ಸಾರಾಂಶ
ಕಳೆದ ವರ್ಷ ₹ 12 ಲಕ್ಷ ಆದಾಯ ಹೊಂದಿರುವವರಿಗೆ ತೆರಿಗೆ ರಿಯಾಯಿತಿ ನೀಡಿದ್ದಾರೆ. ಅದರಂತೆ ಈ ವರ್ಷ ಜಿಎಸ್‌ಟಿ ಕಡಿತಗೊಳಿಸಿ ಜನಸಾಮಾನ್ಯರ ಬದುಕಿಗೆ ನೆರವಾಗಿದ್ದಾರೆ.
ಹುಬ್ಬಳ್ಳಿ:
ದೇಶದ ಜನರಲ್ಲಿ ಖರೀದಿಯ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿ ದರ ಕಡಿಮೆ ಮಾಡಿದ್ದು, ಇಡೀ ದೇಶವೇ ಸ್ವಾಗತಿಸಿದೆ. ಸ್ವಾವಲಂಬಿ ಬದುಕಿಗೆ ಮೋದಿ ನವರಾತ್ರಿ ಹಬ್ಬದ ವೇಳೆ ಜನರಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ₹ 12 ಲಕ್ಷ ಆದಾಯ ಹೊಂದಿರುವವರಿಗೆ ತೆರಿಗೆ ರಿಯಾಯಿತಿ ನೀಡಿದ್ದಾರೆ. ಅದರಂತೆ ಈ ವರ್ಷ ಜಿಎಸ್‌ಟಿ ಕಡಿತಗೊಳಿಸಿ ಜನಸಾಮಾನ್ಯರ ಬದುಕಿಗೆ ನೆರವಾಗಿದ್ದಾರೆ. ಇದು ದೂರದೃಷ್ಟಿಯ ಘೋಷಣೆಯಾಗಿದೆ ಎಂದರು.
ಜಾತಿಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ರಾಘವೇಂದ್ರ, ಕಾಂಗ್ರೆಸ್ ಸರ್ಕಾರ ಜಾತಿ, ಸಮುದಾಯವನ್ನು ಒಡೆಯಲು ಮುಂದಾಗಿದೆ. ಇದಕ್ಕೆ ಅವರ ಸಚಿವರೇ ಛೀಮಾರಿ ಹಾಕಿದ್ದಾರೆ. ಕೇಂದ್ರ ಸರ್ಕಾರವೇ ಜಾತಿ ಗಣತಿಗೆ ಮುಂದಾಗಿದ್ದರು ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ಹಣವಿಲ್ಲದ ರಾಜ್ಯ ಸರ್ಕಾರ ಜಾತಿಗಣತಿ ಹೆಸರಿನಲ್ಲಿ ₹ 400ರಿಂದ ₹ 500 ಕೋಟಿ ಖಚು ಮಾಡುತ್ತಿದೆ ಎಂದು ಕಿಡಿಕಾರಿದರು.ಯತ್ನಾಳಗೆ ನಿದ್ದೆ ಬರುವುದಿಲ್ಲ:
ಬಿ.ಎಸ್. ಯಡಿಯೂರಪ್ಪ ಕುಟುಂಬ ಲಿಂಗಾಯತವಲ್ಲ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ, ಯಡಿಯೂರಪ್ಪ ಅವರು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ, ಅವರು ರೈತರ ಪರವಾಗಿ, ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅವರ ಆಶೀರ್ವಾದದಿಂದ ನಾವು ಕೆಲಸ ಮಾಡುತ್ತಿದ್ದೇವೆ. ಯತ್ನಾಳ ಅವರಿಗೆ ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡದಿದ್ದರೇ ನಿದ್ದೆ ಬರುವುದಿಲ್ಲ ಎಂದು ತಿರುಗೇಟು ನೀಡಿದರು.