ಪಾಲಕರ ವಿರೋಧದ ನಡುವೆಯೂ ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯ ಶಾನವಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶೌಚಾಲಯ ಕಟ್ಟಡ ಉದ್ಘಾಟನೆ ನಡೆದಿದ್ದು, ಪಾಲಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಗುತ್ತಿಗೆದಾರರ ನಡುವೆ ವಾಗ್ವಾದ ನಡೆಯಿತು.
ಪಾಲಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಗುತ್ತಿಗೆದಾರರ ನಡುವೆ ವಾಗ್ವಾದ
ಕನ್ನಡಪ್ರಭ ವಾರ್ತೆ ಮುಂಡಗೋಡಪಾಲಕರ ವಿರೋಧದ ನಡುವೆಯೂ ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯ ಶಾನವಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶೌಚಾಲಯ ಕಟ್ಟಡ ಉದ್ಘಾಟನೆ ನಡೆದಿದ್ದು, ಪಾಲಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಗುತ್ತಿಗೆದಾರರ ನಡುವೆ ವಾಗ್ವಾದ ನಡೆಯಿತು.
ಸುಮಾರು ₹೫ ಲಕ್ಷ ವೆಚ್ಚದಲ್ಲಿ ಶಾಲಾ ಮಕ್ಕಳಿಗಾಗಿ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಉದ್ಘಾಟನೆಗೆ ಸಿದ್ದಗೊಳಿಸಲಾಗಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ಪಾಲಕರು ಸರ್ಕಾರದ ನಿಯಮದಂತೆ ಶಿಷ್ಟಾಚಾರದ ಪಾಲಿಸದೆ ಶಾಲಾಭಿವೃದ್ಥ್ಭಿ ಸಮಿತಿ ಅಧ್ಯಕ್ಷರು ತಮಗೆ ಬೇಕಾದವರನ್ನು ಕರೆದುಕೊಂಡು ತಮ್ಮ ಮನಬಂದಂತೆ ಕಟ್ಟಡ ಉದ್ಘಾಟಿಸುತ್ತಿದ್ದು, ಇದಕ್ಕೆ ತಮ್ಮ ವಿರೋಧವಿದೆ. ಈ ವಿಷಯವನ್ನು ಗ್ರಾಪಂ ಅಧ್ಯಕ್ಷರ ಗಮನಕ್ಕೂ ತರಲಾಗಿಲ್ಲ. ಅಲ್ಲದೇ ಕಟ್ಟಡದ ಕಾಮಗಾರಿ ಗುಣಮಟ್ಟವಾಗಿಲ್ಲ. ಹಾಗಾಗಿ ಉದ್ಘಾಟನೆ ಮಾಡದಂತೆ ತಡೆಯಲಾಯಿತಾದರೂ, ಸಾಕಷ್ಟು ವಿರೋಧದ ನಡುವೆಯೂ ಗ್ರಾಪಂ ಸದಸ್ಯರಿಂದ ಉದ್ಘಾಟನೆ ಮಾಡಲಾಯಿತು.ಘಟನೆ ವಿವರ:ಕೆಲ ದಿನಗಳ ಹಿಂದೆಯೇ ಶಿಷ್ಟಾಚಾರ ಉಲ್ಲಂಘಿಸಿ ನಾಮಫಲಕ ಅಳವಡಿಸಿ ಶೌಚಾಲಯ ಉದ್ಘಾಟನೆಗೆ ಸಿದ್ದಗೊಳಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಬಹಿಷ್ಕರಿಸಿದ್ದರು. ಬಳಿಕ ಬಿಇಒ ಶಾಲೆಗೆ ಭೇಟಿ ನೀಡಿ ಪಾಲಕರೊಂದಿಗೆ ಸಭೆ ನಡೆಸಿದರು. ಈ ಸಂದರ್ಭ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರನ್ನು ಬದಲಾಯಿಸುವಂತೆ ಪಟ್ಟು ಹಿಡಿದರು. ಈ ಹಿನ್ನೆಲೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನಾಗರಾಜ ಗಜಾನನ ಮರಾಠೆ ಅವರನ್ನು ಬದಲಾಯಿಸಿ ಬೇರೆಯವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಗ್ರಾಪಂ ಅಧಿಕಾರಿಗಳು ಹಾಗೂ ನ್ಯಾಯ ಸಮಿತಿ ಅಧ್ಯಕ್ಷರು, ಪಾಲಕ-ಪೋಷಕರ ಸಭೆ ಕರೆದು ನಾಮಫಲಕದಲ್ಲಿ ಶಿಷ್ಟಾಚಾರದಂತೆ ಶಾಸಕರು, ಗ್ರಾಪಂ ಅಧ್ಯಕ್ಷರ ಹಾಗೂ ಶಾಲಾಭಿವೃದ್ದಿ ಸಮಿತಿ ಅಧ್ಯರು ಮತ್ತು ಇತರರ ಹೆಸರು ಹಾಕಿ ನಾಮಫಲಕ ತಯಾರಿಸಿ ಉದ್ಘಾಟನೆ ಮಾಡುವಂತೆ ಸೂಚಿಸಲಾಗಿತ್ತು. ಬಳಿಕ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಸಲಾರಂಭಿಸಿದರು. ಇದಾದ ೨-೩ ದಿನದೊಳಗೆ ರಾಜಕೀಯ ಪ್ರಭಾವ ಬಳಸಿ ಮತ್ತೆ ಮೊದಲಿನವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮುಂದುವರೆಸಲಾಗಿದೆ.
ಶನಿವಾರ ಆ ನಾಮಫಲಕವನ್ನು ತೆರವುಗೊಳಿಸದೆ ಪಾಲಕರ ಗಮನಕ್ಕೆ ತರದೆ ಉದ್ಘಾಟನೆಗೆ ಮುಂದಾದಾಗ ಮದ್ಯ ಪ್ರವೇಶಿಸಿದ ಪಾಲಕರು, ಉದ್ಘಾಟನೆಗೆ ತೀವ್ರ ವಿರೋಧ ಮಾಡಿದರು. ಇದಕ್ಕೆ ಜಗ್ಗದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಹಾಗೂ ಶಿಕ್ಷಕರು ಕಟ್ಟಡ ಉದ್ಘಾಟಿಸಿದರು. ಇದರಿಂದ ಎಸ್.ಡಿ.ಎಮ್.ಸಿ ಅಧ್ಯಕ್ಷ ನಾಗರಾಜ ಗಜಾನನ ಮರಾಠೆ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಪರಮೇಶ್ವರ ನಾಯ್ಕ, ನಾಗರಾಜ ಭಟ್, ವಿನಾಯಕ ನಾಯ್ಕ, ಗಣಪತಿ ಕಬ್ಬೂರ, ಶಣ್ಮುಖ ಕೊಪ್ಪದ ಸೇರಿ ಹಲವು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಶಾಲೆಯ ಸುತ್ತ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಸಮಾಧಾನಪಡಿಸಿದರು.