ಸಾರಾಂಶ
ಹೊಸಪೇಟೆ: ಪೋಷಣ್ ಅಭಿಯಾನದಂತಹ ಮಹತ್ವಾಕಾಂಕ್ಷಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಿ ಎಂದು ಸಿಡಿಪಿಒ ಸಿಂಧು ಎಲಿಗಾರ ಸೂಚನೆ ನೀಡಿದರು. ಪಟ್ಟಣದ ರಾಣಿಪೇಟೆಯ ಅಂಗನವಾಡಿಯಲ್ಲಿ ನಡೆದ ಆರೋಗ್ಯವಂತ ಮಗು, ಅಪೌಷ್ಟಿಕ ಮಕ್ಕಳ ತಾಯಂದಿರಸಭೆಯಲ್ಲಿ ಅವರು ಮಾತನಾಡಿದರು.ಭಾರತ ದೇಶದಲ್ಲಿ ಅಪೌಷ್ಟಿಕತೆಯ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಕೇಂದ್ರ ಪುರಸ್ಕೃತ ಪೋಷಣ್ ಅಭಿಯಾನ ಯೋಜನೆ ಬಹಳಷ್ಟು ಕೊಡುಗೆಯನ್ನು ನೀಡಿದೆ. ನಮ್ಮ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಡಿಯಲ್ಲಿ ಸಮರ್ಥವಾಗಿ ಪೋಷಣ್ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಮೂಲಕ ರಾಜ್ಯದಲ್ಲಿ ತೀವ್ರ ಅಪೌಷ್ಟಿಕತೆಯ ಪ್ರಮಾಣ ಶೇಕಡಾ ಇಳಿದಿದೆ. ಇನ್ನಷ್ಟು ಇಳಿಸುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು. ಗರ್ಭಿಣಿ, ಬಾಣಂತಿಯರು, ಮಕ್ಕಳು ಮತ್ತು ಪ್ರಾಯಪೂರ್ವ ಬಾಲಕಿಯರಲ್ಲಿ ಅಪೌಷ್ಟಿಕತೆಯ ನಿವಾರಣೆಯ ಬಗ್ಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ರಾಜ್ಯದ ಎಲ್ಲ ಭಾಗಗಳಲ್ಲೂ ಇರುವಂತಹ ಅಪೌಷ್ಟಿಕತೆಯ ಪಿಡುಗನ್ನು ಹೊಡೆದೋಡಿಸಲು ಸರ್ಕಾರ ಪಣತೊಟ್ಟಿದೆ. ಅದಕ್ಕೆ ತಾಯಂದಿರು ಸಹಕಾರ ನೀಡಬೇಕು ಎಂದರು. ಇನ್ನೂ ಗೃಹಲಕ್ಷ್ಮೀ ಯೋಜನೆ ಕುರಿತು ಮಾತನಾಡಿದ ಅವರು ಸರಕಾರದ ಯೋಜನೆಗಳ ಫಲಾನುಭವಿಗಳನ್ನು ತಲುಪುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. ಇಂತಹ ಜನಸ್ನೇಹೀ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾಗಳು ಜಾಗೃತಿ ಮೂಡಿಸಬೇಕು. ಈ ಮೂಲಕ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಅಂಬುಜಾ, ಅಂಗನವಾಡಿ ಕಾರ್ಯಕರ್ತೆ ಅನುಶ್ರೀ ಸೇರಿದಂತೆ ಅನೇಕರು ಇದ್ದರು.