ಹಾನಗಲ್ಲ ತಾಲೂಕಿನಲ್ಲಿ ಗುರುಗಳು ಬಂದರು ಗುರುವಾರ ಮನೆಗೆ ಕಾರ್ಯಕ್ರಮ ರೂಪಿಸಿ ಫಲಿತಾಂಶದ ಯಶಸ್ಸಿಗೆ ತಾಲೂಕಿನ 71 ಪ್ರೌಢಶಾಲೆಗಳ ಶಿಕ್ಷಕರು ಸಜ್ಜುಗೊಂಡಿದ್ದಾರೆ.
ಮಾರುತಿ ಶಿಡ್ಲಾಪೂರ
ಹಾನಗಲ್ಲ:ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಿಸಿ ಶೇ. ನೂರರಷ್ಟು ಫಲಿತಾಂಶಕ್ಕೆ ಸರ್ಕಾರದ ಆದೇಶಗಳು, ಜನಪ್ರತಿನಿಧಿಗಳ ಕೋರಿಕೆಗಳು, ಮೇಲಧಿಕಾರಿಗಳ ನಿತ್ಯ ನಿರಂತರ ಸಭೆ ಸಮಾರಂಭಗಳ ಪರಿಣಾಮವಾಗಿ ಹತ್ತು ಹಲವು ರೀತಿಯಲ್ಲಿ ಫಲಿತಾಂಶ ಸುಧಾರಣೆಗೆ ಯತ್ನ ಶಿಕ್ಷಕರಿಂದ ನಡೆಯುತ್ತಿರುವ ಬೆನ್ನಲ್ಲೇ, ಹಾನಗಲ್ಲ ತಾಲೂಕಿನಲ್ಲಿ ಗುರುಗಳು ಬಂದರು ಗುರುವಾರ ಮನೆಗೆ ಕಾರ್ಯಕ್ರಮ ರೂಪಿಸಿ ಫಲಿತಾಂಶದ ಯಶಸ್ಸಿಗೆ ತಾಲೂಕಿನ 71 ಪ್ರೌಢಶಾಲೆಗಳ ಶಿಕ್ಷಕರು ಸಜ್ಜುಗೊಂಡಿದ್ದಾರೆ.ಹಾನಗಲ್ಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರದಲ್ಲಿ, ಪ್ರತಿ ಗುರುವಾರ ಎಲ್ಲ ಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ತೆರಳಿ, ಪಾಲಕರು ಪೋಷಕರನ್ನು ಭೇಟಿ ಮಾಡಿ, ವಿದ್ಯಾರ್ಥಿಗಳ ಮನೆ ಅಭ್ಯಾಸದ ಕ್ರಮದ ಕುರಿತು ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿ, ಮಕ್ಕಳ ಓದಿಗೆ ಸಹಕಾರಿಯಾಗುವ ಕ್ರಮಕ್ಕೆ ಮುಂದಾಗುತ್ತಿದ್ದಾರೆ.ಕಳೆದ ವರ್ಷ ಈ ಕ್ರಮದಿಂದಾಗಿ ಉತ್ತಮ ಫಲಿತಾಂಶ ಸಾಧ್ಯವಾಗಿದ್ದು, ಇದೇ ಕ್ರಮವನ್ನು ಈ ಬಾರಿಯೂ ಅನುಸರಿಸುವ ಇಚ್ಛಾಶಕ್ತಿಗೆ ತಾಲೂಕಿನ ಶಿಕ್ಷಕರು ಮುಂದಾಗುತ್ತಿದ್ದಾರೆ. ಈಗಾಗಲೇ ಬೆಳ್ಳಂಬೆಳಗ್ಗೆ ಮಕ್ಕಳ ಪಾಲಕರಿಗೆ ಫೋನಾಯಿಸಿ ಮಕ್ಕಳು ಬೆಳಗಿನ ಜಾವ ಓದಿಗೆ ಪ್ರೋತ್ಸಾಹಿಸಲು ಮುಂದಾಗುತ್ತಿದ್ದಾರೆ. ಶಾಲೆಗಳಲ್ಲಿಯೂ ಆರಂಭಕ್ಕೂ ಮುನ್ನ ಹಾಗೂ ಶಾಲಾ ಅವಧಿಯ ನಂತರವೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ವರ್ಗಗಳಂತೂ ನಿತ್ಯ ನಿರಂತರ ಇದ್ದೇ ಇವೆ. ಆದರೆ ಶೇ. ನೂರು ಫಲಿತಾಂಶಕ್ಕೆ ಈ ಬಾರಿ ಹಾನಗಲ್ಲ ತಾಲೂಕು ಭಾಜನವಾಗಬೇಕು ಎಂಬ ಗುರಿ ಹಾನಗಲ್ಲ ತಾಲೂಕಿನ ಪ್ರೌಢಶಾಲಾ ಶಿಕ್ಷಕರದ್ದಾಗಿದೆ.ಈ ಕುರಿತು ವಿವರಣೆ ನೀಡಿದ ತಾಲೂಕು ಶಿಕ್ಷಣಾಧಿಕಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್.ಈ. ನರೇಗಲ್ಲ, ಶಿಕ್ಷಕರು ಗುಂಪು ಗುಂಪಾಗಿ ತಕ್ಷಣ ವಿದ್ಯಾರ್ಥಿಗಳ ಮನೆಗೆ ಹೋಗುತ್ತಿದ್ದುದರಿಂದ ಮಕ್ಕಳು ಜಾಗೃತರಾಗಿ ಓದಿಗೆ ಒತ್ತು ನೀಡಿದ್ದಾರೆ. ಇದರಿಂದ ಪಾಲಕರು ಕೂಡ ಜಾಗ್ರತರಾಗುತ್ತಾರೆ. ಮನೆಗಳಲ್ಲಿ ಟಿವಿ, ಮೊಬೈಲ್‌ನಿಂದ ದೂರವಿಡಲು ಸೂಚನೆ ನೀಡುತ್ತೇವೆ. ಇದು ಒಳ್ಳೆಯ ಪರಿಣಾಮ ನೀಡಬಲ್ಲದು. ಎಸ್‌ಎಸ್‌ಎಲ್‌ಸಿ ಮಾತ್ರವಲ್ಲ, ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳೂ ಓದಿಗೆ ಮುಂದಾಗುತ್ತಿದ್ದಾರೆ. ಇಂತಹ ಇನ್ನೂ ಹಲವು ಪ್ರಯೋಗಗಳು ಆಯಾ ಶಾಲೆಗಳಲ್ಲಿ ನಡೆಯುತ್ತಿವೆ. ಶಿಕ್ಷಕರ ಪರಿಶ್ರಮಕ್ಕೆ ಮಕ್ಕಳು, ಪಾಲಕ ಪೋಷಕರು ಸಹಕಾರ ನೀಡಬೇಕು ಎನ್ನುತ್ತಾರೆ.ಇನ್ನೊಂದೆಡೆಗೆ ಪ್ರತಿ ವರ್ಷ ಕೇವಲ ಎಸ್ಸೆಸ್ಸೆಲ್ಸಿ ವರ್ಗದಲ್ಲಿ ಓದುತ್ತಿರುವ ಮಕ್ಕಳ ಮೇಲೆಯೇ ಇಂತಹ ಒತ್ತಡದ ಮೇಲೆ ಒತ್ತಡ ಹಾಕುವ ಬದಲು, ಹಿಂದಿನ ವರ್ಗಗಳಲ್ಲಿಯೇ ಈ ಮಕ್ಕಳಿಗೆ ಇಂತಹ ಅಧ್ಯಯನದ ಪ್ರಯೋಗ, ಕಾಳಜಿ, ಮುಂದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು ಪಾಠ-ಪ್ರವಚನಗಳು ನಡೆಯಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಕಾಲಿಕವಾಗಿ ಶಿಕ್ಷಕರನ್ನೂ ಒದಗಿಸಬೇಕು. ಶಿಕ್ಷಕರಿಗೆ ಪಾಠದ ಜವಾಬ್ದಾರಿಯ ನಡುವೆ ಇತರ ಕೆಲಸಗಳಿಗೆ ವಿನಾಯಿತಿ ನೀಡಬೇಕು. ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಓದು, ಕಡ್ಡಾಯವಾಗಿ ಪರೀಕ್ಷೆ ಆಧಾರಿತ ಫಲಿತಾಂಶದ ಅರಿವು ಮೂಡಿಸಬೇಕು. ಶಾಲೆಗೆ ಬಾರದ ಮಕ್ಕಳು, ಕೇವಲ ನೆಪಕ್ಕೆ ಪರೀಕ್ಷೆ ಮಾಡಿ ಪಾಸು ಮಾಡುವ ಸಂದರ್ಭಗಳಿಂದ ಮುಂದಿನ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವಾಗ ಮಕ್ಕಳು ಶಿಕ್ಷಕರ ಶ್ರಮಕ್ಕೆ ಸ್ಪಂದಿಸಲಾರದಂತಾಗುವ ಸಂದರ್ಭಗಳಿವೆ. ಈಗಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಕಲ್ಪನೆಯನ್ನು ಮಕ್ಕಳಿಗೆ ನೀಡಬೇಕು ಎಂಬ ಅಭಿಪ್ರಾಯ ಪಾಲಕರು ಹಾಗೂ ಶಿಕ್ಷಕರಿಂದಲೂ ಕೇಳಿ ಬಂದಿದೆ.ಕಳೆದ ವರ್ಷ ಹಾನಗಲ್ಲ ತಾಲೂಕಿನಲ್ಲಿ ಗುರುವಾರ ಗುರುಗಳು ಬಂದರು ಮನೆಗೆ ಎನ್ನುವ ಯೋಜನೆ ಮೂಲಕ ಶಿಕ್ಷಕರು ಬಹಳಷ್ಟು ಪರಿಶ್ರಮಪಟ್ಟು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಪಾಲಕರ ಮೇಲೆ ಪ್ರಭಾವ ಬೀರಿ ಫಲಿತಾಂಶ ಸುಧಾರಣೆಗೆ ಶ್ರಮಿಸಿದ್ದಾರೆ. ಈ ಬಾರಿಯೂ ಇದನ್ನು ಆರಂಭಿಸುತ್ತಿದ್ದೇವೆ. ಶಿಕ್ಷಕರ ಪರಿಶ್ರಮ ಸಾರ್ಥಕವಾಗುವಲ್ಲಿ ಪಾಲಕರ ಕಾಳಜಿಯೂ ಇದೆ. ಮನೆಯಲ್ಲಿ ಮಕ್ಕಳು ಓದಿನತ್ತ ಗಮನಕೊಡಲು ಪ್ರೇರಣೆಯಾಗಬೇಕು. ಶಾಲೆ ಹಾಗೂ ಮನೆಗಳಲ್ಲಿಯೂ ಮಕ್ಕಳ ಓದಿಗೆ ಕಾಳಜಿವಹಿಸಿದರೆ ನಿಶ್ಚಿತವಾಗಿಯೂ ಈ ಬಾರಿ ಹಾನಗಲ್ಲ ತಾಲೂಕು ಶೇ. 100 ಫಲಿತಾಂಶಕ್ಕೆ ಸಾಕ್ಷಿಯಾಗಬಲ್ಲದು ಎಂದು ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಆರ್.ವಿ. ಚಿನ್ನಿಕಟ್ಟಿ ಹೇಳಿದರು.