ನಾಳೆಯಿಂದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ: ತಹಸೀಲ್ದಾರ ರೇಣುಕಮ್ಮ

| Published : Feb 08 2024, 01:33 AM IST

ನಾಳೆಯಿಂದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ: ತಹಸೀಲ್ದಾರ ರೇಣುಕಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಾನಗಲ್ಲ ತಾಲೂಕಿನ ಫಲಾನುಭವಿಗಳ ಸಮಾವೇಶ ೩ ಹೋಬಳಿಗಳಲ್ಲಿ ಹೋಬಳಿವಾರು ಫೆ.೯, ೧೭ ಹಾಗೂ ೨೬ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಾನಗಲ್ಲ ತಾಲೂಕಿನ ಫಲಾನುಭವಿಗಳ ಸಮಾವೇಶ ೩ ಹೋಬಳಿಗಳಲ್ಲಿ ಹೋಬಳಿವಾರು ಫೆ.೯, ೧೭ ಹಾಗೂ ೨೬ರಂದು ನಡೆಯಲಿದ್ದು, ತಾಂತ್ರಿಕ ತೊಂದರೆಗಳಿಂದ ಇನ್ನೂ ಸೌಲಭ್ಯ ಪಡೆಯದವರಿಗೆ ಅಂದೇ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡಲಾಗುವುದು ಎಂದು ತಹಸೀಲ್ದಾರ ಎಸ್.ರೇಣುಕಮ್ಮ ತಿಳಿಸಿದರು.

ಸೋಮವಾರ ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಇದಾಗಿದ್ದು ತಾಲೂಕು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುವರು. ಇದೇ ಸಂದರ್ಭದಲ್ಲಿ ಪ್ರತಿ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಕೌಂಟರ್‌ಗಳನ್ನು ತೆರೆಯಲಾಗುತ್ತಿದ್ದು ಅಲ್ಲಿಯೇ ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಲು ಅವಕಾಶವಿದೆ. ಅಲ್ಲದೆ ತಾಂತ್ರಿಕ ತೊಂದರೆಗಳಿಂದ ಫಲಾನುಭವಿಗಳಿಗೆ ಸೌಲಭ್ಯ ದೊರೆಯದಿದ್ದರೆ ಈ ಕೂಡಲೇ ಸಂಬಂಧಿಸಿದ ಆಯಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶವಿದೆ. ತಾಲೂಕಿನಲ್ಲಿ ಯಾವುದೇ ಫಲಾನುಭವಿ ಗ್ಯಾರಂಟಿ ಸೌಲಭ್ಯದಿಂದ ಹೊರಗುಳಿಯಬಾರದು ಎಂಬ ಉದ್ದೇಶ ಇಲಾಖೆಯದ್ದಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಿ ಎಲ್ಲ ಫಲಾನುಭವಿಗಳಿಗೆ ಈ ಆರೂ ಯೋಜನೆ ತಲುಪಿಸಲು ಆಯಾ ಇಲಾಖೆಗಳು ಮುಂದಾಗಿವೆ ಎಂದು ತಿಳಿಸಿದರು.

ತಾಲೂಕಿನ ೩ ಹೋಬಳಿಗಳಲ್ಲಿ ಪ್ರತ್ಯೇಕ ಸಮಾವೇಶ ನಡೆಯಲಿವೆ. ಫೆ.೯ರಂದು ಅಕ್ಕಿಆಲೂರು ಹೋಬಳಿಯ ಸಮಾವೇಶ ಅಕ್ಕಿಆಲೂರಿನ ಎನ್‌ಡಿಪಿಯು ಕಾಲೇಜು ಆವರಣದಲ್ಲಿ ಸಂಜೆ ೪ ಗಂಟೆಗೆ ನಡೆಯಲಿದೆ. ಫೆ. ೧೭ರಂದು ಹಾನಗಲ್ಲ ಹೋಬಳಿಯ ಸಮಾವೇಶ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಶ್ರೀಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಸಂಜೆ ೪ ಗಂಟೆಗೆ ನಡೆಯಲಿದೆ. ಫೆ.೨೬ರಂದು ಬಮ್ಮನಹಳ್ಳಿ ಹೋಬಳಿಯ ಸಮಾವೇಶ ಮಹಾರಾಜಪೇಟೆಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಂಜೆ ೪ ಗಂಟೆಗೆ ನಡೆಯಲಿದೆ. ಆಯಾ ಹೋಬಳಿಯ ಫಲಾನುಭವಿಗಳು ಆಯಾ ಹೋಬಳಿ ಸಮಾವೇಶದಲ್ಲಿ ಪಾಲ್ಗೊಂಡು ಸಮಸ್ಯೆಗಳೇನಾದರೂ ಇದ್ದಲ್ಲಿ ಪರಿಹರಿಸಿಕೊಳ್ಳಲು ಅವಕಾಶವಿದೆ. ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಬೀದಿನಾಟಕಗಳು ಕೂಡ ಪ್ರದರ್ಶನಗೊಳ್ಳಲಿವೆ ಎಂದು ತಹಸೀಲ್ದಾರ ಎಸ್. ರೇಣುಕಮ್ಮ ತಿಳಿಸಿದರು.