಿರುದ್ಧವು ಅಲ್ಲ. ಅದು ಧರ್ಮದ ಸಂಘಟನೆಗೆ 100 ವರ್ಷ ತುಂಬಿದ ಹಿನ್ನಲೆಯಲ್ಲಿ ಇಡೀ ದೇಶಾದ್ಯಂತ ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.


ಅಲ್ಲದೆ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮಾರಂಭ ನಡೆಸಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ಬಸವನಹಳ್ಳಿಯ ದೇವಸ್ಥಾನಕ್ಕೆ ಸ್ಥಳ ದಾನ ನೀಡಿದ ಕಾಳಯ್ಯ, ಯೋಗ ಶಿಕ್ಷಕಿ ಪಾರ್ವತಿ, ಗ್ರಾ.ಪಂ.ವಾಹನ ಚಾಲಕ ವಿಜಯ್‌, ನಾಟಿ ವೈದ್ಯೆ ಕಮಲ ಹಾಜರಿದ್ದರು. ಈ ಸಂದರ್ಭ ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇಂದಿನ ಈ ಯುಗದಲ್ಲಿ ಆರೋಗ್ಯವೇ ಅತೀ ಮುಖ್ಯ ಈ ಬಗ್ಗೆ ಯೋಗದೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡುವ ಬಗ್ಗೆ ಪಾರ್ವತಿ ವಿವರಿಸಿದರು.

ಈ ಸಂಧರ್ಭ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಬಿ.ಬಿ.ಭಾರತೀಶ್‌, ಮುಖಂಡರಾದ ಗೌತಮ್‌, ಸೇವಾ ಪ್ರಮುಖರಾದ ಮಹೇಂದ್ರ, ಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಸಹಾ ಪ್ರಮುಖ ಬೊಟ್ಟುಮನೆ ರಮೇಶ್‌, ಗುಡ್ಡೆಹೊಸೂರು ಮಂಡಲ ಪ್ರಮುಖ್‌ ಕೊಳಿಬೈಲು ಉದಯ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮದ ಅಧಿಕ ಮಂದಿ ಹಿರಿಯರು ಮತ್ತು ಯುವಕ ಯುವತಿಯರು ಸುಡು ಬಿಸಿಲಿನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಂಘದ ಸದಸ್ಯ ರೋಹಿತ್‌ ಕಾರ್ಯಕ್ರಮ

ನಿರೂಪಿಸಿದರು. ಅಶ್ವಿನಿ ಸ್ವಾಗತಿಸಿ ವಂದಿಸಿದರು.