ಸಾರಾಂಶ
ಕೊಪ್ಪಳ:
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ್ಯವಿವಾಹ ತಡೆಯುವ ಜತೆಗೆ ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿಸಲು ಸಂಕಲ್ಪ ತೊಟ್ಟಿರುವ ಜಿಲ್ಲಾಡಳಿತ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಬಾಲ್ಯವಿವಾಹ ತಡೆ ಕಾವಲು ಪಡೆ ರಚಿಸಿದೆ.ಗಂಗಾವತಿ ಉಪನೋಂದಣಾಧಿಕಾರಿ ಕಚೇರಿಯಲ್ಲಿಯೇ ಬಾಲ್ಯವಿವಾಹ ನೋಂದಣಿಯಾಗಿರುವ ಪ್ರಕರಣ ಸೇರಿದಂತೆ ವಿವಿಧೆಡೆ ಬಾಲ್ಯವಿವಾಹ ಮತ್ತು ಬಾಲ್ಯ ಭಿಕ್ಷಾಟನೆ ಪ್ರಕರಣಗಳ ಮೇಲೆ ವಿಶೇಷ ಗಮನ ಹರಿಸಿರುವ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಈಗ ಖಡಕ್ ಕ್ರಮಕ್ಕೆ ಮುಂದಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಕಾವಲು ಸಮಿತಿ:ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಬಾಲ್ಯವಿವಾಹ ತಡೆ ಕಾವಲು ಸಮಿತಿಯನ್ನು ಪಂಚಾಯಿತಿ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಒಳಗೊಂಡು ರಚಿಸಲಾಗಿದೆ. ಈ ಪಡೆ ಹಳ್ಳಿಯಲ್ಲಿ ಬಾಲ್ಯವಿವಾಹದ ಕುರಿತು ಜಾಗೃತಿ ಮೂಡಿಸಲಿದೆ. ಈಗಾಗಲೇ ಜಾಗೃತಿ ಆರಂಭವಾಗಿದ್ದು ಮಕ್ಕಳೊಂದಿಗೆ ಜಾಥಾ ಮಾಡಲಾಗುತ್ತಿದೆ. ಬಾಲ್ಯವಿವಾಹ ಕುರಿತು ಮಾಹಿತಿ ನೀಡಲು ಮಕ್ಕಳ ಸಹಾಯವಾಣಿಗೆ ಕರೆ ಮಾಡುವಂತೆಯೂ ತಿಳಿಸಲಾಗಿದೆ. ನ.14ರಂದು ನಡೆಯುವ ಮಕ್ಕಳ ದಿನಾಚರಣೆ ಕಾರ್ಯಕ್ರಮದ ವೇಳೆಗೆ ಜಾಗೃತಿ ಪೂರ್ಣಗೊಳಿಸಿ, ಬಾಲ್ಯವಿವಾಹ ನಡೆಯದಂತೆ ಮುನ್ನಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಇನ್ಮುಂದೆ ಬಾಲ್ಯವಿವಾಹ ಆಗದಂತೆ ನೋಡಿಕೊಳ್ಳುವ ಹೊಣೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಗೆ ನೀಡಿರುವುದು ಅಲ್ಲದೆ ಈಗ ಗ್ರಾಮ ಪಂಚಾಯಿತಿಗೂ ಜವಾಬ್ದಾರಿ ವಹಿಸಲಾಗಿದೆ.ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆದು, ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ಕಾವಲು ಸಮಿತಿ ರಚಿಸಿದ್ದು ಜಾಗೃತಿ ಮೂಡಿಸಲಾಗುತ್ತಿದೆ. ಈ ದಿಸೆಯಲ್ಲಿ ನಾನಾ ಪ್ರಯತ್ನಗಳು ನಡೆದಿವೆ.ಮಹಾಂತೇಶ ಪೂಜಾರ ಮಕ್ಕಳ ರಕ್ಷಣಾ ಘಟಕಾಧಿಕಾರಿ